ಕಳೆಗುಂದಿದ ದನಗಳ ಜಾತ್ರೆ ಸಂಭ್ರಮ

7
ಜನ-ಜಾನುವಾರುಗಳ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ

ಕಳೆಗುಂದಿದ ದನಗಳ ಜಾತ್ರೆ ಸಂಭ್ರಮ

Published:
Updated:
ಕಳೆಗುಂದಿದ ದನಗಳ ಜಾತ್ರೆ ಸಂಭ್ರಮ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ನಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ಈ ವರ್ಷ ಕಳೆಗುಂದಿದೆ.

ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆ ಬಳಿಕ ರಾಸುಗಳನ್ನು ಈ ಜಾತ್ರೆಗೆ ವ್ಯಾಪಾರಕ್ಕಾಗಿ ತರುವ ರೈತರು, ವ್ಯಾಪಾರ ಮಾಡಿ, ತಮಗೆ ಬೇಕಾದ ಉತ್ತಮ ರಾಸುಗಳನ್ನು ಕೊಂಡುಕೊಳ್ಳುವುದು ಇಲ್ಲಿನ ವಾಡಿಕೆ.

ತಾಲ್ಲೂಕಿನ ಜನ-ಜಾನುವಾರುಗಳ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯುದ್ದಕ್ಕೂ ದನಗಳನ್ನು ಕಟ್ಟಿ ವ್ಯಾಪಾರ ಮಾಡಲಾಗುತ್ತಿತ್ತು.

ಈ ವರ್ಷ ದೇವಾಲಯದ ಮುಂಭಾಗ, ಬಲಭಾಗ ಮತ್ತು ಎಡಭಾಗದ ವಿಶಾಲ ಪ್ರದೇಶ ಸೇರಿದಂತೆ ಅಲ್ಲಲ್ಲಿ ಗುಂಪುಗುಂಪಾಗಿ ಎತ್ತು, ಹಸುಗಳನ್ನು ಕಟ್ಟಲಾಗಿದೆ. ಕೊಳ್ಳುವ ಭರಾಟೆಯೂ ತಕ್ಕಮಟ್ಟಿಗೆ ಸಾಗಿದೆ.

ದನಗಳ ಜಾತ್ರೆಯಲ್ಲಿ ಚನ್ನಪಟ್ಟಣ, ರಾಮನಗರ, ಕನಕಪುರ, ಮದ್ದೂರು, ಕುಣಿಗಲ್, ತುಮಕೂರು, ಮಾಗಡಿ, ಆನೇಕಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ ತಾಲ್ಲೂಕು ಸೇರಿದಂತೆ ಹಲವಾರು ತಾಲ್ಲೂಕುಗಳ ಜಾನುವಾರು ಬಂದಿವೆ.

ಎರಡು ವರ್ಷ ಜಾತ್ರೆ ಇರಲಿಲ್ಲ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿದ್ದ ಕಾಲುಬಾಯಿ ಜ್ವರದ ಕಾರಣ ಜಿಲ್ಲಾಡಳಿತ ಕೆಂಗಲ್ ಜಾತ್ರೆಯಲ್ಲಿ ದನಗಳ ವ್ಯಾಪಾರವನ್ನು 2013, 2014ರಲ್ಲಿ ನಿಷೇಧಿಸಿತ್ತು. ಜಿಲ್ಲೆಯಲ್ಲಿ ಹಲವಾರುಗಳು ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದ ಕಾರಣದಿಂದ ಹಾಗೂ ರೋಗ  ಹೆಚ್ಚಾಗುವ ಭೀತಿಯಿಂದ ಜಾನುವಾರು ಜಾತ್ರೆಯನ್ನು ನಿಷೇಧಿಸಲಾಗಿತ್ತು.

ನಿಷೇಧದ ನಡುವೆಯೂ ರೈತರು ಅಲ್ಲಲ್ಲಿ ಜಾನುವಾರುಗಳನ್ನು ಕಟ್ಟಿ ವ್ಯಾಪಾರದಲ್ಲಿ ತೊಡಗಿದ್ದರು. ಅಧಿಕಾರಿಗಳು ಹಾಗೂ ಪೊಲೀಸರು ರೈತರ ಮನವೊಲಿಸಿ ತೆರವುಗೊಳಿಸಿದ್ದರು. ನಿಷೇಧಗೊಂಡಿದ್ದ ದನಗಳ ಜಾತ್ರೆಯು ಮೂರು ವರ್ಷಗಳಿಂದ ನಡೆಯುತ್ತಿದೆ.

ಕೃಷಿಗೆ ರಾಸು: ತಾಲ್ಲೂಕಿನಲ್ಲಿ ಈ ವರ್ಷ ಹಲವಾರು ಕೆರೆಗಳು ತುಂಬಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸುವ ಹಿನ್ನೆಲೆಯಲ್ಲಿ ರಾಸುಗಳ ಖರೀದಿ ಸ್ಥಳೀಯ ರೈತರಿಂದಲೇ ಜೋರಾಗಿದೆ.

ಸತತ ಬರದ ಹಿನ್ನಲೆಯಲ್ಲಿ ರಾಸುಗಳ ಪೋಷಣೆ ಸಾಧ್ಯವಾಗದೆ ರೈತರು ತಮ್ಮ ರಾಸುಗಳನ್ನು ಮಾರಿಕೊಂಡಿದ್ದರು. ಇದೀಗ ಮತ್ತೆ ಖರೀದಿಸಲು ಮುಂದಾಗಿದ್ದಾರೆ ಎಂಬುದು ರೈತ ಪುಟ್ಟೇಗೌಡ ಅವರ ಅಭಿಪ್ರಾಯವಾಗಿದೆ.

ಯಂತ್ರಗಳ ಮೂಲಕ ಕೃಷಿ ಸಾಧ್ಯವಾಗುತ್ತಿಲ್ಲ. ಹಿಂದಿನಂತೆ ರಾಸುಗಳ ಮೂಲಕ ಕೃಷಿ ಕಾರ್ಯ ಆರಂಭಿಸುತ್ತೇವೆ. ರಾಸುಗಳ ಜೊತೆಯಲ್ಲಿ ಕೃಷಿ ಕಾರ್ಯ ನಡೆಸುವುದೇ ಮನಸ್ಸಿಗೆ ಹಿತ ನೀಡುತ್ತದೆ ಎಂದು ರೈತ ರಾಮಣ್ಣ ಪ್ರತಿಕ್ರಿಯಿಸಿದರು.

ಜಾತ್ರೆಯಲ್ಲಿ ತಮಗೆ ಬೇಕಾದ ಜಾನುವಾರು ಕೊಂಡುಕೊಳ್ಳುವ ಅವಕಾಶ ಇರುವುದರಿಂದ ವ್ಯಾಪಾರಸ್ಥರು ತಂಡತಂಡವಾಗಿ ಬರುತ್ತಾರೆ. ಇಲ್ಲಿ ವ್ಯಾಪಾರ ಮಾಡುವುದು ನಿಜಕ್ಕೂ ಒಳ್ಳೆಯ ಅನುಭವ ನೀಡುತ್ತದೆ ಎಂಬುದು ರೈತ ತಿಮ್ಮೇಗೌಡರ ಅಭಿಪ್ರಾಯವಾಗಿದೆ.

***

₹4 ಲಕ್ಷ ಬೆಲೆ

ಒಂಟಿ ಹಸುಗಳಿಗೆ ₹ 30 ಸಾವಿರದಿಂದ ₹ 40 ಸಾವಿರ, ಜೋಡಿಯಾಗುವ ಒಂಟಿ ಕರುಗಳಿಗೆ ₹ 40 ಸಾವಿರದಿಂದ ₹ 50 ಸಾವಿರ, ಜೋಡಿ ಎತ್ತುಗಳಿಗೆ ₹ 60 ಸಾವಿರದಿಂದ ₹ 4 ಲಕ್ಷದವರೆಗೆ ಬೆಲೆ ಇದ್ದು, ಇಷ್ಟಿದ್ದರೂ ವ್ಯಾಪಾರಸ್ಥರು ಜಾನುವಾರು ಕೊಂಡುಕೊಳ್ಳಲು ಮುಂದಾಗುತ್ತಾರೆ ಎಂದು ರೈತರು ತಿಳಿಸಿದರು.

ಅತ್ಯುತ್ತಮ ಜೋಡಿ ಎತ್ತುಗಳನ್ನು ಜಾತ್ರೆಗೆ ರೈತರು ತಮಟೆ ವಾದ್ಯಗಳು, ಪೂಜಾಕುಣಿತದೊಂದಿಗೆ ಕರೆ ತರುವ ವಾಡಿಕೆಯೂ ಇಲ್ಲಿದೆ. ಕೆಲವರು ಪೆಂಡಾಲ್ ಹಾಕಿಸಿ ಎತ್ತುಗಳನ್ನು ಅದರ ಕೆಳಗೆ ಕಟ್ಟಿ, ವಿಶೇಷ ಆಕರ್ಷಣೆ ಮಾಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry