ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೌಕರರ ಸಮಾನ ವೇತನ; ಮುಖ್ಯಮಂತ್ರಿಗೆ ಮನವಿ

Last Updated 18 ಜನವರಿ 2018, 12:20 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ನೀರು ಪೂರೈಕೆ ಸಿಬ್ಬಂದಿ ಮತ್ತು ಪಾಲಿಕೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ಸಮಾನ ವೇತನ ನೀಡಬೇಕು ಎಂದು ಪಾಲಿಕೆಯ ಸದಸ್ಯ ಪ್ರೆಸ್‌ ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಾಯಂ ನೌಕರರು ಮಾಡುವಷ್ಟೇ ಕೆಲಸವನ್ನು ಹಾಗೂ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಹೊರಗುತ್ತಿಗೆ ಸಿಬ್ಬಂದಿ ಮಾಡುತ್ತಿದ್ದಾರೆ. ಇವರಿಲ್ಲದಿದ್ದರೆ ಪಾಲಿಕೆಯ ಕಾರ್ಯವೇ ಸ್ಥಗಿತಗೊಳ್ಳುವಷ್ಟರ ಮಟ್ಟಿಗೆ ಇವರ ಸೇವೆ ಪಾಲಿಕೆಗೆ ಅನಿವಾರ್ಯವಾಗಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಹಣವನ್ನು ಮೀಸಲಿಡುವ ಮೂಲಕ ಹೊರಗುತ್ತಿಗೆ ನೌಕರರಿಗೆ ಸಮಾನ ವೇತನ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗುತ್ತಿಗೆ ನೌಕರರು ಸೇವಾಭದ್ರತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೊರಗುತ್ತಿಗೆ ಪೌರಕಾರ್ಮಿಕರು ಪ್ರತಿನಿತ್ಯ ಮುಂಜಾನೆ 5.50ಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ, ಹಾಜರಾತಿ ದಾಖಲಿಸಬೇಕು. ಇಲ್ಲದಿದ್ದರೆ ಅವರಿಗೆ ಅವರಿಗೆ ಅಂದಿನ ವೇತನ ಸಿಗುವುದಿಲ್ಲ. ಆದ್ದರಿಂದ ಶ್ರಮಜೀವಿಗಳಾದ ಹೊರಗುತ್ತಿಗೆ ಪೌರಕಾರ್ಮಿಕರು, ವಾಲ್ವ್‌ಮನ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳಿಗೆ ಮಾನವೀಯತೆ ದೃಷ್ಟಿಯಿಂದ ಸಮಾನ ಕೆಲಸಕ್ಕೆ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಬ್ಬಂದಿಯನ್ನು ಗುತ್ತಿಗೆದಾರರಿಂದ ಮುಕ್ತಗೊಳಿಸಿ, ಇವರ ಬ್ಯಾಂಕ್‌ ಖಾತೆಗೆ ಪಾಲಿಕೆಯಿಂದಲೇ ನೇರವಾಗಿ ವೇತನ ಪಾವತಿ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಮತ್ತು ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT