ಇಳಿ ವಯಸ್ಸಲ್ಲೂ ಹರೆಯದ ಹುಮ್ಮಸ್ಸು...

7
ಸಿದ್ಧೇಶ್ವರರ ಸಂಕ್ರಮಣ ಜಾತ್ರೆ: ಭಾರ ಎತ್ತುವ ಸ್ಪರ್ಧೆ, ಬಲಭೀಮರ ನಡುವಿನ ಪೈಪೋಟಿ; ಸಾಹಸ ಮೆರೆದ ಸಾಹಸಿಗಳು

ಇಳಿ ವಯಸ್ಸಲ್ಲೂ ಹರೆಯದ ಹುಮ್ಮಸ್ಸು...

Published:
Updated:
ಇಳಿ ವಯಸ್ಸಲ್ಲೂ ಹರೆಯದ ಹುಮ್ಮಸ್ಸು...

ವಿಜಯಪುರ: ನಗರದ ಆರಾಧ್ಯ ದೈವ ಸಿದ್ಧೇಶ್ವರರ ಸಂಕ್ರಮಣದ ಜಾತ್ರೆ, ನಮ್ಮೂರ ಜಾತ್ರೆಯ ವಿಶೇಷಗಳಲ್ಲಿ ‘ಭಾರ ಎತ್ತುವ ಸ್ಪರ್ಧೆ’ಯೂ ಒಂದು.

ಸಿದ್ಧೇಶ್ವರ ಗುಡಿ ಆವರಣದಲ್ಲಿರುವ ಸಿದ್ಧಸಿರಿ ಸೌಹಾರ್ದ ಬ್ಯಾಂಕ್‌ ಮುಂಭಾಗ ಬುಧವಾರ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಗ್ರಾಮೀಣ ಪರಿಸರದ ಹಳ್ಳಿ ಹೈದರು, ಭಾರದ ವಸ್ತುಗಳನ್ನು ಸುಲಲಿತವಾಗಿ ಎತ್ತಿ ಹಿಡಿಯುವ ಮೂಲಕ ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು.

ವಿವಿಧ ವಿಭಾಗದ ಭಾರ ಎತ್ತುವ ಸ್ಪರ್ಧೆಗಳು ಆರಂಭಗೊಂಡ ಕ್ಷಣದಿಂದ ಮುಕ್ತಾಯದ ಹಂತದವರೆಗೂ ಸ್ಪರ್ಧೆ ನಡೆಯುತ್ತಿದ್ದ ಸುತ್ತಮುತ್ತಲಿನ ಸ್ಥಳದಲ್ಲಿ ಕಾಲಿಡಲು ಅವಕಾಶವಿರಲಿಲ್ಲ. ಸ್ಪರ್ಧೆಗಳನ್ನು ವೀಕ್ಷಿಸಲು ನೆರೆದಿದ್ದ ಜನರನ್ನು ನಿಯಂತ್ರಿಸುವಲ್ಲಿ ಸಮಿತಿ ಪದಾಧಿಕಾರಿಗಳು, ಪೊಲೀಸರು ಹೈರಾಣಾದರು.

ಹಿಂಭಾಗದಲ್ಲಿ ನಿಂತಿದ್ದವರು ಮುಂದೆ ನಿಂತವರ ಮೇಲೆ ಕಲ್ಲು ಎಸೆಯುವ ಮೂಲಕ ಪಕ್ಕಕ್ಕೆ ಸರಿಯು ವಂತೆ ತಾಕೀತು ಮಾಡಿದರು. ಜಾತ್ರಾ ಸಮಿತಿಯವರು ಇದನ್ನು ನಿಯಂತ್ರಿಸಲು ಎಷ್ಟೇ ಯತ್ನಿಸಿದರೂ ಫಲ ಸಿಗಲಿಲ್ಲ.

ಮೀಸೆಯಿಂದ ಕಾರ್‌ ಎಳೆದರು..!

65ರ ಹರೆಯ. ಇಳಿ ವಯಸ್ಸು. ಹದಿ ಹರೆಯದವರನ್ನು ನಾಚಿಸುವಂತೆ ತನ್ನ ಮೀಸೆಗೆ ಹಗ್ಗ ಕಟ್ಟಿಕೊಂಡು ಸ್ವಿಫ್ಟ್‌ ಕಾರನ್ನು ಎಳೆದೊಯ್ದ ಭೂಪನ ಹೆಸರು ದಿಗಂಬರಪ್ಪ ಕಕ್ಕಳಮೇಲಿ.

ಸಂಕ್ರಮಣದ ಜಾತ್ರೆಯಲ್ಲಿ ಪ್ರತಿ ವರ್ಷ ತನ್ನ ಮೀಸೆಗೆ ಹಗ್ಗ ಕಟ್ಟಿಕೊಂಡು ಸಂಗ್ರಾಣಿ ಕಲ್ಲನ್ನು ಎದೆ ಮಟ್ಟದವರೆಗೆ ಎತ್ತಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದ ಸಿದ್ಧನಾಥ ಗ್ರಾಮದ ದಿಗಂಬರಪ್ಪ ಈ ಬಾರಿ ಹೊಸ ಸಾಹಸ ಮೆರೆಯುವ ಮೂಲಕ ಅಚ್ಚರಿ ಮೂಡಿಸಿದರು. ಕಿರಾಣಾ ಬಜಾರ್‌ನಿಂದ ಸಿದ್ಧೇಶ್ವರ ಗುಡಿಯವರೆಗೆ ಕಾರನ್ನು ಎಳೆದೊಯ್ದು ನೂತನ ಸಾಹಸಗಾಥೆ ಮೂಲಕ ಮುನ್ನುಡಿ ಬರೆದರು.

ಹೂವಿನಷ್ಟೇ ಸರಾಗ...

ಸಿದ್ಧಸಿರಿ ಸೌಹಾರ್ದ ನಿಯಮಿತದ ಮುಂಭಾಗ ತಮ್ಮ ಬಲ ಪ್ರದರ್ಶನಕ್ಕೆ ಸಜ್ಜಾಗಿದ್ದ ಬಲಭೀಮರು ಕ್ವಿಂಟಲ್‌ ತೂಕದ ಕಲ್ಲು, ಉಸುಕಿನ ಚೀಲ, ಜೋಳದ ಚೀಲ, ಕಬ್ಬಿಣದ ಹಾರೆಗಳನ್ನು ಹೂವನ್ನು ಎತ್ತಿಕೊಂಡಷ್ಟೇ ಸರಾಗವಾಗಿ ಮೇಲೆತ್ತಿ ನೆರೆದಿದ್ದ ಜನಸ್ತೋಮದಿಂದ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡರು. ಭಲೇ ಭಲೇ... ಭೇಷ್‌ ಶ್ಲಾಘನೆಗೆ ಪಾತ್ರರಾದರು.

ಹೊನವಾಡ, ಗುನ್ನಾಪುರ, ಕಕ್ಕಳ ಮೇಳಿ, ಸಿದ್ಧನಾಥ, ನಾಗಠಾಣ, ತೊನಶ್ಯಾಳ, ಬುರಾಣಾಪುರ, ಯಾಳ ವಾರ, ಕೊಣ್ಣೂರ ಸೇರಿದಂತೆ ವಿವಿಧ ಭಾಗಗಳಿಂದ 110 ಸಾಹಸಿಗರು ಅಖಾಡದಲ್ಲಿ ತಮ್ಮ ಪ್ರದರ್ಶನ ನೀಡಿದರು.

ಭಾರಿ ಭಾರದ ಸಂಗ್ರಾಣಿ ಕಲ್ಲುಗಳನ್ನು ಐದು ಬಾರಿ ಎತ್ತುವ ಮೂಲಕ ಕರಿಯಪ್ಪ ಹುಬ್ಬಣ್ಣವರ, ಕ್ವಿಂಟಲ್‌ ತೂಕದ ಒತ್ತುಕಲ್ಲುಗಳನ್ನು ಏಳು ಬಾರಿ ಎತ್ತುವ ಮೂಲಕ ಮಲ್ಲು ತಳವಾರ, ತಲೆ ಕೂದಲುಗಳ ಮೂಲಕ 140 ಕೆ.ಜಿ. ಭಾರದ ಚೀಲ ಎಳೆಯುವ ಮೂಲಕ ಹಳ್ಳಿ ಗ್ರಾಮದ ಮುತ್ತಪ್ಪ ತೆಲಗಿ, ತೊರವಿಯ ಯಮನಪ್ಪ ಪೂಜಾರಿ ಅಪ್ರತಿಮ ಸಾಹಸಗೈದರು. ಮೂರು ಕ್ವಿಂಟಲ್‌ ತೂಕದ ಉಸುಕಿನ ಚೀಲವನ್ನು ಒಂಭತ್ತು ಬಾರಿ ಮೇಲೆತ್ತಿದ ಯಲಗೂರ ಗ್ರಾಮದ ಗಂಗಾಧರ ಶಿರೂರ ಸಾಹಸಕ್ಕೆ ಜನರು ಮನಸೋತರು.

ಬಹುಮಾನ ವಿಜೇತರು

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ: 85 ಕೆ.ಜಿ. ತೂಕದ ಸಂಗ್ರಾಣಿ ಕಲ್ಲನ್ನು ಐದು ಬಾರಿ ಎತ್ತಿದ ಕರಿಯಪ್ಪ ಹಬ್ಬಣ್ಣವರ ಪ್ರಥಮ, 75 ಕೆ.ಜಿ. ತೂಕದ ಸಂಗ್ರಾಣಿ ಕಲ್ಲನ್ನು ಎರಡು ಬಾರಿ ಎತ್ತಿದ್ದ ಉಮೇಶ ಕರಗೆ ದ್ವೀತಿಯ ಸ್ಥಾನ ಲಭಿಸಿತು.

ಒತ್ತಕಲ್ಲ ಎತ್ತುವ ಸ್ಪರ್ಧೆ: ಕ್ವಿಂಟಲ್‌ ಭಾರದ ಒತ್ತಕಲ್ಲನ್ನು ಏಳು ಬಾರಿ ಎತ್ತಿದ ಮಲ್ಲು ತಳವಾರ ಪ್ರಥಮ, ಇದೇ ಒತ್ತಕಲ್ಲನ್ನು ಎರಡು ಬಾರಿ ಎತ್ತಿದ ಮಂಜು ಸಂಗೋಗಿ ದ್ವಿತೀಯ, ಒಮ್ಮೆಯಷ್ಟೇ ಮೇಲೆತ್ತಲು ಶಕ್ತರಾದ ಭೀಮಸೇನ ಮಲ್ನಾಡ ತೃತೀಯ ಸ್ಥಾನ ಪಡೆದರು.

ಗುಂಡುಕಲ್ಲು ಎತ್ತುವ ಸ್ಪರ್ಧೆ: 187 ಕೆ.ಜಿ. ತೂಕದ ಗುಂಡುಕಲ್ಲು ಎತ್ತಿದ ಶಿವಲಿಂಗಪ್ಪ ಶಿರೂರ, ಬೀರಪ್ಪ ಪೂಜಾರಿ ಪ್ರಥಮ ಸ್ಥಾನ ಹಂಚಿಕೊಂಡರು.

ಮೆಟ್ನಾದಿ ಮೇಲೆ ಭಾರ ಎತ್ತುವ ಸ್ಪರ್ಧೆ: ಮೆಟ್ನಾದಿ ಮೇಲೆ ನಿಂತು 180 ಕೆ.ಜಿ. ಭಾರ ಎತ್ತಿದ ಗೋವಿಂದ ಮಸಳಿ ಪ್ರಥಮ, ಮಲ್ಲಪ್ಪ ಕೊಂಡಗೂಳಿ ದ್ವಿತೀಯ ಸ್ಥಾನ ಪಡೆದರು.

ಮೆಟ್ನಾದಿ ಮೇಲೆ ಭಾರ ಎತ್ತುವ ಸ್ಪರ್ಧೆ (ಬಾಲಕರ ವಿಭಾಗ): ಹದಿಮೂರರ ಹರೆಯದ ಗುನ್ನಾಪುರದ ನಿಜಾನಂದ ಹಳ್ಳಿ ಮೆಟ್ನಾದಿ ಮೇಲೆ ನಿಂತು ಒಂಭತ್ತು ಬಾರಿ 85 ಕೆ.ಜಿ. ತೂಕದ ಚೀಲ ಎತ್ತುವ ಮೂಲಕ ಪ್ರಥಮ ಸ್ಥಾನ, ಎಂಟರ ಹರೆಯದ ಗಿರೆಪ್ಪ ಲೋಗಾವಿ 75 ಕೆ.ಜಿ. ತೂಕವನ್ನು ಮೆಟ್ನಾದಿ ಮೇಲೆ ನಿಂತು ಎರಡು ಬಾರಿ ಎತ್ತುವ ಮೂಲಕ ದ್ವಿತೀಯ ಹಾಗೂ ನಾಗೇಶ ಗಾಣಿಗೇರ 85 ಕೆ.ಜಿ. ಮೆಟ್ನಾದಿ ಮೇಲೆ ನಿಂತು ಎರಡು ಬಾರಿ ಭಾರ ಎತ್ತುವ ಮೂಲಕ ತೃತೀಯ ಸ್ಥಾನ ಪಡೆದರು.

75ರ ಹರೆಯದ ವಯಸ್ಸಿನ ಸಿದ್ದಪ್ಪ ಶಿವಪ್ಪ ಹಳ್ಳಿ 140 ಕೆ.ಜಿ. ತೂಕದ ಚೀಲವನ್ನು ಮೆಟ್ನಾದಿಯ ಮೇಲೆತ್ತುವ ಮೂಲಕ ಪ್ರಥಮ ಸ್ಥಾನ ಗಳಿಸಿ, ತಮ್ಮ ಸಾಹಸಗಾಥೆಯ ಓಟವನ್ನು ಈ ಬಾರಿಯೂ ಮುಂದುವರೆಸಿದರು.

ಮೀಸೆಯಿಂದ ಭಾರ ಎತ್ತುವ ಸ್ಪರ್ಧೆ: ಮೀಸೆಯಿಂದ 60 ಕೆ.ಜಿ. ತೂಕದ ಭಾರವನ್ನು ಎತ್ತುವ ಮೂಲಕ ತೋಳಮಟ್ಟಿಯ ಶಂಕ್ರೆಪ್ಪ ಭಾವಿ ಪ್ರಥಮ, 45 ಕೆ.ಜಿ. ಭಾರವನ್ನು ಮೀಸೆಯ ಮೂಲಕ ಎತ್ತುವ ಮೂಲಕ ದಿಗಂಬರಪ್ಪ ಕಕ್ಕಳಮೇಲಿ ದ್ವಿತೀಯ ಸ್ಥಾನ ಪಡೆದರು.

ಉಸುಕಿನ ಚೀಲ ಎತ್ತುವ ಸ್ಪರ್ಧೆ: 300 ಕೆ.ಜಿ. ಉಸುಕಿನ ಚೀಲವನ್ನು ಒಂಭತ್ತು ಬಾರಿ ಎತ್ತುವ ಮೂಲಕ ಗಂಗಾಧರ ಶಿರೂರ ಪ್ರಥಮ, ಎರಡು ಬಾರಿ ಎತ್ತಿದ ಪ್ರವೀಣ ಶಿವೂರ ದ್ವಿತೀಯ, ಸಿದ್ಧಪ್ಪ ಸುತಗೊಂಡ ತೃತೀಯ ಸ್ಥಾನ ಪಡೆದರು.

ತೆಕ್ಕೆ ಬಡೆದು ಭಾರ ಎತ್ತುವ ಸ್ಪರ್ಧೆ:

200 ಕೆ.ಜಿ. ಭಾರದ ಚೀಲವನ್ನು ತೆಕ್ಕೆ ಬಡೆದು ಎತ್ತುವ ಮೂಲಕ ಶಿವಲಿಂಗಪ್ಪ ಶಿವೂರ ಪ್ರಥಮ ಸ್ಥಾನ ಪಡೆದರೆ, ಚಂದ್ರಶೇಖರ ಕೊಂಡಗೂಳಿ ದ್ವಿತೀಯ ಸ್ಥಾನ ಪಡೆದರು.

ತಲೆ ಕೂದಲಿನ ಮೂಲಕ 140 ಕೆ.ಜಿ. ಭಾರದ ಚೀಲ ಎಳೆಯುವ ಮೂಲಕ ಹಳ್ಳಿ ಗ್ರಾಮದ ಮುತ್ತಪ್ಪ ತೆಲಗಿ, ತೊರವಿ ಗ್ರಾಮದ ಯಮನಪ್ಪ ಪೂಜಾರಿ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry