ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

7

ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

Published:
Updated:
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅಗಾಧ ಬೆಳವಣಿಗೆ ಕಂಡಿರುವ ಕೋರಮಂಗಲದಲ್ಲಿ ಈಗ ಮನೆ, ವಾಣಿಜ್ಯ ಕಟ್ಟಡಗಳ ಬೇಡಿಕೆ ಶರವೇಗದಲ್ಲಿ ಮುನ್ನಡೆಯುತ್ತಿದೆ. ಸಮಾಜದ ಪ್ರತಿಷ್ಠಿತ ಗಣ್ಯರು, ಐಟಿ–ಬಿಟಿ ಮಂದಿ ಹೆಚ್ಚು ವಾಸವಾಗಿರುವ ಈ ಪ್ರದೇಶ ಹೊರ ರಾಜ್ಯ, ಹೊರದೇಶದವರಿಗೆ ನೆಚ್ಚಿನ ಬಡಾವಣೆಯೂ ಹೌದು. ರಾತ್ರಿಯಾದರೆ ರಂಗೇರುವ ಕ್ಲಬ್‌ಗಳು, ಗ್ರಾಮ ಬದುಕಿನ ಪಳೆಯುಳಿಕೆ ತರಹ ಇರುವ ಕೆಲ ಹಳೇ ಬಡಾವಣೆಗಳು ಈ ಪ್ರದೇಶದ ವೈಶಿಷ್ಟ್ಯ.

ಕೋರಮಂಗಲ ಸುಮಾರು 25 ವರ್ಷದ ಹಿಂದೆ ಊಹಿಸಲು ಅಸಾಧ್ಯವಾದ ಸ್ಥಿತಿಯಲ್ಲಿತ್ತು. ಪಕ್ಕದ ಎಚ್ಎಸ್ಆರ್ ಲೇಔಟ್‌ ಅಗರ ಕೆರೆ ಅಂಗಳದ ಪ್ರದೇಶವಾಗಿತ್ತು. ಹಸಿರುನಿಂದ ಕಂಗೊಳಿಸುತ್ತಿದ್ದ ತೆಂಗಿನತೋಟ, ಗದ್ದೆಬಯಲು, ದನಕರುಗಳು, ಸಗಣಿ ಇವೆಲ್ಲಾ ಆಗ ಸಾಮಾನ್ಯವಾಗಿದ್ದವು. ಹಾಗಾಗಿ ಜನರು ಬಾಡಿಗೆಗೆ ಹೋಗಲು ಕೂಡ ಹೆದರುತ್ತಿದ್ದರು.

ಹಳೇ ಬಡಾವಣೆಗಳಾದ ಜಕ್ಕಸಂದ್ರ, ವೆಂಕಟಾಪುರ ಈಗಲೂ ಗ್ರಾಮ ಸಂಸ್ಕೃತಿ ಉಳಿಸಿಕೊಂಡಿವೆ. ಪ್ರತಿವರ್ಷ ಊರ ಜಾತ್ರೆ, ಹಬ್ಬ, ಪಲ್ಲಕ್ಕಿ ಉತ್ಸವಗಳು ನಡೆಯುತ್ತವೆ.

ರೆಡ್ಡಿ ಜನಸಂಘ ಕಾಲೇಜು, ಕೃಪಾನಿಧಿ ಮತ್ತು ಜ್ಯೋತಿ ನಿವಾಸ್ ಕಾಲೇಜು ಕೋರಮಂಗಲದಲ್ಲಿದೆ. ಕೂಗಳತೆ ದೂರದಲ್ಲಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಈ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳನ್ನು ಓದಿಸುತ್ತಿರುವ ಪೋಷಕರು ಸಮೀಪದಲ್ಲಿಯೇ ಮನೆಮಾಡಿಕೊಳ್ಳಬೇಕು ಎಂಬ ಆಸೆ ಹೊತ್ತಿದ್ದಾರೆ. ಹೀಗಾಗಿ ಬಾಡಿಗೆ ಮನೆಗಳಿಗೂ ಈ ಪ್ರದೇಶದಲ್ಲಿ ಹೆಚ್ಚು ಬೇಡಿಕೆ.ಸರ್ಜಾಪುರ ರಸ್ತೆ ಮತ್ತು ಹೊಸೂರು ರಸ್ತೆ ಪ್ರದೇಶಗಳಲ್ಲಿ ಕಳೆದ 15 ವರ್ಷದಿಂದ ಸಾಫ್ಟ್‌ವೇರ್ ಕ್ಷೇತ್ರ ಬೆಳೆಯುತ್ತಿದೆ.

ಈ ಎರಡು ಪ್ರಮುಖ ರಸ್ತೆಗಳು ಕೋರಮಂಗಲ ಮೂಲಕ ಹಾದು ಹೋಗುವುದರಿಂದ ಈ ಪ್ರದೇಶಕ್ಕೆ ಅತಿಹೆಚ್ಚು ಬೇಡಿಕೆ ಇದೆ. ಸಾಫ್ಟ್‌ವೇರ್ ದಿಗ್ಗಜ ಇನ್ಪೊಸಿಸ್, ವಿಪ್ರೊ ಮತ್ತು ಎಲೆಕ್ಟ್ರಾನಿಕ್ ಸಿಟಿ ಕೋರಮಂಗಲಕ್ಕೆ ಸಮೀಪ ಇರುವುದರಿಂದ ಉದ್ಯೋಗಕ್ಕಾಗಿ ಹೊರಗಿನಿಂದ ಬರುವ ಸಾಫ್ಟ್‌ವೇರ್ ಮಂದಿ ಇಲ್ಲಿನ ಬಾಡಿಗೆ ಮನೆ ಇಲ್ಲವೇ ಅಪಾರ್ಟ್‌ಮೆಂಟ್‌ ಆಯ್ಕೆ ಮಾಡಿಕೊಳ್ಳುವುದರಿಂದ ಇದು ದುಬಾರಿ ಪ್ರದೇಶ ಎಂಬ ಖ್ಯಾತಿಗೂ ಒಳಗಾಗಿದೆ.

ತಮಿಳುನಾಡಿನ ಹೊಸೂರಿನ ಜನರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಭಾರತದ ಸಾಫ್ಟ್‌ವೇರ್ ಮಂದಿಗೆ ಈ ಪ್ರದೇಶವೇ ಅಚ್ಚುಮೆಚ್ಚು. ಇಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷಾ ಸಂಗಮ ಇದೆ. ಈ ಪ್ರದೇಶದ ಅಭಿವೃದ್ಧಿಗೆ ಇದು ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ಸಮೀಪದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮೆಟ್ರೊ ರೈಲಿನ ಸಂಪರ್ಕ ಸಿಗುತ್ತದೆ. ಅದು ಸಾಕಾರವಾದರೆ ಈ ಭಾಗ ಇನ್ನಷ್ಟು ಬೆಳವಣಿಗೆ ಹೊಂದಲಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ವಿಶ್ಲೇಷಕರು.

ಬೆಂಗಳೂರಿನಲ್ಲಿ ಮೊದಲಿಗೆ ಮಾಲ್ ಸಂಸ್ಕೃತಿ ಪರಿಚಯವಾಗಿದ್ದು ಕೋರಮಂಗಲದಲ್ಲಿ. ಇಲ್ಲಿನ ಫೋರಂ ಮಾಲ್‌ನಲ್ಲಿರುವ ಶಾಪಿಂಗ್ ಮಳಿಗೆಗಳು, ಏಕಕಾಲಕ್ಕೆ ವಿವಿಧ ಪರದೆಗಳಲ್ಲಿ ಪ್ರದರ್ಶನಗೊಳ್ಳುವ ಬಹುಭಾಷೆಯ ಚಿತ್ರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಎಂ.ಜಿ.‌ರಸ್ತೆ ಬಿಟ್ಟರೆ, ಅತಿ ಹೆಚ್ಚು ಪಬ್‌ಗಳು ಇರುವುದು ಇಲ್ಲಿಯೇ. ಕುಡಿತ ಮೋಜು– ಮಸ್ತಿ ಮಾಡುವ ಜಾಗವಾಗಿಯೂ ಈ ಪ್ರದೇಶ ಪ್ರಸಿದ್ಧವಾಗಿದೆ.

ಸಾಫ್ಟ್‌ವೇರ್ ಕ್ಷೇತ್ರ ಬೆಳೆದು, ಪಕ್ಕದ ಎಚ್‌ಎಸ್ಆರ್ ಲೇಔಟ್ ಅಭಿವೃದ್ಧಿ ಹೊಂದಿದ ನಂತರವೂ ಕೋರಮಂಗಲದಲ್ಲಿ ಬೇಡಿಕೆ ಕಡಿಮೆಯಾಗಲಿಲ್ಲ. ವೈಷ್ಣವಿ ಗ್ರೂಪ್, ಸಿಲ್ವರ್ ಲೈನ್ ಬಿಲ್ಡರ್ಸ್‌ ವಾಣಿಜ್ಯ ಕಟ್ಟಡ, ಅ‍‍ಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದಾರೆ. ಇತರ ಖಾಸಗಿ ಕಂಪನಿಗಳು ಐಷಾರಾಮಿ ಅಪಾರ್ಟ್‌ಮೆಂಟ್‌ ಮತ್ತು ವಿಲ್ಲಾಗಳ ನಿರ್ಮಾಣದಲ್ಲೂ ತೊಡಗಿಕೊಂಡಿವೆ.

‘ಈ ಪ್ರದೇಶ ರೇಸ್‌ನ ಬೇಡಿಕೆ ಕುದುರೆ ರೀತಿ; ವ್ಯಾಪಾರಕ್ಕೆ ಧಕ್ಕೆ ಆಗುವುದಿಲ್ಲ’ ಎನ್ನುತ್ತಾರೆ ವೈಷ್ಣವಿ ಗ್ರೂಪ್‌ ನಿರ್ದೇಶಕ ದರ್ಶನ್ ಗೋವಿಂದರಾಜು.

ಕೋರಮಂಗಲ ಪ್ರದೇಶವು ಹೊರವರ್ತುಲ ರಸ್ತೆಯುದ್ದಕ್ಕೂ ಇರುವ ಐಟಿ ಕಂಪನಿಗಳು, ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಿಂದಾಗಿ ಪ್ರಮುಖ ವಸತಿ ಬೇಡಿಕೆ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿ ವಸತಿ ನಿವೇಶನಗಳ ಬೆಲೆ ಚದರ ಅಡಿಗೆ ₹7ಸಾವಿರದಿಂದ ಆರಂಭವಾಗುತ್ತದೆ. ವಾಣಿಜ್ಯ ಬಳಕೆ ಭೂಮಿಯ ಧಾರಣೆಯು ಚದರ ಅಡಿ ₹18ರಿಂದ ₹20ಸಾವಿರದವರೆಗೂ ಇದೆ.

‘ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಹಳೇ ಕೋರಮಂಗಲ ಪ್ರದೇಶವಾದ 1, 2, 3ನೇ ಬ್ಲಾಕ್‌ನಲ್ಲಿ ಕೊಂಚ ಮೂಲ ಸೌಲಭ್ಯ ಕಲ್ಪಿಸಿದರೆ ನಗರದ ಬೆಳವಣಿಗೆಗೆ ಪೂರಕವಾಗಲಿದೆ’ ಎನ್ನುತ್ತಾರೆ ಕ್ರೆಡಾಯ್ ಕಾರ್ಯದರ್ಶಿ ಆದರ್ಶ ನರಹರಿ. 

ಬಾಡಿಗೆ ಮನೆ ದರ

1 ಬಿಎಚ್‌ಕೆ ₹ 10,500 ದಿಂದ ಆರಂಭ

2 ಬಿಎಚ್‌ಕೆ ₹15,000 ದಿಂದ ಆರಂಭ

3 ಬಿಎಚ್‌ಕೆ ₹ 20,000ದಿಂದ ಆರಂಭ

ಬಾಡಿಗೆಗೆ ವಾಣಿಜ್ಯ ಬಳಕೆ ಕಟ್ಟಡಗಳು

ಚದರ ಅಡಿ ₹ 80ರಿಂದ ಆರಂಭವಾಗುತ್ತದೆ.

ಫ್ಲ್ಯಾಟ್‌ಗಳ ಬೆಲೆ

2 ಬಿಎಚ್‌ಕೆ (1,500 ಚ.ಅ) ₹70 ಲಕ್ಷದಿಂದ ಆರಂಭ

3 ಬಿಎಚ್‌ಕೆ (2000 ಚ.ಅ) ₹1ಕೋಟಿಯಿಂದ ಆರಂಭ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry