101ರ ತರುಣಿಯ ಮನದ ಮಾತು

7

101ರ ತರುಣಿಯ ಮನದ ಮಾತು

Published:
Updated:
101ರ ತರುಣಿಯ ಮನದ ಮಾತು

ಮಹಿಳೆಯರ ಆರೋಗ್ಯ ಮತ್ತು ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ‘ಕಲರ್ಸ್‌ ಪಿಂಕಥಾನ್‌’ ಮ್ಯಾರಥಾನ್‌ ನಗರದಲ್ಲಿ ಫೆ.18ರಂದು ನಡೆಯಲಿದೆ. ಮ್ಯಾರಥಾನ್‌ನಲ್ಲಿ ಓಡುವ ಹುಮ್ಮಸ್ಸಿನಲ್ಲಿದ್ದಾರೆ 101ರ ‘ತರುಣಿ’ ಮನ್‌ ಕೌರ್‌.

ಚಂಡೀಗಡದ ಕೌರ್ ಅವರಿಗೆ ಕ್ರೀಡಾಳುವಾಗುವ ಉಮೇದು ಬಂದಿದ್ದು ತಮ್ಮ 93ನೇ ವಯಸ್ಸಿನಲ್ಲಿ. ಅದಕ್ಕೆ ಪ್ರೇರಣೆ, ಅಂತರ ರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿದ್ದ ಕೌರ್‌ ಮಗ ಗುರುದೇವ್‌ ಸಿಂಗ್‌.

‘ಪಿಂಕಥಾನ್‌’ ಮ್ಯಾರಥಾನ್‌ನ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್‌ ನಟ, ಸೂಪರ್‌ ಮಾಡೆಲ್‌ ಮಿಲಿಂದ್‌ ಸೋಮನ್‌ ಇದ್ದರೂ ಕೇಂದ್ರಬಿಂದುವಾಗಿದ್ದುದು ಕೌರ್‌ ಅವರೇ. ‘ಎದ್ದು ನಿಲ್ಲಬೇಡಿ, ಕುಳಿತುಕೊಂಡೇ ಮಾತನಾಡಿ’ ಎಂದು ಕೈಗೆ ಮೈಕ್‌ ಕೊಟ್ಟರೆ, ‘ಇಲ್ಲಪ್ಪ ನಾನು ನಿಂತುಕೊಂಡೇ ಮಾತನಾಡುತ್ತೇನೆ’ ಎಂದು ಏರುದನಿಯಲ್ಲಿ ಪಂಜಾಬಿ ಹಾಡುಗಳನ್ನು ಒಂದಾದ ಮೇಲೆ ನಿರರ್ಗಳವಾಗಿ ಹಾಡಿದರು.

* ಬೆಂಗಳೂರಿಗೆ ಬಂದಿದ್ದೀರಿ. ಹೇಗನ್ನಿಸುತ್ತದೆ?

ನನಗೆ ಪ್ರವಾಸ ಮಾಡುವುದೆಂದರೆ ಇಷ್ಟ. ಬೆಂಗಳೂರಿನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಸಿಟಿ ತುಂಬಾ ಸುಂದರವಾಗಿದೆ. ಜನರೂ ಎಷ್ಟು ಉಲ್ಲಾಸದಿಂದ ಓಡಾಡುತ್ತಿದ್ದಾರೆ ನೋಡಿ. 2014ರಲ್ಲಿ ಒಮ್ಮೆ ಬಂದಿದ್ದೆ. ಅದಾದ ಮೇಲೆ ಬಂದಿರೋದು ಈಗಲೇ.

* ಮ್ಯಾರಥಾನ್‌ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವೇ ಅಜ್ಜಿ?

ಖಂಡಿತ ಸಾಧ್ಯ. ಯಾಕೆಂದರೆ ಸಾವಿರಾರು ಜನರು ಒಂದೇ ಕಡೆ ಸೇರುವಾಗ ಅವರ ಮೂಲಕ ಇನ್ನೊಂದಷ್ಟು ಸಾವಿರ ಜನರಿಗೆ ಸಂದೇಶ ರವಾನೆಯಾಗುತ್ತದೆ. ಅವರಿಂದ ಮತ್ತೊಂದಷ್ಟು ಜನರಿಗೆ... ಜಾಗೃತಿ ಅನ್ನೋದು ಜನರನ್ನು ತಲುಪೋದು ಹೀಗೇ ಅಲ್ವಾ? ಅದರಲ್ಲೂ ಹೆಣ್ಣು ಮಕ್ಕಳು ಆರೋಗ್ಯವನ್ನು ತುಂಬಾ ನೆಗ್ಲೆಕ್ಟ್ ಮಾಡ್ತಾಪ್ಪಾ. ಕ್ಯಾನ್ಸರ್‌ಗಳ ಬಗ್ಗೆ ಅರಿವು ಮೂಡಿಸಲು ‘ಪಿಂಕಥಾನ್‌’ನಂಥ ಮ್ಯಾರಥಾನ್‌ಗಳು ಖಂಡಿತಾ ನೆರವಾಗುತ್ತವೆ.

* ನಿಮ್ಮ ಆರೋಗ್ಯ ಹೇಗಿದೆ?

ನನಗೆ ಈಗ ಯಾವುದೇ ಸಮಸ್ಯೆ ಇಲ್ಲ. 93ನೇ ವಯಸ್ಸಿನಲ್ಲಿ ಹೃದಯದಲ್ಲಿ ತೊಂದರೆ ಇರುವುದು ಗೊತ್ತಾಯಿತು. ಅದಕ್ಕೆ ಶಸ್ತ್ರಚಿಕಿತ್ಸೆ ಆದ ಮೇಲೆ ನನ್ನ ಮಗ ಗುರುದೇವ್‌ ಬೇರೆ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ. ನಡಿಗೆ ಮತ್ತು ಓಟದ ಬಗ್ಗೆ ಹಾಗೂ ಹಿರಿಯರ ಕ್ರೀಡಾಕೂಟಗಳ ಬಗ್ಗೆ ಹೇಳಿದವನೂ ಅವನೇ. ಯಾವಾಗ ಓಡಲು ಶುರು ಮಾಡಿದೆನೋ, ಆಗ ನನ್ನ ಕಾಯಿಲೆಯೂ ಓಡಿಹೋಯಿತು.

* ಕೆಟ್ಟ ಆಹಾರ ಕ್ರಮವೇ ಹೃದ್ರೋಗಕ್ಕೆ ಕಾರಣ ವಾಯಿತು ಎಂದು ನೀವು ಹೇಳಿಕೊಂಡಿದ್ದೀರಿ...

ಹೃದಯದ ತೊಂದರೆ ಕಾಣಿಸಿಕೊಳ್ಳುವವರೆಗೂ ನಾನು ಎಲ್ಲಾ ಮಹಿಳೆಯರಂತೆ ಮನೆ, ಕೆಲಸ ಮತ್ತು ಕುಟುಂಬ ಎಂದು ಇದ್ದವಳು. ಸಮಯ ಸಿಕ್ಕಾಗ ತಿನ್ನುತ್ತಿದ್ದೆ, ಇಲ್ಲವೆಂದರೆ ಇಲ್ಲ. ತಿನ್ನುವ ಆಹಾರ ನನ್ನ ದೇಹಕ್ಕೆ ಒಗ್ಗುತ್ತದೆಯೋ ಇಲ್ಲವೋ ಎಂದು ಯಾವತ್ತೂ ಯೋಚಿಸಿರಲಿಲ್ಲ. ಕೆಟ್ಟ ಆಹಾರಕ್ರಮವೇ ಕಾಯಿಲೆಗೆ ಕಾರಣವಾಯಿತು ಎಂದು ಹೇಳುತ್ತೇನೆ.

* ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುವ ವಯಸ್ಸಿನಲ್ಲಿ ನೀವು ಕ್ರೀಡಾಪಟುವಾದಿರಿ...

ಮೊದಲು ಮನೆಯಿಂದಾಚೆ ಬಂದು ನಡಿಗೆ ಮತ್ತು ಓಟದಲ್ಲಿ ತೊಡಗಿಸಿಕೊಳ್ಳಲು ಒಂಥರಾ ಮುಜುಗರ ಆಗುತ್ತಿತ್ತು. ಯಾರು ಏನು ಅಂದುಕೊಳ್ಳುತ್ತಾರೆ ಅನಿಸುತ್ತಿತ್ತು. ಆದರೆ ಮಗ ಹುರಿದುಂಬಿಸಿದ. ಟ್ರ್ಯಾಕ್‌ ಸೂಟ್‌ ಹಾಕ್ಕೊಂಡು ಓಡಲು ಶುರು ಮಾಡಿದೆ. ನಮ್ಮೂರು ಚಂಡೀಗಡದಲ್ಲಿ 2007ರಲ್ಲಿ ನಡೆದ ಹಿರಿಯರ 100 ಮೀ. ಓಟದಲ್ಲಿ ನಾನೂ ಸ್ಪರ್ಧಿಸಿದೆ. ಮಗನೂ ಇದ್ದ. ನನಗೆ ಚಿನ್ನ ಬಂತು. ಆಮೇಲೆ ಜಾವೆಲಿನ್‌ ಎಸೆತವನ್ನೂ ಅಭ್ಯಾಸ ಮಾಡತೊಡಗಿದೆ. ಓಟ ಮತ್ತು ಜಾವೆಲಿನ್‌ ಎಸೆತದಲ್ಲಿ 20ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದಿದ್ದೇನೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪಳಗಲು ವಯಸ್ಸು ಮಾನದಂಡವಾಗಬಾರದು. ನಮ್ಮಲ್ಲಿ ಛಲ ಇದ್ದರೆ ಉಳಿದ ಎಲ್ಲಾ ಸಂಗತಿಗಳು ಗೌಣ ಆಗುತ್ತವೆ.

* ಯಶಸ್ವಿ ಅಥ್ಲೀಟ್‌ ಆಗಿರುವ ಹಿಂದಿನ ಗುಟ್ಟೇನು?

ಯಾರೂ ದಿನ ಬೆಳಗಾಗುವುದರೊಳಗೆ ಯಶಸ್ವಿ ಎನಿಸಿಕೊಳ್ಳುವುದಿಲ್ಲ. ಹುಡುಗರೇ ಆಗಲಿ, ಮುದುಕರೇ ಆಗಲಿ ಕಠಿಣ ಪರಿಶ್ರಮ ಬೇಕು. ಉತ್ತಮ ಜೀವನಕ್ರಮ, ಉತ್ತಮ ಆಹಾರ, ಕ್ರಿಯಾಶೀಲತೆ, ಪರಿಶ್ರಮ... ಇವಿಷ್ಟಿದ್ದರೆ ಅಂದುಕೊಂಡದ್ದನ್ನು ಸಾಧಿಸಬಹುದು. ಆರೋಗ್ಯ ಸರಿ ಇದ್ದರೆ ತಾನೇ ಅಂದುಕೊಂಡಿದ್ದನ್ನು ಸಾಧಿಸುವುದು? ಒಳ್ಳೆಯ ಆಹಾರ ತಿನ್ನಿ, ಪ್ರತಿದಿನ ವ್ಯಾಯಾಮ ಮಾಡಿ. ಚೆನ್ನಾಗಿ ನಿದ್ದೆ ಮಾಡಿ. ನಾನು ಜಾವೆಲಿನ್‌ ಎಸೆತದಲ್ಲಿ ವಿಶ್ವ ದಾಖಲೆ ನಿರ್ಮಿಸಿದಾಗ ನನಗೆ 100 ವರ್ಷ ಆಗಿತ್ತು. ಅಂತರರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಲೇ ಇದ್ದೇನೆ.

* ನಿಮ್ಮ ಪ್ರಕಾರ ದೀರ್ಘಾಯಸ್ಸು ಮತ್ತು ಆರೋಗ್ಯಕ್ಕೆ ಏನು ಮಾಡಬೇಕು?

ವಯಸ್ಸಾಯಿತು ಎಂದು ಸುಮ್ಮನೆ ಕೂರಬಾರದು. ನಾನು ಪ್ರತಿದಿನ 20 ಕಿ.ಮೀ ಓಡುತ್ತೇನೆ. ನನಗೆ ಬೇಕಾದ ಆಹಾರವನ್ನು ನಾನೇ ತಯಾರಿಸಿಕೊಳ್ಳುತ್ತೇನೆ. ಮನೆ ಕೆಲಸ ಮಾಡುತ್ತೇನೆ. ಹೀಗೆ ಚಟುವಟಿಕೆಯಿಂದ ಕೂಡಿದ್ದರೆ ಆಯಸ್ಸು ಜಾಸ್ತಿ ಆಗುತ್ತೆ ಅನ್ನೋದು ನನ್ನ ನಂಬಿಕೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry