ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯಕ್ಕೂ ಭದ್ರತೆಗೂ ನಂಟು

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

* ಸಿರಿಧಾನ್ಯಗಳ ಬೆಲೆ ಏಕೆ ಅಷ್ಟು ಜಾಸ್ತಿ?
ಸಿರಿಧಾನ್ಯಗಳಿನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಹೀಗಾಗಿ ಮಾರುಕಟ್ಟೆಯೂ ಕಷ್ಟವಾಗುತ್ತಿದೆ. ಇವು ಆಹಾರ ಸಂಸ್ಕೃತಿಯ ಭಾಗವಾದಾಗ ಜನರು ಧಾನ್ಯಗಳು ಎಲ್ಲಿ ಸಿಗುತ್ತವೆ ಎಂದು ಹುಡುಕಾಡುತ್ತಾರೆ. ಆಗ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಬೆಳೆ ಹೆಚ್ಚಾದರೆ ಬೆಲೆ ಕಡಿಮೆಯಾಗುತ್ತದೆ.

* ಬೆಂಗಳೂರಿನಲ್ಲಿ ಈಗ ಪ್ಯಾಕ್ಡ್‌ ಫುಡ್‌ ಜನಪ್ರಿಯವಾಗುತ್ತಿದೆ. ಸಿರಿಧಾನ್ಯಗಳನ್ನು ಪ್ಯಾಕ್ಡ್‌ ಫುಡ್ ಪರಿಧಿಗೆ ಸೇರಿಸುವುದು ಇಂಥ ಉತ್ಸವಗಳ ಉದ್ದೇಶವೇ?
ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿರುವುದು ಸಹಜವಲ್ಲವೇ? ಸಿರಿಧಾನ್ಯಗಳಿಗೂ ಪ್ಯಾಕಿಂಗ್‌ ಅವಶ್ಯವಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ, ಅವರ ಆರೋಗ್ಯ ಹಾಳಾಗದಂತೆ ಉತ್ಪನ್ನ ಪೂರೈಸುವುದು ಮುಖ್ಯ.

* ಸಿರಿಧಾನ್ಯ ಮೇಳದ ಮುಖ್ಯ ಉದ್ದೇಶವೇನು?
ಗ್ರಾಹಕರಿಗೆ ಉತ್ತಮ ಆರೋಗ್ಯ ಪದ್ಧತಿಯನ್ನು ಪರಿಚಯಿಸುವುದು, ರೈತರಿಗೆ ಮಾರುಕಟ್ಟೆ ಸಾಧ್ಯತೆಗಳನ್ನು ವಿಸ್ತರಿಸುವುದು ಈ ಮೇಳದ ಉದ್ದೇಶ. ಯಾವ ಕಂಪೆನಿಯೂ ಮಾಡಲು ಸಾಧ್ಯವಿಲ್ಲದಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಇದು. ಆದರೆ ಸರ್ಕಾರ ಪಾಲಿಷ್‌ ಅಕ್ಕಿಗೆ ಇದೇ ರೀತಿ ಪ್ರೋತ್ಸಾಹ ಮುಂದುವರಿಸಿದರೆ ಇದು ಕೇವಲ ಗಿಮಿಕ್ ಎನಿಸಿಕೊಳ್ಳುತ್ತದೆ. ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಸಿರಿಧಾನ್ಯಗಳಿಗೂ ಅವಕಾಶ ಸಿಗಬೇಕು.

* ದೇಸಿ ಅಕ್ಕಿಯನ್ನು ಏಕೆ ಸಿರಿಧಾನ್ಯಗಳ ಪರಿಧಿಯಿಂದ ಹೊರಗಿರಿಸಿದ್ದೀರಿ?
ಅಕ್ಕಿಯನ್ನು ಸಿರಿಧಾನ್ಯಗಳಲ್ಲಿ ಸೇರಿಸಬೇಕಿತ್ತು. ಈಗ ಒಂದು ಧಾನ್ಯವನ್ನು ಇನ್ನೊಂದರ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ ಎನಿಸುತ್ತೆ. ನಿಜ ಅಂದ್ರೆ, ಹಾಗಾಗಬಾರದು. ಅಕ್ಕಿಯಲ್ಲಿ ವೈವಿಧ್ಯಮಯ ತಳಿಗಳಿವೆ. ಅವುಗಳನ್ನು ಉಳಿಸಿಕೊಳ್ಳುವುದು ಸಿರಿಧಾನ್ಯ ಉಳಿಸಿಕೊಳ್ಳುವಷ್ಟೇ ಅಗತ್ಯ.

*ಸಿರಿಧಾನ್ಯಗಳು ಈಗ ಮುನ್ನೆಲೆಗೆ ಬರುತ್ತಿವೆ. ಈ ಹಿಂದೆಯೂ ಅವು ನಮ್ಮ ಆಹಾರ ಪದ್ಧತಿಯ ಭಾಗವೇ ಆಗಿದ್ದವು. ಏಕಾಏಕಿ ಕಣ್ಮರೆಯಾಗಲು ಏನು ಕಾರಣ?
ತಪ್ಪು ಕೃಷಿನೀತಿಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಸಿರಿಧಾನ್ಯಗಳು ಕಣ್ಮರೆಯಾಗಲು ಮುಖ್ಯಕಾರಣ. ಏಕಬೆಳೆ, ಏಕ ಆಹಾರ ಪದ್ಧತಿ ಇರುವುದರಿಂದ ಬೆಳೆಯುವವರಿಗೂ, ಸರ್ಕಾರಕ್ಕೂ ಲಾಭ ಎನ್ನುವಂತಾಯಿತು. ನೂರಾರು ಬಗೆಯ ಬೆಳೆ ಇದ್ದರೆ ಅದರ ನಿರ್ವಹಣೆ ಮಾಡುವುದು ಕೃಷಿ ವಿಜ್ಞಾನಕ್ಕೆ ಕಠಿಣ ಎನಿಸುತ್ತದೆ. ಈ ಧಾನ್ಯದಲ್ಲಿರುವ ಪೋಷಕಾಂಶಗಳೇ ಆ ಧಾನ್ಯದಲ್ಲಿಯೂ ಇದೆ ಎಂದು ನಂಬಿಸುವುದು ಅವರಿಗೆ ಲಾಭಕರ. ಆದರೆ ಪ್ರತಿ ಧಾನ್ಯದಲ್ಲಿಯೂ ಇರುವ ಪೋಷಕಾಂಶಗಳಲ್ಲಿ ವ್ಯತ್ಯಾಸ ಇರುತ್ತದೆ. ಆಹಾರ ಪದ್ಧತಿಯಲ್ಲಿಯೂ ಒಳಮೀಸಲಾತಿ ಇದೆ ಗೊತ್ತೆ? ಸಿರಿಧಾನ್ಯಗಳಲ್ಲಿ ಕೆಲವು ಬಳಕೆಯಲ್ಲಿದ್ದರೆ, ಮತ್ತೆ ಕೆಲವು ಎಷ್ಟೋ ಮಂದಿಗೆ ಗೊತ್ತೇ ಇಲ್ಲ. ನಮ್ಮ ದೇಹಕ್ಕೆ ಬೇಕಾದ ಅಂಶಗಳನ್ನು ಆಹಾರದಿಂದ ಪಡೆದುಕೊಳ್ಳುವುದು ಆಹಾರ ಭದ್ರತೆ. ಆದರೆ ಎಲ್ಲಿ ಆಹಾರ ವೈವಿಧ್ಯ ಇರುವುದಿಲ್ಲವೋ ಅಲ್ಲಿ ಆಹಾರ ಭದ್ರತೆ ಇರಲು ಸಾಧ್ಯವಿಲ್ಲ.

* ಸಿರಿಧಾನ್ಯಗಳು ಇತ್ತೀಚೆಗೆ ಪ್ರಚಾರ ಪಡೆದುಕೊಳ್ಳಲು ಕಾರಣವೇನು?
ಒಂದು ತಿನಿಸನ್ನು ಚಂದದ ಚಿತ್ರದೊಂದಿಗೆ ಮಾಧ್ಯಮದಲ್ಲಿ ನೋಡುವಾಗ ಅದನ್ನು ತಿನ್ನಬೇಕು ಅನಿಸುತ್ತದೆ. ‘ನನ್ನ ಆಸೆಗಳು ನನ್ನವಲ್ಲ. ನನ್ನ ಆಸೆಗಳನ್ನು ಹುಟ್ಟುಹಾಕಬಹುದು’ ಎಂಬ ಮಾತಿದೆ. ಸಿರಿಧಾನ್ಯಗಳನ್ನು ನಾವು ಎಲ್ಲರಿಗೂ ಹಂಚಲು ಸಾಧ್ಯವಿಲ್ಲ. ಆದರೆ ಅದರತ್ತ ಒಲವು ಮೂಡಿಸಬಹುದು. ಕೆಲವರಿಗೆ ತಾವು ಸೇವಿಸಬೇಕಾದ ಆಹಾರಗಳ ಬಗ್ಗೆಯೇ ಗೊಂದಲವಿದೆ. ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ವೈದ್ಯರಿಗೆ ಕರೆ ಮಾಡಿ ಕೇಳುತ್ತಾರೆ. ಹಾಗಾಗಿ ಒಳ್ಳೆಯ ಆಹಾರ ಪದ್ಧತಿಯ ಬಗ್ಗೆ ಮಾತನಾಡುವುದು ಒಳ್ಳೆಯದು.

* ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಹೇಗಿದೆ?
ಸರ್ಕಾರ ಮತ್ತು ಮಾಧ್ಯಮಗಳು ಸಿರಿಧಾನ್ಯಗಳಿಗೆ ಸಾಕಷ್ಟು ಪ್ರಚಾರ ನೀಡುತ್ತಿವೆ. ಈ ಪ್ರಶ್ನೆಗೆ ಉತ್ತರ ಹೇಳುವಾಗ ಸಿರಿಧಾನ್ಯಗಳ ವೈವಿಧ್ಯವನ್ನೂ ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ಪ್ರತಿ ಸಿರಿಧಾನ್ಯವೂ ಒಂದೊಂದು ವಿಶೇಷ ಗುಣ ಹೊಂದಿವೆ. ಅದನ್ನು ಗುರುತಿಸಿ ಪ್ರಚಾರ ನೀಡುವುದು ಅಗತ್ಯ.

* ರೈತರು ಮತ್ತು ಗ್ರಾಹಕಸ್ನೇಹಿ ಮಾರುಕಟ್ಟೆಯ ಸಾಧ್ಯತೆಗಳು?
ರೈತರು ಒಗ್ಗೂಡಿ ಕಂಪೆನಿಗಳನ್ನು ಸ್ಥಾಪಿಸಿಕೊಳ್ಳಬೇಕು. ತಾವು ಬೆಳೆಯುವ ಬೆಳೆಗಳಿಗೆ ತಾವೇ ಪ್ರಚಾರ ಮಾಡಬೇಕು. ಆನ್‌ಲೈನ್‌ ಟ್ರೇಡ್‌ ಮೂಲಕ ಮಾರುಕಟ್ಟೆ ಸಹಯೋಗ ಸಾಧಿಸಿದರೆ ಉತ್ತಮ ದರ ಪಡೆಯುವುದರ ಜೊತೆಗೆ ಬೇಡಿಕೆಯನ್ನೂ ಹೆಚ್ಚಿಸಿಕೊಳ್ಳಬಹುದು.

* ಸಿರಿಧಾನ್ಯಗಳಿಗೆ ಸಂಬಂಧಿಸಿದ ಯಂತ್ರೋಪಕರಣ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಸರ್ಕಾರ ಬೆಂಬಲಿಸುತ್ತಿಲ್ಲ ಎಂಬ ಆರೋಪವಿದೆ. ಇದು ನಿಜವೇ?
ಸಿರಿಧಾನ್ಯಗಳ ಸಂಸ್ಕರಣೆಗೆ ನಿರ್ದಿಷ್ಟ ವಿಧಾನ ಅನುಸರಿಸಬೇಕು. ರಾಗಿ, ಸಜ್ಜೆ, ಜೋಳ ಬಿಟ್ಟು ಉಳಿದೆಲ್ಲ ಧಾನ್ಯಗಳನ್ನು ಸಿಪ್ಪೆ ತೆಗೆದೇ ತಿನ್ನಬೇಕು. ಇವೆಲ್ಲ ಸರಿಯಾಗಿ ಆಗಬೇಕೆಂದರೆ ಧಾನ್ಯಗಳ ಸಂಸ್ಕರಣೆಯ ಪ್ರಕ್ರಿಯೆ ಸರಿಯಾಗಿ ಆಗಬೇಕು. ಗೋಧಿ ಮಿಲ್‌ ದೇಶದ ಎಲ್ಲಾ ಕಡೆಯೂ ಇದೆ. ಅದೇ ರೀತಿಯಲ್ಲಿ ಸಿರಿಧಾನ್ಯಗಳ ಸಂಸ್ಕರಣೆಗೂ ಹೆಚ್ಚಿನ ಸವಲತ್ತು ಸಿಗಬೇಕು. ಅಕ್ಕಿಗಿರಣಿಗಳ ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ಸಿರಿಧಾನ್ಯಗಳ ಸಂಸ್ಕರಣೆಯ ತಂತ್ರಜ್ಞಾನವೂ ಸುಧಾರಿಸಬೇಕಿದೆ. ₹3000 ಮೊತ್ತದಲ್ಲಿ ಸಂಸ್ಕರಣೆ ಯಂತ್ರಗಳು ಸಿಗುವಂತಾದರೆ ಪ್ರತಿಮನೆಯಲ್ಲಿಯೂ ಸಂಸ್ಕರಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದಂತೆ ಆಗುತ್ತದೆ.

* ನಮ್ಮ ದೇಶದ ಆಹಾರ ಕಾನೂನುಗಳ ಬಗ್ಗೆ ಮಾತನಾಡಿ...
ಬೆಳೆ ಕಟಾವು ಆಗಿ ಗೋಡನ್‌ಗೆ ಬಂದ ನಂತರವೇ ಆಹಾರದ ನಿಯಮಗಳು ಅನ್ವಯವಾಗುತ್ತವೆ. ಆದರೆ ಹೊಲದಲ್ಲಿ ಬೆಳೆಗಳಿಗೆ ಹೊಡೆಯುವ ರಾಸಾಯನಿಕಗಳ ನಿಯಂತ್ರಣಕ್ಕೆ ಕಾನೂನಿನಲ್ಲಿ ಕಡಿವಾಣವಿಲ್ಲ. ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟಕ್ಕೂ ಕಾನೂನು ಅನ್ವಯಿಸುವುದಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಡುವ ಆಹಾರ ಹೇಗಿರಬೇಕು ಎಂಬುದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ಧರಿಸುತ್ತದೆ. ಆದರೆ ಅದರ ವಿನ್ಯಾಸದಲ್ಲಿಯೇ ತಪ್ಪಿದ್ದರೆ ಏನು ಮಾಡಲು ಆಗುವುದಿಲ್ಲ. ಸಿಹಿ ಪದಾರ್ಥಗಳ ನಿಯಂತ್ರಣಕ್ಕೆ ಕಾನೂನು ತರಲಾಗುತ್ತಿದೆ. ಯುರೋಪ್‌ನಲೆಲ್ಲ ಜಂಕ್‌ ಫುಡ್‌ಗಳ ಜಾಹಿರಾತಿಗೆ ಕಡಿವಾಣ ಇದೆ. ಆದರೆ ನಮ್ಮಲ್ಲಿ ಅದು ಇಲ್ಲ. ಆಹಾರಕ್ಕೆ ಸಂಬಂಧಪಟ್ಟ ಕಾನೂನು ಇದ್ದರೂ, ಅದು ಸಮರ್ಪಕವಾಗಿ ವಿನ್ಯಾಸವಾಗಿಲ್ಲ.

* ಗ್ರಾಮೀಣ ಆರ್ಥಿಕತೆಗೆ ಸಿರಿಧಾನ್ಯಗಳು ಪುನಶ್ಚೇತನ ನೀಡಬಲ್ಲವೇ?
ಈ ಪ್ರಶ್ನೆಗೆ ನಾನು ಹೌದು ಎಂದು ಉತ್ತರಿಸುತ್ತೇನೆ. ಸಿರಿಧಾನ್ಯಗಳು ಕಡಿಮೆ ನೀರು ಬೇಡುತ್ತವೆ. ಜೊಡತೆಗೆ ಇದರ ನಿರ್ವಹಣೆಯೂ ಸುಲಭ. ಕ್ರಿಮಿಕೀಟಗಳ ಹಾವಳಿಯೂ ಹೆಚ್ಚು ಬಾಧಿಸದು. ಹೀಗಾಗಿ ರಾಸಾಯನಿಕ ಬಳಕೆಯೂ ಅಗತ್ಯವಿರುವುದಿಲ್ಲ. ನೀರಾವರಿ ಸಮಸ್ಯೆ ಇರುವ ನಮ್ಮ ರಾಜ್ಯದ ಕೃಷಿಕರಿಗೆ ಇದು ವರದಾನವೇ ಸರಿ.

ಸಾವಯವ ಹಾಗೂ ಸಿರಿಧಾನ್ಯ ಮೇಳ 2018: ಉದ್ಘಾಟನೆ– ಮುಖ್ಯಮಂತ್ರಿ ಸಿದ್ದರಾಮಯ್ಯ. ಅತಿಥಿ– ಎಚ್‌.ಎನ್‌. ಅನಂತ್‌ಕುಮಾರ್‌, ನಿರ್ಮಲಾ ಸೀತಾರಾಮನ್‌, ಕೃಷ್ಣ ಬೈರೇಗೌಡ. ಅಧ್ಯಕ್ಷತೆ– ಆರ್‌.ರೋಷನ್‌ ಬೇಗ್‌, ವಸ್ತುಪ್ರದರ್ಶನ ಉದ್ಘಾಟನೆ– ರಾಧಾ ಮೋಹನ್ ಸಿಂಗ್‌.

ಫುಡ್‌ಕೋರ್ಟ್‌ ಉದ್ಘಾಟನೆ– ಕೆ.ರತ್ನ ಪ್ರಭಾ, ಬಿ2ಬಿ ಮೀಟ್‌ ಉದ್ಘಾಟನೆ– ಡಿ.ವಿ.ಪ್ರಸಾದ್‌, ಸಿರಿಧಾನ್ಯ ಅಡುಗೆಗಳ ರೆಸಿಪಿ ಕೃತಿ ಬಿಡುಗಡೆ– ಪ್ರೀತಿ ಸುಡಾನ್‌, ರೈತರ ಕಾರ್ಯಾಗಾರ ಉದ್ಘಾಟನೆ– ಅಶೋಕ್‌ ದಲ್ವಾಯಿ, ಸಾವಯವ ಹಾಗೂ ಸಿರಿಧಾನ್ಯಗಳ ಕಾರ್ಯಾಗಾರ ಉದ್ಘಾಟನೆ– ಡೇವಿಡ್‌ ಬೆರ್ಗಿನ್ಸನ್‌. ಆಯೋಜನೆ– ಕೃಷಿ ಇಲಾಖೆ.
ಸ್ಥಳ– ಬೆಂಗಳೂರು ಅರಮನೆ, ವಸಂತನಗರ. ಬೆಳಿಗ್ಗೆ 11

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT