ಬುಲೆಟ್‍– ಶಕುಂತಲಾ

7

ಬುಲೆಟ್‍– ಶಕುಂತಲಾ

Published:
Updated:

ಪ್ರಸನ್ನ ಅವರ ‘ಬಸವನ ಬಂಡಿ ಹಾಗೂ ಬುಲೆಟ್‍ ಟ್ರೇನು’ ಲೇಖನದಲ್ಲಿ (ಪ್ರ.ವಾ., ಡಿ. 21) ‘ಎತ್ತಿನ ಬಂಡಿ ಕಾಯಕ ಚಳವಳಿ ಪಕ್ಕಕ್ಕೆ ಇಟ್ಟು ಭವ್ಯ ಪರಂಪರೆ ಕಟ್ಟಲು ಸಾಧ್ಯವೇ?’ ಎನ್ನುವ ಸಂದೇಶ ನೀಡಿದ್ದಾರೆ.

ಅಹಮದಾಬಾದ್‌–ಮುಂಬೈ ನಡುವೆ ಬುಲೆಟ್‌ ರೈಲು ಓಡಿಸುವ ಯೋಜನೆಗೆ ಕೋಟ್ಯಂತರ ರೂಪಾಯಿ ಸುರಿಯುವುದರ ಮರ್ಮ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಅಭಿವೃದ್ಧಿ ಕುರಿತ ಚರ್ಚೆಗೆ ತೋರುವ ಉತ್ಸಾಹವನ್ನು ಬಡವರ ಬವಣೆ ನಿವಾರಣೆ ಬಗ್ಗೆ ತೋರುವುದಿಲ್ಲ.  ಗ್ರಾಮ ಭಾರತ ಯಾರಿಗೂ ಬೇಡವಾಗಿದೆ.

ಈ ಸಂದರ್ಭದಲ್ಲಿ ನನಗೆ ಜನಸ್ನೇಹಿ ‘ಶಕುಂತಲಾ ಎಕ್ಸ್‌ಪ್ರೆಸ್‌’ ಎಂಬ ನ್ಯಾರೊಗೇಜ್‌ ರೈಲು ಸಂಚಾರ ವ್ಯವಸ್ಥೆ ಬಗ್ಗೆ ನೆನಪಾಗುತ್ತದೆ.

ಈ ರೈಲು, ಮಹಾರಾಷ್ಟ್ರದ ವಿದರ್ಭ ವಲಯದ ಅಚಲಪುರ ಮತ್ತು ಮೂರ್ತಿಜಾಪುರ ನಿಲ್ದಾಣಗಳ ನಡುವೆ 76 ಕಿ.ಮೀ. ದೂರ ಕ್ರಮಿಸುತ್ತದೆ. ಚಿಕ್ಕಪುಟ್ಟ ನಿಲ್ದಾಣಗಳಲ್ಲೂ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುತ್ತದೆ. ದಿನನಿತ್ಯದ ತರಕಾರಿ ತರಲು, ಸಂತೆಗೆ ಹೋಗಲು, ಕೆಲಸಕ್ಕೆ ಹೋಗಲು ಜನ ಇದನ್ನೇ ಅವಲಂಬಿಸಿದ್ದಾರೆ. ಇದು ಆರಂಭವಾಗಿದ್ದು 1903ರಲ್ಲಿ. ವಿದರ್ಭದ ಆಸುಪಾಸಿನಲ್ಲಿ ಬೆಳೆದ ಹತ್ತಿಯನ್ನು ಮುಂಬೈಗೆ ಸಾಗಿಸಲೆಂದೇ ‘ಕಿಲ್ಲಿಕ್ ನಿಕ್ಸನ್‌’ ಎಂಬ ಬ್ರಿಟಿಷ್ ಕಂಪನಿ ಈ ರೈಲು ಆರಂಭಿಸುತ್ತದೆ. ಇದರ ಉಸ್ತುವಾರಿ ಈಗಲೂ ಅದೇ ಕಂಪನಿಯದು.

ಇದರ ಪ್ರಯಾಣ ದರ ತುಂಬ ಕಡಿಮೆ. ಕಳೆದ ವರ್ಷ ಇದನ್ನು ಮೀಟರ್ ಗೇಜ್‌ಗೆ  ಪರಿವರ್ತಿಸಲು ಮತ್ತು ಇದರ ಆಡಳಿತವನ್ನು ಭಾರತೀಯ ರೈಲ್ವೆಗೆ ಹಸ್ತಾಂತರಿಸಲು ಮಾತುಕತೆ ನಡೆಯಿತು.

ಆದರೆ ಇಲ್ಲಿನ ಜನರು ಇಂಥ ಪ್ರಸ್ತಾವ ವಿರೋಧಿಸಿದ ಕಾರಣ ಅದು ಸಫಲವಾಗಿಲ್ಲ. ಗಂಟೆಗೆ 20 ಕಿ.ಮೀ. ವೇಗದಲ್ಲಿ ಸಂಚರಿಸಿದರೂ ಅನುಕೂಲದಲ್ಲಿ ಇದಕ್ಕೆ ಸಾಟಿಯೇ ಇಲ್ಲ. ಇಂಥ ಜನಸ್ನೇಹಿ ಸೇವೆಗಳ ಸುಧಾರಣೆ ನಮ್ಮ ಆದ್ಯತೆಗಳಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry