ಸಿರಿಧಾನ್ಯದ ಮೋಡಿ ಮತ್ತು ‘ಕೊಯ್ಲು’

7

ಸಿರಿಧಾನ್ಯದ ಮೋಡಿ ಮತ್ತು ‘ಕೊಯ್ಲು’

Published:
Updated:

‘ಶ್ರಮಿಕರ ಧಾನ್ಯ’ ಅಥವಾ ‘ಜನರ ಧಾನ್ಯ’ ಎನಿಸಿದ್ದ ಸಿರಿಧಾನ್ಯಗಳ ಅದೃಷ್ಟ ನೋಡಿ, ವಾಣಿಜ್ಯ ಬೆಳೆಗಳು ಅಸೂಯೆಯಿಂದ ಕರುಬುತ್ತಿರಬಹುದೇನೋ? ‘ಹಸಿರು ಕ್ರಾಂತಿ’ಯ ಭರಾಟೆಯಲ್ಲಿ ಭತ್ತ, ಗೋಧಿಗೆ ಇನ್ನಿಲ್ಲದಂತೆ ಮನ್ನಣೆ ಕೊಟ್ಟು, ಹಾಡಿ ಹೊಗಳಿ ರೈತರ ಹೊಲಕ್ಕೆ ಹೈಬ್ರಿಡ್ ತಳಿಗಳನ್ನು (ಜತೆಗೆ ಅಗಾಧ ರಸವಿಷಗಳನ್ನೂ) ನೂಕಿದ ಎಷ್ಟೊಂದು ವಿಶ್ವವಿದ್ಯಾಲಯಗಳು, ಎಷ್ಟೆಲ್ಲ ಕೃಷಿ ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಸೇರಿ ಈಗ ಅಷ್ಟೇ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಹೊಗಳುತ್ತಿವೆ. ಅವುಗಳ ಪ್ರಕಾರ, ‘ಸರ್ವ ರೋಗಕ್ಕೆ ಸಿರಿಧಾನ್ಯವೇ ಮದ್ದು’! ಈ ಹಿಂದೆ ದೆಹಲಿಯ ‘ಸಾವಯವ ಮೇಳ’ದಲ್ಲಿ ಹೆಸರಾಂತ ಕೃಷಿಕ ಡಿ.ಡಿ. ಭರಮಗೌಡ್ರು ವಿಜ್ಞಾನಿಗಳನ್ನು ‘ಆವಾಗ ಯೂರಿಯಾ, ಡಿಎಪಿ ಬೆಸ್ಟು ಅಂತಿದ್ರಿ, ಈಗ ನೋಡಿದ್ರ ಅದು ಡೇಂಜರ್. ನೆಲಕ್ಕ ಸುರೀಬ್ಯಾಡ್ರೀ ಅಂತೀರಲ್ಲ? ನಿಮ್ಮನ್ನ ಹ್ಯಾಂಗ್ ನಂಬಾದು’ ಎಂದು ಪ್ರಶ್ನಿಸಿದ್ದು ನೆನಪಾಗುತ್ತಿದೆ.

ಈ ಮೂರ್ನಾಲ್ಕು ದಶಕಗಳಲ್ಲಿ ಎದುರಾದ ಕೃಷಿ ಬಿಕ್ಕಟ್ಟು ಹತ್ತಾರು ಪಾಠಗಳನ್ನು ಕಲಿಸಿದೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಯಾವ ದಿಕ್ಕಿನತ್ತ ಸಾಗಬೇಕು ಎಂಬುದನ್ನು ಅರಿಯಲು ಇದು ಸಕಾಲ. ಹಸಿರು ಕ್ರಾಂತಿಯಿಂದ ಅಧಿಕ ಉತ್ಪಾದನೆಯ ಉದ್ದೇಶ ಸಂಪೂರ್ಣವಾಗಿ ಈಡೇರಿತು; ಆದರೆ ಅದಕ್ಕೆ ರೈತರು ತೆತ್ತ ಬೆಲೆ? ರಾತ್ರಿ ಹೊತ್ತು ಹೊಲಕ್ಕೆ ಮೆಲ್ಲಗೆ ಬಂದುರಾಸಾಯನಿಕ ಎರಚಿ, ಮುಂದೆ ಬೆಳೆ ಹುಲುಸಾಗಿ ಬಂದಾಗ ‘ನೋಡ್ರಪಾ ಹ್ಯಾಂಗ್ ಬೆಳಿ ಬೆಳದಾದ’ ಎಂದು ಉದ್ಗರಿಸುತ್ತ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡು ಈ ಜಾಲದೊಳಗೆ ಸೆಳೆದ ಬಗೆಯನ್ನು ಕುಂದಗೋಳ ತಾಲ್ಲೂಕಿನ ಹನುಮನಹಳ್ಳಿಯ ರೈತ ಈರಪ್ಪ ಕಲುಕುಟಗರ್ ಸೊಗಸಾಗಿ ನೆನಪಿಸಿಕೊಳ್ಳುತ್ತಾರೆ! ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಆಗ ತೋರಿದಷ್ಟೇ ಉತ್ಸಾಹವನ್ನು ಈಗ ಸಿರಿಧಾನ್ಯಗಳತ್ತ ತೋರುತ್ತಿದ್ದಾರೆ. ಸಮಸ್ಯೆ ಇರುವುದೇ ಇಲ್ಲಿ!

ಕುಲಾಂತರಿ ಬದನೆ ಬಳಿಕ ಜನರಲ್ಲಿ ಆಹಾರದ ಬಗ್ಗೆ ಇಷ್ಟೊಂದು ಅರಿವು ಮೂಡಿಸಿದ ಇನ್ನೊಂದು ನಿದರ್ಶನವೆಂದರೆ ಈ ಸಿರಿಧಾನ್ಯಗಳು. ಅದರಲ್ಲೂ ಆಧುನಿಕ ಜೀವನಶೈಲಿಯಿಂದ ‘ದಾಳಿ’ ಮಾಡುತ್ತಿದ್ದ ರೋಗಗಳಿಗೆ ಸಿರಿಧಾನ್ಯ ಸೇವನೆಯೇ ಚಿಕಿತ್ಸೆ ಎಂಬುದು ಗೊತ್ತಾದಾಗ ಜನರ ಒಲವು ದಿಢೀರ್ ಈ ಕಡೆ ಹೊರಳಿತು. ಹಾಗೆ ನೋಡಿದರೆ, ಸಿರಿಧಾನ್ಯ ಸೇವನೆಯಿಂದ ಸಿಗುವ ಪ್ರಯೋಜನಗಳಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ; ಆದರೆ ಊಟದ ತಟ್ಟೆಯಿಂದ ಅವುಗಳನ್ನು ಯಾಕೆ ದೂರವಿಡಲಾಗಿತ್ತು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ! ಈಗ ಎಲ್ಲೆಡೆ ಕಾಣುತ್ತಿರುವ ಸಿರಿಧಾನ್ಯದ ಜನಪ್ರಿಯತೆ ಒಂದರ್ಥದಲ್ಲಿ ‘ಮಿಲೆಟ್ ಮೇನಿಯಾ’!

ಹವಾಮಾನ ಬದಲಾವಣೆ ಬಿಕ್ಕಟ್ಟು, ಹೆಚ್ಚಿದ ಒಳಸುರಿ ವೆಚ್ಚದಿಂದಾಗಿ ಕಂಗೆಟ್ಟ ರೈತರಿಗೆ ಸಿರಿಧಾನ್ಯ ಕೃಷಿ ವರದಾನವಾಗಿದೆ. ಇಲ್ಲಿ ಹೆಚ್ಚು ನೀರು ಬೇಕಿಲ್ಲ; ರೋಗ- ಕೀಟದ ಬಾಧೆಯೂ ಇಲ್ಲ. ಈವರೆಗೆ ಹೈಬ್ರಿಡ್ ತಳಿಗಳನ್ನೂ ರಸವಿಷಗಳನ್ನೂ ಮಂತ್ರದಂತೆ ಜಪಿಸಿದ ವಿಜ್ಞಾನಿಗಳು, ಅಧಿಕಾರಿಗಳು ಈಗ ಅಷ್ಟೇ ಪರಿಪರಿಯಾಗಿ ಸಿರಿಧಾನ್ಯಗಳನ್ನು ಬಣ್ಣಿಸುತ್ತಿದ್ದಾರೆ. ಬೇಕಿದ್ದರೆ, ರೇಡಿಯೊ, ಟಿ.ವಿ.ಯಲ್ಲಿ ಪ್ರಸಾರವಾಗುವ ತಜ್ಞರ ಸಂದರ್ಶನಗಳನ್ನು ಗಮನಿಸಿ.

ದುರದೃಷ್ಟಕರ ಸಂಗತಿ ಎಂದರೆ, ಎಲ್ಲರೂ ಹೀಗೆ ಹೊಗಳುತ್ತಿರುವ ಸಿರಿಧಾನ್ಯಗಳಿಂದ ರೈತರಿಗೆ ಏನಾದರೂ ದಕ್ಕಿದೆಯೇ ಎಂಬುದನ್ನು ನೋಡುತ್ತಲೇ ಇಲ್ಲ. ಸಿರಿಧಾನ್ಯಗಳ ಸಂಸ್ಕರಣೆ ಬಹು ದೊಡ್ಡ ತಾಪತ್ರಯ. ಅದರ ಬಗ್ಗೆ ಯಾರೂ ಹೆಚ್ಚೆಚ್ಚು ಮಾತಾಡುತ್ತಿಲ್ಲ. ಬರೀ ಆರೋಗ್ಯದ ಬಗ್ಗೆ ಮಾತಾಡುವ ಭರಾಟೆಯಲ್ಲಿ ಬೆಳೆದವರಿಗೆ ದಕ್ಕಿದ್ದು ಏನು ಎಂಬುದುನ್ನು ಮರೆಮಾಚಲಾಗುತ್ತಿದೆ. ಹೋಬಳಿ ಮಟ್ಟದಲ್ಲಿ ಒಂದೊಂದು ಸಂಸ್ಕರಣಾ ಯಂತ್ರಗಳಿದ್ದರೂ ಈ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರ ಕಾಣುತ್ತಿತ್ತು. ಆದರೆ ಹುಡುಕಿದರೆ ಜಿಲ್ಲೆಗೊಂದು ಸಹ ಇಲ್ಲ. ಅಲ್ಲಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳು ಸುಗಮವಾಗಿ ಕೆಲಸ ಮಾಡುವುದಿಲ್ಲ. ಅವುಗಳ ಕಾರ್ಯವೈಖರಿಯೇ ವಿಭಿನ್ನ. ಹೀಗಾಗಿ ಸಂಸ್ಕರಣೆ ಎಂಬ ದೊಡ್ಡ ಗೋಡೆಯೊಂದು ರೈತರು-ಗ್ರಾಹಕರ ಮಧ್ಯೆ ಸೃಷ್ಟಿಯಾಗಿದೆ. ಸಂಸ್ಕರಣಾ ಸೌಲಭ್ಯವಿಲ್ಲದೇ ರಾಶಿರಾಶಿ ಸಿರಿಧಾನ್ಯ ಹಳ್ಳಿಗಳಲ್ಲಿ ಬಿದ್ದಿದೆ. ಅಧಿಕ ಉತ್ಪಾದನೆಯಾದಾಗ ಏನಾಗಬೇಕೋ ಅದೇ ಈಗಲೂ ಸಂಭವಿಸಿದೆ. ಉತ್ಪನ್ನಗಳ ದರ ಕುಸಿದಿದೆ. ಹಾಗೂ ಹೀಗೂ ಕೈಗೆ ಸಿಕ್ಕಷ್ಟು ದರದಲ್ಲಿ ರೈತರು ಮಾರಾಟ ಮಾಡುವ ಅಸಹಾಯಕತೆಯನ್ನು ದೊಡ್ಡ ವ್ಯಾಪಾರಸ್ಥರು ಬಳಸಿಕೊಂಡು, ಪಕ್ಕದ ರಾಜ್ಯಕ್ಕೆ ಕಳಿಸುತ್ತಾರೆ. ಅಲ್ಲಿ ಸಂಸ್ಕರಣೆಯಾದ ಸಿರಿಧಾನ್ಯ ಅಕ್ಕಿಗಳು ವಾಪಸು ನಮ್ಮ ನಾಡಿಗೆ ಬಂದಾಗ, ಮೂರ್ನಾಲ್ಕು ಪಟ್ಟು ದರದಲ್ಲಿ ಅವುಗಳನ್ನು ನಮ್ಮ ಜನರು ಖರೀದಿಸಿ, ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದಾರೆ!

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸುವರ್ಣಾವಕಾಶವನ್ನು ಕಂಪನಿಗಳು ಕಳೆದುಕೊಂಡಾವೆಯೇ? ಅವು ಪ್ಯಾಕೆಟ್ಟುಗಳಲ್ಲಿ ಸಿರಿಧಾನ್ಯದ ಅಕ್ಕಿ, ಮೌಲ್ಯವರ್ಧಿತ ಉತ್ಪನ್ನ ಹೊರತರುತ್ತಿವೆ. ಇದಕ್ಕೆ ನೆರವಾಗುತ್ತಿರುವುದು ನೆರೆರಾಜ್ಯಗಳಲ್ಲಿನ ಸಂಸ್ಕರಣಾ ಘಟಕಗಳು. ತಮಿಳುನಾಡು ಹಾಗೂ ಮಹಾರಾಷ್ಟ್ರದ ನಾಲ್ಕೈದು ಕಡೆ ಅಗಾಧ ಪ್ರಮಾಣದ ಸಾಮರ್ಥ್ಯದ ಸಿರಿಧಾನ್ಯ ಸಂಸ್ಕರಣಾ ಯಂತ್ರಗಳಿವೆ. ಅಲ್ಲಿಂದ ಇಲ್ಲಿಗೆ ನಿತ್ಯವೂ ಎಷ್ಟು ಪ್ರಮಾಣದ ಸಿರಿಧಾನ್ಯ ಬರುತ್ತಿದೆ ಎಂಬ ಲೆಕ್ಕಾಚಾರ ಸರ್ಕಾರದ ಬಳಿ ಇದೆಯೋ ಇಲ್ಲವೋ?

ಅಗ್ಗದ ದರದಲ್ಲಿ ಪಕ್ಕದ ರಾಜ್ಯದಿಂದ ತರುವ ಸಿರಿಧಾನ್ಯಗಳ ಎದುರು ನಮ್ಮ ರೈತರು ಬೆಳೆದ ಉತ್ಪನ್ನಕ್ಕೆ ಬೆಲೆ ಎಲ್ಲಿ ಸಿಕ್ಕೀತು? ಪಕ್ಕದ ರಾಜ್ಯದಲ್ಲಿ ಸಿಗುವ ಅಗ್ಗದ ಪದಾರ್ಥ ತಂದು ಉಣಬಡಿಸುವ ವ್ಯಾಪಾರಸ್ಥರ ಎದುರು ನಮ್ಮ ರೈತರ ಪಾಡು ಶೋಚನೀಯ. ಕಳೆದ ವರ್ಷ ಪ್ರತಿ ಕ್ವಿಂಟಲ್ ಸಾವೆ ದರ ₹ 3,500 ಆಸುಪಾಸು ಇದ್ದರೆ ಈಗ ₹ 2,500 ದಾಟಿಲ್ಲ. ಹಾಗೆಂದು ಸಿರಿಧಾನ್ಯದ ಅಕ್ಕಿಯನ್ನು ಕೆ.ಜಿ.ಗೆ ₹ 100ಕ್ಕೂ ಕಡಿಮೆ ದರದಲ್ಲಿ ಖರೀದಿಸಿದ ಗ್ರಾಹಕರು ಇದ್ದಾರೆಯೇ? ಇದೆಲ್ಲದರ ಜತೆಗೆ ಅಗ್ಗದ ಅಕ್ಕಿ ರವಾಕ್ಕೆ ಬಣ್ಣಬೆರೆಸಿ ಊದಲು, ಸಾಮೆ, ಕೊರಲು ಎಂಬಿತ್ಯಾದಿ ಹೆಸರಿನಲ್ಲಿ ಮಾರಾಟ ಮಾಡುವ ದಂಧೆಯೂ ಶುರುವಾಗಿದೆ. ಯಾವ ಧಾನ್ಯದ ಸ್ವರೂಪ ಹೇಗಿರಬಹುದು ಎಂಬ ಕಲ್ಪನೆಯೂ ಇಲ್ಲದ ಜನರು ಅತ್ಯಂತ ಸುಲಭವಾಗಿ ಹಳ್ಳಕ್ಕೆ ಬೀಳುತ್ತಿದ್ದಾರೆ. ಸಿರಿಧಾನ್ಯ ಸೃಷ್ಟಿಸಿದ ಮೋಡಿಯನ್ನು ಬಳಸಿಕೊಂಡು, ವ್ಯಾಪಾರಿಗಳು ಭರ್ಜರಿ ಕೊಯ್ಲು ಮಾಡುತ್ತಿದ್ದಾರೆ.

ಆಧುನಿಕ ಕೃಷಿ ವಿಜ್ಞಾನದಿಂದ ‘ತೃಣಧಾನ್ಯ’ ಎಂದು ಕರೆಸಿಕೊಂಡಿದ್ದ ಸಿರಿಧಾನ್ಯಕ್ಕೆ ಕರ್ನಾಟಕ ಸರ್ಕಾರ ಹೆಚ್ಚು ಮಹತ್ವ ನೀಡಿದೆ. ರೈತ ಸಂಘಟನೆಗಳು ಆರಂಭಿಸಿದ್ದ ‘ಸಿರಿಧಾನ್ಯ ಮೇಳ’ಕ್ಕೆ ಜನಪ್ರಿಯತೆ ಸಿಕ್ಕ ಬಳಿಕ, ಅದರ ಮಹತ್ವದ ಅರಿವಾಗಿ ಎಲ್ಲ ಜಿಲ್ಲೆಗಳಲ್ಲೂ ಅಧಿಕೃತವಾಗಿ ‘ಸಿರಿಧಾನ್ಯ ಮೇಳ’ಗಳನ್ನು ಆಯೋಜಿಸಲಾಗುತ್ತಿದೆ. ಸಹಜವಾಗಿ ಇದರಲ್ಲಿ ಕೃಷಿ ಇಲಾಖೆಯೂ ಪಾಲ್ಗೊಳ್ಳುತ್ತದೆ. ಆದರೆ ಇಲಾಖೆಯ ಬಹುತೇಕ ಅಧಿಕಾರಿಗಳಿಗೆ ಈ ಮೇಳವೊಂದು ಮಾಮೂಲಿ ಸಮಾರಂಭ. ರೈತರ ಅಭ್ಯುದಯಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬ ಜಾಣತನವೇ ಇಲ್ಲ. ಸಿರಿಧಾನ್ಯಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಹುಮ್ಮಸ್ಸುಖಂಡಿತ ಮಾದರಿಯಾದುದು; ಆದರೆ ಅವರಷ್ಟು ಉತ್ಸಾಹ ಇಲಾಖೆಗೆ ಇಲ್ಲದೇ ಹೋದರೆ ಏನಾಗುತ್ತದೆ ಎಂಬುದು ಈಗ ಎದ್ದು ಕಾಣುತ್ತಿದೆ.

ಸಿರಿಧಾನ್ಯ ಬರೀ ಆಹಾರ ಪದಾರ್ಥವಲ್ಲ; ಅದೊಂದು ಕೃಷಿ ಸಂಸ್ಕೃತಿ. ಭತ್ತ ಹಾಗೂ ಜೋಳದ ಜತೆಗೆ ಮಿಶ್ರಬೆಳೆ, ಅಕ್ಕಡಿ ಪದ್ಧತಿಯಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ಮುಖ್ಯವಾಹಿನಿಗೆ ತರಲೇಬೇಕಿದೆ. ಹಾಗೆಂದು ಅವುಗಳನ್ನು ಏಕಬೆಳೆ ವಿಧಾನಕ್ಕೆ ಒಳಪಡಿಸುವುದು ಇನ್ನೊಂದು ಅಪಾಯಕಾರಿ ಹೆಜ್ಜೆ. ಈ ಸಂಗತಿಯನ್ನು ಗಂಭೀರವಾಗಿ ಗಮನಿಸದ ಕೃಷಿ ಇಲಾಖೆಯಾಗಲೀ, ಕೃಷಿ ವಿಶ್ವವಿದ್ಯಾಲಯಗಳಾಗಲೀ ಬರೀ ಸಿರಿಧಾನ್ಯಗಳ ಪ್ರಚಾರದಲ್ಲೇ ಮಗ್ನವಾಗಿವೆ. ಇಂದಿನಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಅಂತರರಾಷ್ಟ್ರೀಯ ಸಾವಯವ ಹಾಗೂ ಸಿರಿಧಾನ್ಯ ಮೇಳ’ದ ಝಗಮಗಿಸುವ ವೇದಿಕೆಗಳಲ್ಲಿ ಕಿರುಧಾನ್ಯಕ್ಕೆ ಹಿರಿಮೆ- ಗರಿಮೆ ಕಲ್ಪಿಸಿದ ಸರ್ಕಾರದ ಪ್ರಯತ್ನವನ್ನು ಶ್ಲಾಘಿಸಲೇಬೇಕು. ಆದರೆ ಪೌಷ್ಟಿಕಾಂಶ, ಆರೋಗ್ಯದ ಕಾಳಜಿ ಎದುರು ತನ್ನ ಉತ್ಪನ್ನಕ್ಕೆ ಬೆಲೆ ಇಲ್ಲದೇ ಹತಾಶನಾಗಿ ರೈತ ಹಳ್ಳಿಯಲ್ಲಿ ಕುಳಿತಿರುವ ಚಿತ್ರಣ ಕೂಡ ನಮ್ಮೆಲ್ಲರ ಮನಕಲುಕಬೇಕಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry