ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ, ಶಾ, ಹೆಗಡೆ ಹಿಂದೂಗಳಲ್ಲ’

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಕೇಂದ್ರ ಸರ್ಕಾರ, ಬಿಜೆಪಿ ನಾಯಕತ್ವ, ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವವರ ವಿರುದ್ಧ ನಟ ಪ್ರಕಾಶ್‌ ರೈ ಗುರುವಾರ ಹರಿಹಾಯ್ದರು.

‘ನಾನು ಹಿಂದೂ ವಿರೋಧಿ ಎಂದು ಅವರು ಹೇಳುತ್ತಾರೆ. ನಾನು ನರೇಂದ್ರ ಮೋದಿ ವಿರೋಧಿ, ಹೆಗಡೆ ವಿರೋಧಿ, ನಾನು ಅಮಿತ್‌ ಶಾ ವಿರೋಧಿ. ನನ್ನ ಪ್ರಕಾರ, ಅವರೆಲ್ಲ ಹಿಂದೂಗಳೇ ಅಲ್ಲ. ಸಿದ್ಧಾಂತವನ್ನು (ಇಸಂ) ತೊಡೆದು ಹಾಕಬೇಕು ಎನ್ನುವ, ಒಂದು ಧರ್ಮವನ್ನೇ ಈ ಭೂಮಿಯಿಂದ ನಾಶ ಮಾಡಬೇಕು ಎಂದು ಹೇಳುವ ಹೆಗಡೆ ಹಿಂದೂವೇ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ನಡೆದ ‘ಇಂಡಿಯಾ ಟುಡೇ’ ದಕ್ಷಿಣ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ‘ಹತ್ಯೆಗೆ ಬೆಂಬಲ ವ್ಯಕ್ತಪಡಿಸುವ ವ್ಯಕ್ತಿ ಹಿಂದೂ ಆಗಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ರೈ ಅವರ ಮಾತಿಗೆ ತೆಲಂಗಾಣದ ಬಿಜೆಪಿ ವಕ್ತಾರ ಕೃಷ್ಣ ಸಾಗರ್‌ ರಾವ್‌ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು. ಸಭಿಕರ ಮಧ್ಯದಿಂದ ಎದ್ದು ನಿಂತ ಅವರು, ಮೋದಿ ಮತ್ತು ಶಾ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿದರು.

‘ಯಾರೊಂದಿಗೆ, ಏನು, ಎಲ್ಲಿ ಮತ್ತು ಹೇಗೆ ಮಾತನಾಡಬೇಕು ಎಂದು ಬಿಜೆಪಿ ಯಾರಿಗೂ ಹೇಳಿಲ್ಲ. ಆದರೆ, ಯಾವಾಗ ನೀವು, ‘ಅವರು ಮತ್ತು ನಾವು’ ಎಂದು ಹೇಳುತ್ತೀರೋ, ಆಗಲೇ ನೀವು ಜನರನ್ನು ಒಡೆದಂತಾಗುತ್ತದೆ’ ಎಂದು ರಾವ್‌ ಹೇಳಿದರು.

‘ಮೂಲಭೂತವಾದ ಸಂಘಟನೆಯವರು ಎಂದು ಕರೆಸಿಕೊಳ್ಳುವವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಯಾವಾಗ ನೀವು ಮಾತನಾಡುತ್ತೀರೊ ಅದು ವಾಕ್ ಸ್ವಾತಂತ್ರ್ಯವಾಗುತ್ತದೆ; ಅವರು ಮಾತನಾಡಿದರೆ ಅಂಧಾಭಿಮಾನ ಆಗುತ್ತದೆ’ ಎಂದು ರಾವ್‌ ಖಾರವಾಗಿ ನುಡಿದರು.

ಸರ್ಕಾರಗಳ ವಿರುದ್ಧ ಗರಂ: ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ನಿಷೇಧ ಹೇರಿದ ಕೆಲವು ರಾಜ್ಯ ಸರ್ಕಾರಗಳ ವಿರುದ್ಧವೂ ಪ್ರಕಾಶ್‌ ರೈ ವಾಗ್ದಾಳಿ ನಡೆಸಿದರು.

‘ಈ ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯಸ್ಥೆಯ ಕಾರಣವನ್ನು ನೀಡುತ್ತಿವೆ. ಅವರು ಮೊದಲು ಅಧಿಕಾರದಿಂದ ಕೆಳಗಿಳಿಯಬೇಕು. ಏಕೆಂದರೆ ಅವರು ಅಲ್ಲಿರುವುದಕ್ಕೆ ಅರ್ಹರಾದವರಲ್ಲ' ಎಂದು ಹೇಳಿದರು.

ಸಂವಿಧಾನ ಬದಲಿಸಬೇಕು ಎಂಬ ಹೇಳಿಕೆ ನೀಡಿದ ಹೆಗಡೆ ಅವರ ವಿರುದ್ಧ ಕರ್ನಾಟಕದಲ್ಲಿ ತಾವು ಮಾತನಾಡಿದ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ‌ಗೋಮೂತ್ರ ಹಾಕಿ ಶುದ್ಧ ಮಾಡಿದ್ದನ್ನು ಪ್ರಸ್ತಾಪಿಸಿದ ರೈ, ‘ಪ್ರಧಾನಿ ಮೋದಿ ಅವರು ಹೆಗಡೆ ಅವರಿಗೆ ಇಂತಹ ಮಾತುಗಳನ್ನಾಡಲು ಬಿಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT