ಸಿಬ್ಬಂದಿ ತರಬೇತಿಗೆ ‘ಉತ್ಕೃಷ್ಟತಾ ಕೇಂದ್ರ’

7
ಅಗ್ನಿಶಾಮಕ ಇಲಾಖೆಯಿಂದ ಪ್ರಸ್ತಾವ

ಸಿಬ್ಬಂದಿ ತರಬೇತಿಗೆ ‘ಉತ್ಕೃಷ್ಟತಾ ಕೇಂದ್ರ’

Published:
Updated:
ಸಿಬ್ಬಂದಿ ತರಬೇತಿಗೆ ‘ಉತ್ಕೃಷ್ಟತಾ ಕೇಂದ್ರ’

ಬೆಂಗಳೂರು: ಅನಾಹುತಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಲು ಸಿಬ್ಬಂದಿಗೆ ವಿಶೇಷ ಹಾಗೂ ಅತ್ಯಾಧುನಿಕ ತರಬೇತಿ ನೀಡಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮುಂದಾಗಿದೆ. ಇದಕ್ಕಾಗಿ ರಾಜ್ಯದ 7 ಕಡೆ ‘ಉತ್ಕೃಷ್ಟತಾ ಕೇಂದ್ರ’ ತೆರೆಯಲು ಸಿದ್ಧತೆ ನಡೆಸಿದೆ.

ಇಲಾಖೆ ಸಿಬ್ಬಂದಿಗೆ ಅಗ್ನಿ ಅವಘಡ, ಕಟ್ಟಡ ಕುಸಿತ, ಪ್ರವಾಹ,ರಸ್ತೆ ಅವಘಡ, ರಸಾಯನಿಕ ಸೋರಿಕೆ, ಕಾಡ್ಗಿಚ್ಚುವಿನಂತಹ ಅನಾಹುತ ಸಂಭವಿಸಿದಾಗ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬ ಬಗ್ಗೆ ಸಿಬ್ಬಂದಿಗೆ ನೇಮಕಾತಿ ವೇಳೆ 6 ತಿಂಗಳ ತರಬೇತಿ ನೀಡಲಾಗುತ್ತಿದೆ. ಬಳಿಕ ಪುನಶ್ಚೇತನ ಕಾರ್ಯಾಗಾರಗಳನ್ನು ಆಗಾಗ ಹಮ್ಮಿಕೊಳ್ಳಲಾಗುತ್ತದೆ. ಇಂತಹ ತರಬೇತಿಗಳಿಂದ ಸಿಬ್ಬಂದಿ ಅರೆಬರೆ ಜ್ಞಾನ ಪಡೆಯುತ್ತಿದ್ದಾರೆ. ಬೇರೇ ಬೇರೆ ರೀತಿಯ ಅನಾಹುತಗಳನ್ನು ನಿಯಂತ್ರಿಸುವುದಕ್ಕೆ ಬೇಕಾದ ವಿಶೇಷ ಪರಿಣಿತಿ ಅವರಿಗೆ ಸಿಗುತ್ತಿಲ್ಲ. ಹೀಗಾಗಿ ಅನಾಹುತದ ಮಾದರಿಗೆ ಅನುಗುಣವಾಗಿ ವಿಶೇಷ ತರಬೇತಿ ನೀಡುವುದಕ್ಕಾಗಿ ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

‘ಒಂದೊಂದು ಅನಾಹುತವೂ ವಿಭಿನ್ನ. ಕಾರ್ಯಾಚರಣೆಗೂ ಬೇರೆ ಬೇರೆ  ತಂತ್ರ ಅನುಸರಿಸಬೇಕಾಗುತ್ತದೆ. ಎಲ್ಲವನ್ನೂ ಒಂದೇ ವಿಧಾನದಿಂದ ನಿಭಾಯಿಸುವುದು ಕಷ್ಟ. ಹೀಗಾಗಿ ನಿರ್ದಿಷ್ಟ ಸವಾಲನ್ನು ದಕ್ಷವಾಗಿ ಎದುರಿಸಲು ಸಿಬ್ಬಂದಿಯನ್ನು ಅಣಿಗೊಳಿಸಬೇಕಿದೆ. ಈ ಸಲುವಾಗಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಕುರಿತು ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ.  ಇದಕ್ಕೆ ಹಣಕಾಸು ಇಲಾಖೆಯ ಮಂಜೂರಾತಿ ಸಿಗುವುದು ಬಾಕಿ ಇದೆ’ ಎಂದು ಇಲಾಖೆ ನಿರ್ದೇಶಕ ಕೆ.ಯು.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಉತ್ಕ್ರಷ್ಟತೆ ಕೇಂದ್ರ: ಭೌಗೋಳಿಕ ಪರಿಸರಕ್ಕೆ ತಕ್ಕಂತೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ಅವಘಡಗಳು ಸಂಭವಿಸುತ್ತಿರುತ್ತವೆ. ಬೆಂಗಳೂರಿನಂಥ ನಗರಗಳಲ್ಲಿ ಕಟ್ಟಡ ಕುಸಿತ ಹಾಗೂ ಬೆಂಕಿ ಅವಘಡಗಳು ಹೆಚ್ಚು. ಮಂಗಳೂರಿನಂತಹ ಪ್ರದೇಶದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಮತ್ತು ರಾಸಾಯನಿಕಗಳ ಸೋರಿಕೆ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಕಾರವಾರದಲ್ಲಿ ಅಣು ವಿಕಿರಣ ಸೋರಿಕೆಯಂತಹ ಅಪಾಯ ಸಂಭವಿಸಬಹುದು ಎಂದು ಅವರು ವಿವರಿಸಿದರು.

‘ಕೈಗಾರಿಕೆಗಳು ಹೆಚ್ಚು ಇರುವ ಕಡೆ ಅವಘಡಗಳು ಉಂಟಾಗುವ ಭೀತಿ ಇದ್ದೇ ಇದೆ. ಭೂಕಂಪ, ಪ್ರವಾಹ, ಕಾಡ್ಗಿಚ್ಚು ಅನಾಹುತ ಸಂಭವಿಸಿದಾಗಲೂ ನಮ್ಮ ಇಲಾಖೆಯ ಸಿಬ್ಬಂದಿಯೇ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಸಿಬ್ಬಂದಿಗೆ ಸಾಮಾನ್ಯ ತರಬೇತಿಯನ್ನು ಮಾತ್ರ ನೀಡಿದರೆ, ಅವರು ಇಂತಹ ಕೆಲಸಗಳನ್ನೆಲ್ಲ ಪರಿಣಾಮಕಾರಿಯಾಗಿ ನಿರ್ವಹಿಸಲು  ಸಾಧ್ಯವಾಗುವುದಿಲ್ಲ. ಆಯಾ ಅನಾಹುತಕ್ಕೆ ತಕ್ಕ ವಿಶೇಷ ತರಬೇತಿಯೇ ಅವರಿಗೆ ಬೇಕು. ಅದಕ್ಕೆ ಇಂತಹ ಕೇಂದ್ರಗಳ ಅಗತ್ಯವಿದೆ ಎಂದು ವಿವರಿಸಿದರು.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮಾದರಿಯಲ್ಲೇ ಸಿಬ್ಬಂದಿಯನ್ನು ಆಯ್ಕೆ ಮಾಡಿ, ಅವರಿಗೆ ಈ ಕೇಂದ್ರಗಳಲ್ಲಿ ತರಬೇತಿ ನೀಡಲಿದ್ದೇವೆ. ಅವಘಡಗಳು ಸಂಭವಿಸಿದಾಗ, ಆಯಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದ ಸಿಬ್ಬಂದಿಯನ್ನೇ ಕಾರ್ಯಾಚರಣೆಗೆ ಬಳಸಿಕೊಳ್ಳಲಿದ್ದೇವೆ’ ಎಂದರು.

ಹೆಚ್ಚುವರಿ ತರಬೇತಿಗೆ 7 ಕೇಂದ್ರ: ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಾತ್ರ ಇಲಾಖೆಯ ತರಬೇತಿ ಅಕಾಡೆಮಿಗಳಿವೆ. ಅಲ್ಲಿಯೇ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲಿ 6 ತಿಂಗಳ ತರಬೇತಿ ನೀಡಿದ ಬಳಿಕ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ.

ಕಳೆದ ವರ್ಷ 1,800 ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿತ್ತು. ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಎರಡು ಅಕಾಡೆಮಿಯಲ್ಲಿ ತರಬೇತಿ ನೀಡಲು ಸ್ಥಳದ ಕೊರತೆ ಎದುರಾಗಿತ್ತು. ಆಗ, ರಾಜ್ಯದ ಪ್ರಾದೇಶಿಕ ಕೇಂದ್ರಗಳಲ್ಲೂ ವಸತಿ ವ್ಯವಸ್ಥೆ ಕಲ್ಪಿಸಿ ತರಬೇತಿ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ 7 ಉತ್ಕೃಷ್ಟತಾ ಕೇಂದ್ರಗಳ ಪಕ್ಕದಲ್ಲೇ ಪ್ರತ್ಯೇಕವಾಗಿ 7 ತರಬೇತಿ ಕೇಂದ್ರಗಳನ್ನೂ ತೆರೆಯುವುದಕ್ಕೆ ಇಲಾಖೆ ಅನುಮತಿ ಕೋರಿದೆ.

ತರಬೇತಿ ಕೇಂದ್ರಗಳ ಸ್ಥಾಪನೆಗೆ ಕೋಟ್ಯಂತರ ರೂಪಾಯಿ ವೆಚ್ಚವಾಗಲಿದೆ. ಸೂಕ್ತ ಜಾಗ, ಕಟ್ಟಡ ನಿರ್ಮಾಣ,  ತಜ್ಞರು ಹಾಗೂ ಸಿಬ್ಬಂದಿ ನೇಮಕಾತಿಯೂ ಆಗಬೇಕು. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ ನಂತರ, ಈ ಕೇಂದ್ರಗಳು ಕಾರ್ಯಾರಂಭ ಮಾಡಲು ಕನಿಷ್ಠ ಪಕ್ಷ ಒಂದು ವರ್ಷ ಬೇಕಾಗಬಹುದು ಎಂದು ರಮೇಶ್‌ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೇಂದ್ರ

ಇಲಾಖೆಯು ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ ಮೊದಲ ಉತ್ಕೃಷ್ಟತಾ ಕೇಂದ್ರ ಆರಂಭಿಸಲಿದೆ. ನಂತರ ಉಳಿದ ಕಡೆ ಒಂದೊಂದಾಗಿ ಕೇಂದ್ರಗಳು ಆರಂಭವಾಗಲಿವೆ.

ಕೇಂದ್ರ ಸ್ಥಾಪನೆಗಾಗಿ ಕಿತ್ತೂರಿನ ಅಳ್ನಾವರ ರಸ್ತೆಯಲ್ಲಿ 56 ಎಕರೆ ಜಾಗ ಮೀಸಲಿಡಲಾಗಿದೆ. ಅಲ್ಲಿ ಕಾಮಗಾರಿ ಕೈಗೊಳ್ಳಲು ₹ 150 ಕೋಟಿ ಬೇಕು. ಉಳಿದೆಡೆ ಇನ್ನಷ್ಟೇ ಜಾಗ ಗುರುತು ಹಾಗೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry