ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ತಾತ್ಕಾಲಿಕ ಉಪನಗರ ನಿರ್ಮಾಣ

ಗೊಮ್ಮಟನ ಮಹಾಮಜ್ಜನಕ್ಕೆ ಬರುವ 26 ಸಾವಿರ ಜನರ ವಾಸ್ತವ್ಯಕ್ಕೆ ವ್ಯವಸ್ಥೆ
Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಗೊಮ್ಮಟನ ಮಹಾಮಜ್ಜನದ ಅಂಗವಾಗಿ ಭಕ್ತರ ವಾಸ್ತವ್ಯಕ್ಕಾಗಿ 12 ತಾತ್ಕಾಲಿಕ ಉಪನಗರಗಳ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಕಾಮಗಾರಿ ಬಹುತೇಕ ಮುಗಿದಿದೆ.

ಈ ಪೈಕಿ ತ್ಯಾಗಿ ನಗರ, ಪಂಚಕಲ್ಯಾಣ ನಗರ, ಕಳಸನಗರ, ಸ್ವಯಂ ಸೇವಕ ನಗರ, ಪೊಲೀಸ್‌ ನಗರ ಪೂರ್ಣಗೊಂಡಿದ್ದು, ಉಳಿದ ನಗರಗಳು ವಾರದಲ್ಲಿ ಪೂರ್ಣಗೊಳ್ಳಲಿವೆ. ಇದಕ್ಕಾಗಿ ಉತ್ತರ ಭಾರತದಿಂದ ಬಂದಿರುವ 1,300 ಕಾರ್ಮಿಕರು ಹಗಲು–ರಾತ್ರಿ ದುಡಿಯುತ್ತಿದ್ದಾರೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ₹ 75 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಉಪನಗರಗಳಲ್ಲಿ ₹ 26 ಸಾವಿರ ಜನರಿಗೆ ಆಶ್ರಯ ದೊರಕಲಿದೆ. ಫೆ. 7ರಿಂದ 26ರ ವರೆಗೆ ಮಹೋತ್ಸವ ನಡೆಯುವ ದಿನಗಳಲ್ಲಿ ಒಬ್ಬರು ಒಂದು ದಿನ ತಂಗಿದರೆ ₹ 1,500 ನೀಡಬೇಕಿದೆ.

ಉಪನಗರ ನಿರ್ಮಾಣ, ವಾಹನಗಳ ನಿಲುಗಡೆ, ಇತರ ನಾಗರಿಕ ಸೌಕರ್ಯಕ್ಕಾಗಿ ಶ್ರವಣಬೆಳಗೊಳ ಬೆಟ್ಟದ ಸುತ್ತಮುತ್ತ 494.19 ಎಕರೆ ಭೂಮಿಯನ್ನು ತಾತ್ಕಾಲಿಕವಾಗಿ ಸ್ವಾಧೀನ ಮಾಡಿಕೊಂಡು, ಎಕರೆಗೆ ₹ 36 ಸಾವಿರ ಪರಿಹಾರವನ್ನು ರೈತರಿಗೆ ನೀಡಲಾಗಿದೆ.

ತ್ಯಾಗಿಗಳು, ದೇಶದ ವಿವಿಧೆಡೆಯಿಂದ ಬರುವ ಪ್ರವಾಸಿಗರು ಸೇರಿ 19,500 ಜನರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವಂತೆ ಜೈನ ಮಠವು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಇದರೊಂದಿಗೆ 9 ಸಾವಿರ ಪೊಲೀಸರು, ಇತರ ಸರ್ಕಾರಿ ಸಿಬ್ಬಂದಿ, ಅತಿ ಗಣ್ಯರು, ಸ್ವಯಂ ಸೇವಕರು ಮತ್ತು ದೇಶ, ವಿದೇಶದ ಮಾಧ್ಯಮ ಪ್ರತಿನಿಧಿಗಳಿಗೆ ಆಶ್ರಯ ಒದಗಿಸಲಾಗುತ್ತದೆ.

ಈಗಾಗಲೇ ದೇಶದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಬಂದಿರುವ ಆಚಾರ್ಯರು, ತ್ಯಾಗಿಗಳು, ಮಾತಾಜಿಗಳು ತ್ಯಾಗಿ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸನ್ಯಾಸತ್ವ ದೀಕ್ಷೆ ಪಡೆದಿರುವ ಬ್ರಹ್ಮಚಾರಿಣಿಯರಿಗಾಗಿ ಶೌಚಗೃಹ ಸಹಿತ ಶೆಡ್‌ ನಿರ್ಮಿಸಲಾಗಿದೆ. ಮಾತಾಜಿಗಳಿಗೆ ನಿರ್ಮಾಣ ಮಾಡಿರುವ ಶೆಡ್‌ಗಳಲ್ಲಿ ಪ್ರತ್ಯೇಕ ಶೌಚಗೃಹ ಇದೆ. 500 ಮುನಿಗಳು, ಅವರ ಹಿಂಬಾಲಕರು, ಸೇವಕರು ಸೇರಿ ಒಟ್ಟು 2 ಸಾವಿರ ಜನರು ಈ ನಗರದಲ್ಲಿ ಆಶ್ರಯ ಪಡೆಯಲಿದ್ದಾರೆ.

ಪ್ರತಿ ನಗರಗಳಲ್ಲೂ ಭೋಜನ ಶಾಲೆ, ಮಾಹಿತಿ ಕೇಂದ್ರ, ಆರೋಗ್ಯ ಕೇಂದ್ರ, ಪೊಲೀಸ್‌ ಚೌಕಿ, ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ನಗರಗಳನ್ನು 80 ಅಡಿ ರಸ್ತೆ ಮೂಲಕ ಸಂಪರ್ಕಿಸಲಾಗಿದೆ. ತುರ್ತು ಸಂದರ್ಭದಲ್ಲಿ ತುರ್ತು ನಿರ್ವಹಣೆ ತಂಡಗಳು ತಕ್ಷಣ ತಮ್ಮ ಸೇವೆ ಅಗತ್ಯವಿರುವ ಸ್ಥಳ ತಲುಪಲು ಸಾಧ್ಯವಾಗುವಂತೆ ರಸ್ತೆ ನಿರ್ಮಿಸಲಾಗಿದೆ.

ಉಪನಗರಗಳ ಸ್ವಚ್ಛತೆಗಾಗಿ ಉತ್ತರ ಭಾರತದಿಂದ 500 ಕೂಲಿ ಕಾರ್ಮಿಕರು ಬಂದಿದ್ದು, ತಿಂಗಳಿಗೆ ₹ 8,100 ವೇತನ ನಿಗದಿ ಮಾಡಲಾಗಿದೆ.

‘ಯಾತ್ರಾರ್ಥಿಗಳ ವಾಸ್ತವ್ಯದ ಅನುಕೂಲಕ್ಕಾಗಿ ರೈಲು ನಿಲ್ದಾಣ ಬಳಿಯೇ ಯಾತ್ರಿ ನಗರ ನಿರ್ಮಿಸಲಾಗಿದೆ’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷ ಅಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪನಗರಗಳ ಮುಂಭಾಗ ಖಾಲಿ ಸ್ಥಳ ಹಾಗೂ ರಸ್ತೆಯ ಇಕ್ಕೆಲಗಳನ್ನು ಸಿಂಗರಿಸಲಾಗುವುದು. ಮುಂಭಾಗದಲ್ಲಿ ಚಿಮ್ಮುವ ಕಾರಂಜಿ ಹಾಗೂ ಅಲಂಕಾರಿಕ ಗಿಡಗಳನ್ನು ಇರಿಸಲಾಗುವುದು. ರಸ್ತೆಯ ಎರಡೂ ಬದಿಗಳಲ್ಲಿ ಆಕಾಶ ಬುಟ್ಟಿ ಮಾದರಿಯ ಆಧುನಿಕ ವಿದ್ಯುತ್‌ ದೀಪಗಳಿಂದ ಅಲಂಕರಿಸಲು ಉದ್ದೇಶಿಸಲಾಗಿದೆ. ವೃತ್ತಗಳನ್ನು ಬಣ್ಣದಲ್ಲಿ ಮಿಂದೆದ್ದ ಹಳೆಯ ಟೈರ್‌ಗಳ ಮೂಲಕ ಸಿಂಗರಿಸಲು ಕಲಾವಿದರ ನೆರವು ಪಡೆಯಲಾಗುವುದು’ ಎಂದು ಅವರು ಹೇಳಿದರು.

ನವೀನ ಶೈಲಿಯ ಕಳಸ ನಗರ

ಮಹಾಮಸ್ತಕಾಭಿಷೇಕ ಮಾಡಲು ಕಳಸ ಪಡೆಯುವ ಭಕ್ತರ ವಾಸ್ತವ್ಯಕ್ಕಾಗಿ ನವೀನ ಶೈಲಿಯ ಮೂರು ಕೊಠಡಿಗಳ ಮನೆಗಳನ್ನು ಹೊಂದಿರುವ ಕಳಸ ನಗರ ನಿರ್ಮಿಸಲಾಗಿದೆ.

ಇಲ್ಲಿ ಅಭಿಷೇಕ ಮಾಡಲು ಬರುವ ಭಕ್ತರು ತಮ್ಮ ಕುಟುಂಬದೊಡನೆ ತಂಗಬಹುದು. ಪ್ರತಿ ಮನೆಯೂ ಶೌಚ, ಸ್ನಾನಗೃಹ ಸೌಲಭ್ಯ ಹೊಂದಿದೆ.

ಬ್ಯಾಟರಿ ಚಾಲಿತ ವಾಹನ
ಉಪನಗರಗಳ ಭೇಟಿಗೆ ಅನುಕೂಲವಾಗುವಂತೆ 10 ಬ್ಯಾಟರಿ ಚಾಲಿತ ವಾಹನಗಳು ಬಂದಿವೆ. 6 ಗಂಟೆ ಚಾರ್ಜ್‌ ಮಾಡಿದರೆ ಸುಮಾರು 70 ಕಿ.ಮೀ ಸಂಚರಿಸಬಹುದು. ಒಂದು ವಾಹನದಲ್ಲಿ 6ರಿಂದ 8 ಮಂದಿ ಪ್ರಯಾಣಿಸಬಹುದು.

ಉಪ ನಗರಗಳು:
ತ್ಯಾಗಿ ನಗರ
ಕಳಸ ನಗರ–2
ಸ್ವಯಂಸೇವಕ ನಗರ
ಮಾಧ್ಯಮ ನಗರ
ಪಂಚಕಲ್ಯಾಣ ನಗರ
ಸಾಂಸ್ಕೃತಿಕ ನಗರ
ಯಾತ್ರಿ ನಗರ
ವಸ್ತುಪ್ರದರ್ಶನ ನಗರ
ಅಧಿಕಾರಿಗಳ ನಗರ
ಪೊಲೀಸ್ ನಗರ
ಭಜನಾ ನಗರ

*12 ಉಪನಗರಗಳ ನಿರ್ಮಾಣಕ್ಕೆ ಮಂಜೂರಾದ ₹ 75 ಕೋಟಿ ಅನುದಾನದಲ್ಲಿ ₹ 12 ಕೋಟಿ ಸರಕು ಮತ್ತು ಸೇವಾ ತೆರಿಗೆಗೆ ಹೋಗಿದೆ.

– ಬಿ.ಎನ್‌.ವರಪ್ರಸಾದ್‌ ರೆಡ್ಡಿ, ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT