ಅಹಂ ನಿರಸನ

7

ಅಹಂ ನಿರಸನ

Published:
Updated:
ಅಹಂ ನಿರಸನ

ಭರತ ಚಕ್ರವರ್ತಿ ದಿಗ್ವಿಜಯಕ್ಕೆ ಹೊರಟಾಗ ಆತನ ಅಹಂ ಭಾವನೆ ಪರಮಾಣು ರೂಪದಲ್ಲಿತ್ತು. ಆದರೆ ಖಂಡ ಖಂಡಗಳನ್ನು ಜಯಿಸಿ, ಜೈ ಜೈಕಾರ ಕೇಳುತ್ತಾ, ಹೊಗಳಿಕೆಯ ಚಪ್ಪಾಳೆ ಆಲಿಸುತ್ತಾ ವೃಷಭಾಚಲ ಸಮೀಪ ಬಂದಾಗ, ಆತನ ಅಹಂ ಗಟ್ಟಿಯಾಗಿತ್ತು. ‘ನಾನೇ ಪ್ರಥಮ ಚಕ್ರವರ್ತಿ. ನನ್ನ ಸಾಧನೆಯನ್ನು ಚಿರಸ್ಥಾಯಿ ಗೊಳಿಸಬೇಕು’ ಎಂದು ಇಚ್ಛಿಸಿದ. ವೃಷಭಗಿರಿ ಶಿಲೆಯ ಮೇಲೆ ತನ್ನ ಪ್ರಶಸ್ತಿ ಕೆತ್ತಿಸಲು ಬಯಸಿದ.

ಹೋಗಿ ನೋಡುತ್ತಾನೆ, ಬೆಟ್ಟದ ಬಂಡೆಯ ತುಂಬೆಲ್ಲ ಹಿಂದಿನ ಅರಸರ ಪ್ರಶಸ್ತಿಗಳಿಂದ ತುಂಬಿ ಹೋಗಿವೆ. ತನ್ನ ಪ್ರಶಸ್ತಿಗೆ ಸ್ಥಳವೇ ಇಲ್ಲ. ಆಗ ಅವನ ಅಹಂಕಾರ ಸೋರಿ ಹೋಯಿತು. ಆದರೂ ಸದ್ಬುದ್ಧಿ ಬರಲಿಲ್ಲ. ಹಿಂದಿನದನ್ನು ಅಳಿಸಿ ಹಾಕಿ ತನ್ನ ಪ್ರಶಸ್ತಿ ಕೆತ್ತಿಸಿದ. ಭರತ ತನ್ನ ರಾಜಧಾನಿಗೆ ಹತ್ತಿರವಾದಾಗ ಆತನ ಚಕ್ರರತ್ನ ಚಲಿಸದೆ ನಿಂತಿತು. ಹಗೆಗಳು ಇರುವುದನ್ನು ಸೂಚಿಸಿತು. ತನ್ನ ಸೋದರರೇ ಶರಣಾಗಿಲ್ಲ ಎಂಬುದು ತಿಳಿಯಿತು. ಒಡ ಹುಟ್ಟಿದವರೆಲ್ಲ ದೀಕ್ಷಿತರಾದರು. ಆದರೆ ಸ್ವಾಭಿಮಾನಿ ಬಾಹುಬಲಿ ಮಣಿಯಲಿಲ್ಲ. ಧರ್ಮಯುದ್ಧ ಘಟಿಸಿತು. ಭರತ ಪರಾಜಿತನಾದ. ಆದರೂ ನಿಯಮ ಬಾಹಿರನಾಗಿ ಚಕ್ರವನ್ನು ಪ್ರಯೋಗಿಸಿಯೇ ಬಿಟ್ಟ. ಚಕ್ರರತ್ನ ಬಾಹುಬಲಿಯನ್ನು ಘಾತಿಸಲು ಸಾಧ್ಯವಾಗದೆ ತಟಸ್ಥವಾಯಿತು. ಭರತ ಲಜ್ಜಿತನಾದ. ಉನ್ನತರಿಗೆ ಉನ್ನತರು ಇದ್ದೇ ಇರುವರು ಎಂಬ ಅರಿವಾಗಿ, ಆತನ ಅಹಂ ಪೂರ್ಣವಾಗಿ ನಿರಸನಗೊಂಡಿತು.

ಈ ಘಟನೆಯಿಂದ ಬಾಹುಬಲಿಗೆ ವೈರಾಗ್ಯ ಉದಯಿಸಿತು. ತಪಸ್ವಿಯಾದ. ನಿಂತ ಜಾಗದಲ್ಲೇ ನಿಂತು ಒಂದು ವರ್ಷ ತಪಸ್ಸು ಮಾಡಿದರೂ ಕೇವಲಿ ಆಗಲಿಲ್ಲ. ‘ಅಣ್ಣನನ್ನು ನೋಯಿಸಿದೆ. ಆತನ ನೆಲದಲ್ಲೇ ನಿಂತು ತಪಸ್ಸು ಮಾಡುವಂತಾಯಿತು’ ಎಂಬ ಭಾವನೆ, ಮಾನ ಕಷಾಯವಾಗಿ ಬಾಧಿಸುತ್ತಿತ್ತು. ಇದನ್ನು ಅರಿತ ಭರತೇಶ್ವರನು ವಿನಯವಂತನಾಗಿ ಬಂದು, ಬಾಹುಬಲಿ ಮುನಿಗೆ ನಮಿಸಿ, ‘ಈ ನೆಲ ನನ್ನದೂ ಅಲ್ಲ, ನಿಮ್ಮದೂ ಅಲ್ಲ, ಯಾರದೂ ಅಲ್ಲ. ಇದರ ಮೇಲೆ ಯಾರ ಹಕ್ಕೂ ಇಲ್ಲ. ಯಥಾರ್ಥವನ್ನು ಪರಿಭಾವಿಸಿ’ ಎಂದು ಪ್ರತಿಬೋಧಿಸಿದಾಗ, ಆತನ ಅಹಂ ನಿರಸನಗೊಂಡು ಜಿನನಾದ.

ಇಂಥ ಬಾಹುಬಲಿ ಜಿನನ ಉನ್ನತವೂ ಅತಿಶಯವೂ ಸುಂದರವೂ ಆದ ಅನುಪಮ ಪ್ರತಿಮೆಯನ್ನು ಬ್ರಹ್ಮಕ್ಷತ್ರಕುಲದ ಚಾವುಂಡರಾಯನು ತನ್ನ ತಾಯಿಗಾಗಿ ಬೆಳಗೊಳದ ದೊಡ್ಡಬೆಟ್ಟದಲ್ಲಿ ನಿರ್ಮಿಸಿದ. ಆಗ ಅವನಲ್ಲಿ ಅಹಂ ಭಾವನೆ ಗಟ್ಟಿಯಾಗಿರಬೇಕು. ಆದ್ದರಿಂದಲೇ ಆತನು ಮಾಡಿದ ನೂರಾರು ಕೊಡಗಳ ಜಲಾಭಿಷೇಕ, ಕ್ಷೀರಾಭಿಷೇಕ ಸ್ವಾಮಿಯ ಸೊಂಟದಿಂದ ಕೆಳಗೆ ಇಳಿಯಲೇ ಇಲ್ಲ. ಎಲ್ಲರಿಗೂ ಅಂಜಿಕೆ ಬೆರೆತ ಸೋಜಿಗ! ಆಗ ಅಜ್ಜಿ ಬಂದಳು. ಗುಳ್ಳಕಾಯಲ್ಲಿ ಹಾಲನ್ನು ತಂದಳು. ಭಕ್ತಿಯಿಂದ ಅಭಿಷೇಕ ಮಾಡಿದಳು.

ಗುಳ್ಳದ ಕಾಯಜ್ಜಿ ಹಾಲೊಂದು ಕೆನೆಮೊಸರು

ಅಲ್ಲಿ ಕೊಂಡಲ್ಲಿ ಅಭಿಷೇಕ | ಮಾಡಿದರು

ಹಳ್ಳ ನೀರಾಗಿ ಹರಿದಾವೆ ||


ವೃಷಭಗಿರಿಯಿಂದ ಭರತನ; ಭರತನಿಂದ ಬಾಹುಬಲಿಯ; ಗುಳ್ಳಕಾಯಜ್ಜಿಯಿಂದ ಚಾವುಂಡರಾಯನ ಅಹಂಕಾರ ನಿರಸನಗೊಂಡಂತೆ, ಮಹಾ

ಮಸ್ತಕಾಭಿಷೇಕದ ದರ್ಶನದಿಂದ ನಮ್ಮೆಲ್ಲರ ಗರ್ವರಸ ಹಳ್ಳದ ನೀರಾಗಿ ಹರಿದು ಹೋಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry