‘ಸಂಭ್ರಮ’ ಮರಳಿ ಬರುತಿದೆ...

7

‘ಸಂಭ್ರಮ’ ಮರಳಿ ಬರುತಿದೆ...

Published:
Updated:
‘ಸಂಭ್ರಮ’ ಮರಳಿ ಬರುತಿದೆ...

ಧಾರವಾಡ: ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಜ್ವಲಂತ ಸಮಸ್ಯೆಗಳ ಕುರಿತ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸುವ 'ಧಾರವಾಡ ಸಾಹಿತ್ಯ ಸಂಭ್ರಮ'ದ 6ನೇ ಆವೃತ್ತಿ ಇಂದಿನಿಂದ (ಜ. 19-21) ಮೂರು ದಿನಗಳ ಕಾಲ ಜರುಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಪ್ರಜಾವಾಣಿ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜರುಗಲಿರುವ ಮೂರು ದಿನಗಳ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾಗಲು ಕರ್ನಾಟಕ ವಿಶ್ವವಿದ್ಯಾಲಯದ 'ಸುವರ್ಣ ಮಹೋತ್ಸವ ಭವನ' ಸಜ್ಜಾಗಿದೆ.

ಡಾ. ಎಂ.ಎಂ.ಕಲಬುರ್ಗಿ ಅವರ ಅಗಲಿಕೆಯ ನಂತರದಲ್ಲಿ ನಡೆಯುತ್ತಿರುವ ಮೂರನೇ ಸಾಹಿತ್ಯ ಸಂಭ್ರಮ ಇದಾಗಿದ್ದು, ಈ ಬಾರಿಯೂ ಅವರನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ 'ಆದಿಲಶಾಹಿ ಸಾಹಿತ್ಯ' ಕುರಿತು ಗೋಷ್ಠಿಯೊಂದನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮೂರು ದಿನಗಳ ಸಾಹಿತ್ಯೋತ್ಸವದಲ್ಲಿ ಕನ್ನಡ ಲಿಪಿ ಸುಧಾರಣೆ, ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆ, ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ನೀತಿ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಯಲಿದೆ.

ಮೂರು ದಿನಗಳ ‘ಸಾಹಿತ್ಯ ಸಂಭ್ರಮ’ದಲ್ಲಿ ಒಟ್ಟು 15 ಗೋಷ್ಠಿಗಳು ನಡೆಯಲಿವೆ. ಪ್ರತಿ ದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

"ವಿಜಯಪುರದಿಂದ ಕನ್ನಡದ ಉತ್ತರ ಭಾಗವನ್ನು ಆಳಿದ್ದ ಆದಿಲಶಾಹಿ ಇತಿಹಾಸ ಕರ್ನಾಟಕಕ್ಕೆ ಅಷ್ಟು ಪರಿಚಿತವಾಗಿಲ್ಲ. ಅರೆಬಿಕ್‌, ಪರ್ಷಿಯನ್‌, ದಕ್ಖನಿ, ಉರ್ದು ಭಾಷೆಯಲ್ಲಿರುವ ಈ ಸಾಹಿತ್ಯವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ಕಲಬುರ್ಗಿ ಮಾಡಿದ್ದರು. 'ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ'ದವರು 18 ಸಂಪುಟಗಳಲ್ಲಿ ಇದನ್ನು ಪ್ರಕಟಿಸಿದ್ದಾರೆ. ಇವುಗಳ ಕುರಿತು ಗೋಷ್ಠಿಯಲ್ಲಿ ಚರ್ಚೆ ನಡೆಯಲಿದೆ" ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಗಿರಡ್ಡಿ ಗೋವಿಂದರಾಜ ತಿಳಿಸಿದರು.

‘ಕಳೆದ ಎರಡು ವರ್ಷಗಳಿಂದ ಸಂಭ್ರಮಕ್ಕೆ ಗೈರಾಗಿದ್ದ ಗಿರೀಶ ಕಾರ್ನಾಡರು ಈ ಗೋಷ್ಠಿಯನ್ನು ನಡೆಸಿಕೊಡುವ ಮೂಲಕ ಈ ಬಾರಿ ನಮ್ಮ ಸಂಭ್ರಮ ಹೆಚ್ಚಿಸುತ್ತಿದ್ದಾರೆ. ಕನ್ನಡ ರಂಗಭೂಮಿಯ ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ ಕುರಿತ ಗೋಷ್ಠಿಯಲ್ಲಿ, ಪ್ರವೃತ್ತಿ ಮತ್ತು ಪರಿವರ್ತನೆಗಳಲ್ಲಿ ಕನ್ನಡ ರಂಗಭೂಮಿ ಕಳೆದುಕೊಂಡಿದ್ದು ಹಾಗೂ ಗಳಿಸಿದ್ದು ಏನು ಎನ್ನುವುದರ ಚರ್ಚೆ ನಡೆಯಲಿದೆ’ ಎಂದು ವಿವರಿಸಿದರು.

‘ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಲಿಪಿಯ ಸುಧಾರಣೆ ಅಗತ್ಯವೇ? ವಿಷಯದ ಚರ್ಚೆಗೆ ಈ ಬಾರಿಯ ಸಂಭ್ರಮ ವೇದಿಕೆ ಕಲ್ಪಿಸಿದೆ. ಕನ್ನಡ ಲಿಪಿಯಲ್ಲಿನ ಸಂಖ್ಯೆ, ಒತ್ತಕ್ಷರಗಳ ವಿನ್ಯಾಸ, ಸ್ವರಗಳ ಸಂಜ್ಞೆಗಳು, ಮಹಾಪ್ರಾಣಗಳು ಇತ್ಯಾದಿ ವಿಷಯಗಳ ಕುರಿತು ಭಾಷಾ ತಜ್ಞರ ನಡುವೆ ಸಂವಾದ ನಡೆಯಲಿದೆ. ಅಭಿವೃದ್ಧಿ ಮತ್ತು ಪರಿಸರ ಕುರಿತ ಚರ್ಚೆಯ ಮೂಲಕ ಧಾರವಾಡದ ಸಾಹಿತ್ಯ ಸಂಭ್ರಮದ 6ನೇ ಆವೃತ್ತಿಗೆ ತೆರೆ ಬೀಳಲಿದೆ’ ಎಂದು ಗಿರಡ್ಡಿ ತಿಳಿಸಿದರು.

ಸಾಹಿತ್ಯ ಕೃತಿಗಳನ್ನು ಕಾಲಕಾಲಕ್ಕೆ ಮರುಓದಿಗೆ ಒಳಪಡಿಸುವುದು ಸಾಹಿತ್ಯ ಸಂಭ್ರಮ ನಡೆಸಿಕೊಂಡು ಬಂದ ಪರಂಪರೆ. ಈ ಬಾರಿ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ಜಯಂತ ಕಾಯ್ಕಿಣಿ ಓದಲಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅನುಲಕ್ಷಿಸಿ ಮರುಓದು, ಕಾವ್ಯ ಮತ್ತು ಸಂಗೀತದ ಸಂಬಂಧ, ಸಾಹಿತಿಗಳೊಂದಿಗಿನ ಒಡನಾಟ - ಹೀಗೆ ಹಲವು ಗೋಷ್ಠಿಗಳು ನಡೆಯಲಿವೆ.

ಮೂರೂ ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಬೆಳಗಲ್ ವೀರಣ್ಣ ಅವರಿಂದ ತೊಗಲು ಗೊಂಬೆಯಾಟ, ಎರಡನೇ ದಿನ ಫಯಾಜ್ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮೂರನೇ ದಿನ ‘ಹರಿವು’ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಚಿತ್ರ ನಿರ್ದೇಶಕ ಯೋಗರಾಜ ಭಟ್‌ ಅವರೊಂದಿಗೆ ಸಂವಾದ ಎರಡನೇ ದಿನದ ಕೊನೆಯಲ್ಲಿ ನಡೆಯಲಿದೆ.

ಹೊಸಬರಿಗೆ ಅವಕಾಶ:

ಈ ಬಾರಿಯೂ ಸಂಭ್ರಮದಲ್ಲಿ ಶೇ 65ರಷ್ಟು ಯುವ ಸಾಹಿತಿಗಳಿಗೆ ಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಒಟ್ಟು 233 ಸಾಹಿತಿಗಳು ಈ ಬಾರಿಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ 86 ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿ ಇರಲಿದ್ದಾರೆ. ಉಳಿದವರು ಆಹ್ವಾನಿತರಾಗಿ ಭಾಗವಹಿಸುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿ ಬರುತ್ತಿರುವ ಅರ್ಜಿಗಳು ಹೆಚ್ಚಾಗಿರುವುದು ಟ್ರಸ್ಟ್‌ಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಆವರಣದ ಹೊರಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಹಾಕಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುತ್ತಿರುವುದು ಈ ಬಾರಿಯೂ ಮುಂದುವರೆಯಲಿದೆ. ಜತೆಗೆ 'ವಿವಿಡ್‌ಲಿಪಿ' ಮೂಲಕ ಅಂತರ್ಜಾಲದಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆಯಾಗಿದೆ. ಹುಬ್ಬಳ್ಳಿಯಲ್ಲಿರುವ ಕೆಎಲ್‌ಇ ಸಂಸ್ಥೆಯ ಸಭಾಭವನದಲ್ಲೂ ವಿವಿಡ್‌ಲಿಪಿಯ ನೇರಪ್ರಸಾರದ ಪ್ರದರ್ಶಿಸಲು ಶಿಕ್ಷಣ ಸಂಸ್ಥೆ ಮುಂದಾಗಿದೆ.

‘ಸಾಹಿತ್ಯ-ಸಂಸ್ಕೃತಿ ಕುರಿತು ಮುಕ್ತ ಚರ್ಚೆಗೆ ಸಂಭ್ರಮ ವೇದಿಕೆ ಕಲ್ಪಿಸುತ್ತಿದೆ. ಇದು ಯಾವುದೇ ಒಂದು ಪಂಥ ಅಥವಾ ಸಿದ್ಧಾಂತಕ್ಕೆ ಸೀಮಿತವಾಗಿಲ್ಲ. ಯಾವುದೇ ನಿರ್ಣಯಗಳನ್ನು ಯಾರ ಮೇಲೂ ಹೇರುವುದಿಲ್ಲ. ಪ್ರತಿಯೊಬ್ಬರ ವಿಚಾರಗಳ ಅಭಿವ್ಯಕ್ತಿಗೂ ಅವಕಾಶವಿದೆ. ಆದರೆ ಇಂಥ ಸಾಹಿತ್ಯೋತ್ಸವಕ್ಕೆ ಸರ್ಕಾರದ ಅನುದಾನ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ನಾವು ಯಾರ ಬಳಿಯೂ ಚಂದಾ ವಸೂಲಿಗೆ ಹೋಗುತ್ತಿಲ್ಲ. ಒಂದೊಮ್ಮೆ ಅನುದಾನದ ಕೊರತೆ ಹೀಗೇ ಮುಂದುವರಿದರೆ ಸಂಭ್ರಮ ನಿಲ್ಲಿಸುವಂಥ ನಿರ್ಧಾರ ತೆಗೆದುಕೊಳ್ಳುವುದೂ ಅನಿವಾರ್ಯವಾಗಲಿದೆ’ ಎಂದು ಸಂಭ್ರಮದ ನಡುವೆಯೂ ಗಿರಡ್ಡಿ ಅವರು ತಮ್ಮ ಆತಂಕ ವ್ಯಕ್ತಪಡಿಸಿದರು.

* ಸಚಿವೆ ಉಮಾಶ್ರೀ ಅವರಿಂದ ಸಂಭ್ರಮಕ್ಕೆ ಚಾಲನೆ.

* ರಾಮಚಂದ್ರ ಗುಹಾ, ಡಾ. ಜಿ.ಎನ್. ದೇವಿ, ಉಲ್ಲಾಸ ಕಾರಂತರ ವಿಶೇಷ ಉಪನ್ಯಾಸ.

* ಶೇ 65ರಷ್ಟು ಯುವ ಸಾಹಿತಿಗಳಿಗೆ ಅವಕಾಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry