ನಾರಿಮನ್‌ ಹೌಸ್‌: ಮೊಶೆ– ನೆತನ್ಯಾಹು ಭಾವನಾತ್ಮಕ ಭೇಟಿ

7

ನಾರಿಮನ್‌ ಹೌಸ್‌: ಮೊಶೆ– ನೆತನ್ಯಾಹು ಭಾವನಾತ್ಮಕ ಭೇಟಿ

Published:
Updated:
ನಾರಿಮನ್‌ ಹೌಸ್‌: ಮೊಶೆ– ನೆತನ್ಯಾಹು ಭಾವನಾತ್ಮಕ ಭೇಟಿ

ಮುಂಬೈ: ಭಾರತ ಪ್ರವಾಸದಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ಕೊಲಾಬಾದಲ್ಲಿರುವ ನಾರಿಮನ್ ಹೌಸ್‌ನಲ್ಲಿ (ಛಾಬಡ್‌ ಹೌಸ್‌) 26/11ರ ಭಯೋತ್ಪಾದಕ ದಾಳಿಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಬ‌ದುಕುಳಿದಿದ್ದ ಇಸ್ರೇಲ್‌ನ ಬಾಲಕ 11 ವರ್ಷ ವಯಸ್ಸಿನ ಮೊಶೆಯನ್ನು ಗುರುವಾರ ಭೇಟಿ ಮಾಡಿದರು.

ಮೊಶೆ ಹಾಗೂ ಅವನನ್ನು ರಕ್ಷಿಸಿದ್ದ ಭಾರತದ ದಾದಿ ಸಾಂಡ್ರಾ ಸಾಮ್ಯುಯೆಲ್‌ ಅವರನ್ನು ತಮ್ಮ ಎರಡೂ ಬದಿಯಲ್ಲಿ ನಿಲ್ಲಿಸಿದ್ದ ನೆತನ್ಯಾಹು, ನಾರಿಮನ್‌ ಹೌಸ್‌ನಲ್ಲಿ ನಿರ್ಮಾಣಗೊಳ್ಳಲಿರುವ ದಾಳಿ ಸಂತ್ರಸ್ತರ ಸ್ಮಾರಕದ ರೂಪುರೇಷೆಯನ್ನು ಅನಾವರಣಗೊಳಿಸಿದರು.

ಮೊಶೆಯ ಅಜ್ಜ–ಅಜ್ಜಿಯಂದಿರು, ಚಿಕ್ಕಂಪ್ಪಂದಿರು ಕೂಡ ಜೊತೆಗಿದ್ದರು.

ಭಾವುಕ ಕಾರ್ಯಕ್ರಮ: ಉದ್ವೇಗ, ಖುಷಿ, ದುಃಖ, ದೃಢತೆ... ಭಾವನೆಗಳೇ ಮೇಳೈಸಿದ್ದ ಕಾರ್ಯಕ್ರಮದಲ್ಲಿ ನೆತನ್ಯಾಹು ಅವರು ಮೊಶೆಯನ್ನು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿ ನಿರಂತರವಾಗಿ ಮಾತನಾಡುತ್ತಿದ್ದುದು ಕಂಡು ಬಂತು.

ಅಲ್ಲಿದ್ದ ಸಣ್ಣ ವೇದಿಕೆಯ ಮೇಲೆಯೂ ಮೊಶೆ, ಸಾಂಡ್ರಾ ಹಾಗೂ ಇತರರೊಂದಿಗೆ ನೆತನ್ಯಾಹು ಮಾತನಾಡುತ್ತಿದ್ದರು. ಸ್ಮಾರಕಕ್ಕೆ ಸಂಬಂಧಿಸಿದ ವಿವರಗಳನ್ನು ಮೊಶೆ ಹೀಬ್ರೂ ಭಾಷೆಯಲ್ಲಿ ಓದುತ್ತಿದ್ದಾಗಲೂ ಇಸ್ರೇಲ್‌ ಪ್ರಧಾನಿ ಕೈ ಬಾಲಕನ ಹೆಗಲ ಮೇಲಿತ್ತು. ಅಲ್ಲದೇ ಅವನ ತಲೆಗೆ ಮುತ್ತಿಟ್ಟು ಪ್ರೀತಿಯನ್ನೂ ತೋರಿದರು.

ನಂತರ ಮಾತನಾಡಿದ ನೆತನ್ಯಾಹು, ‘ಇಸ್ರೇಲ್‌ ಜನರಿಗೆ ತೋರುವ ಪ್ರೀತಿ ಮತ್ತು ಅವರ ವಿರುದ್ಧ ಸಾಧಿಸುವ ದ್ವೇಷದ ವಿಶಿಷ್ಟ ಸಮ್ಮಿಲನ ಈ ಜಾಗದಲ್ಲಿದೆ’ ಎಂದು ಹೀಬ್ರೂ ಭಾಷೆಯಲ್ಲಿ ಹೇಳಿದರು.

ನಾರಿಮನ್‌ ಹೌಸ್‌ನಲ್ಲಿ ತಮಗೆ ಆತಿಥ್ಯ ನೀಡಿದ್ದಕ್ಕೆ ಮೊಶೆಗೆ ಧನ್ಯವಾದ ಅರ್ಪಿಸಿದರು.

‘ನಿನ್ನ ಪೋಷಕರು ಜನರಿಗೆ ಪ್ರೀತಿ ತೋರಿದರು ಮತ್ತು ಎಲ್ಲರನ್ನೂ ಈ ಜಾಗಕ್ಕೆ ಸ್ವಾಗತಿಸಿದರು. ಪ್ರತಿಯೊಬ್ಬ ಯಹೂದಿಗೂ ಆಶ್ರಯ ನೀಡಿದರು. ಆದರೆ, ಭಯೋತ್ಪಾದಕರು ಇಸ್ರೇಲ್‌ ಬಗ್ಗೆ ದ್ವೇಷ ಕಾರಿದರು. ಇಸ್ರೇಲ್‌ ಜನ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರೂ, ದೇವರ ನೆರವಿನಿಂದ ಎಲ್ಲವನ್ನೂ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ನೆತನ್ಯಾಹು ಹೇಳಿದರು.

ಮೊಶೆ ಅವರ ತಂದೆ ತಾಯಿಯ ಸ್ಮರಣಾರ್ಥ ನಾರಿಮನ್‌ ಹೌಸ್‌ನಲ್ಲಿ ಫಲಕವನ್ನೂ ಅವರು ಅನಾವರಣ ಮಾಡಿದರು.

**

‘ಭಾರತ–ಇಸ್ರೇಲ್‌ ಪಾಲುದಾರಿಕೆ ಸ್ವರ್ಗದಲ್ಲೇ ನಿರ್ಣಯ’

ಭಾರತ ಮತ್ತು ಇಸ್ರೇಲ್‌ ನಡುವಣ ಪಾಲುದಾರಿಕೆ ‘ಸ್ವರ್ಗದಲ್ಲೇ ನಿರ್ಣಯ’ ಆಗಿರುವಂತಹದ್ದು ಎಂದು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಬಣ್ಣಿಸಿದರು.

ಈ ಪಾಲುದಾರಿಕೆಯು ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಮೌಲ್ಯಗಳಿಂದ ಕೂಡಿದೆ ಎಂದು ಹೇಳಿದರು.

ಭಾರತ–ಇಸ್ರೇಲ್‌ ವ್ಯಾಪಾರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರೊಂದಿಗೆ ತಾವು ಹೊಂದಿರುವ ವೈಯಕ್ತಿಕ ಗೆಳೆತನವನ್ನು ಉಲ್ಲೇಖಿಸಿದರು. ‘ಈ ಆತ್ಮೀಯ ಬಾಂಧವ್ಯ ಜನಸಾಮಾನ್ಯನವರೆಗೂ ಮುಂದುವರಿಯುತ್ತದೆ’ ಎಂದರು.

‘ಈ ಪ್ರವಾಸ ಅಸಾಮಾನ್ಯವಾಗಿತ್ತು. ಭಾರತ, ಅದರ ಜನರು ಮತ್ತು ಸಂಸ್ಕೃತಿಯ ಬಗ್ಗೆ ಇಸ್ರೇಲ್‌ಗೆ ಅಪಾರವಾದ ಗೌರವ ಇದೆ’ ಎಂದ ಅವರು, ಇಸ್ರೇಲ್‌ನಲ್ಲಿ ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮಿಗಳಿಗೆ ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry