ಪ್ರತಿಭಟನೆ: ಸರ್ಕಾರಿ ನೌಕರರ ಜಟಾಪಟಿ

7

ಪ್ರತಿಭಟನೆ: ಸರ್ಕಾರಿ ನೌಕರರ ಜಟಾಪಟಿ

Published:
Updated:

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಗುರುವಾರ ಮಧ್ಯಾಹ್ನ ಪ್ರತಿಭಟನೆ ವೇಳೆ ಸರ್ಕಾರಿ ನೌಕರರ ಎರಡು ಸಂಘಟನೆಗಳ ಪದಾಧಿಕಾರಿಗಳು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿ, ಜಟಾಪಟಿಗೆ ಇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಬಿ.ಪಿ.ಮಂಜೇಗೌಡ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಅಲ್ಲಿಗೆ ಬಂದ ವಿಧಾನ ಪರಿಷತ್ ಸಚಿವಾಲಯದ ಸಂಘ ಪದಾಧಿಕಾರಿಗಳು ಮಂಜೇಗೌಡ ವಿರುದ್ಧ ಘೋಷಣೆಗಳನ್ನು ಹಾಕಿ ಪ್ರತಿಭಟನೆಗೆ ಕುಳಿತರು.

ವಿಧಾನ ಪರಿಷತ್ ಸಚಿವಾಲಯದ ಸಂಘ ಪದಾಧಿಕಾರಿಗಳು ಮಂಜೇಗೌಡ ಅವರ ವಿರುದ್ಧ ದಿಕ್ಕಾರ ಹಾಕಿದರು. ಇದರಿಂದ ಕೆರಳಿದ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿರೋಧಿ ಬಣದ ಮೇಲೇರಿ ಹೋದರು.

‘ಸಂಘದ ಹಣವನ್ನು ದುರುಪಯೋಗ ಮಾಡಿರುವುದರಿಂದ ಮಂಜೇಗೌಡರನ್ನು ಸಂಘದಿಂದ ಕಿತ್ತು ಹಾಕಬೇಕು. ಇದನ್ನು ಪ್ರಶ್ನಿಸಲು ಹೋದರೆ ಸಂಘದಿಂದ ವಜಾ ಮಾಡುತ್ತಾರೆ. ಇಂತಹವರು ಸಂಘದಲ್ಲಿ ಮುಂದುವರಿಯಬಾರದು’ ಎಂದು ವಿಧಾನಪರಿಷತ್‌ ಸಚಿವಾಲಯದ ಸಂಘದ ಅಧ್ಯಕ್ಷ ಶ್ರೀಕಾಂತ್‌ ಏರಿದ ಧ್ವನಿಯಲ್ಲಿ ಆಗ್ರಹಿಸಿದರು.

ಮಧ್ಯೆ ಪ್ರವೇಶಿಸಿದ ಪೊಲೀಸರು ಎರಡೂ ಬಣದವರನ್ನು ಸಮಾಧಾನಗೊಳಿಸಿ ಹಿಂದಕ್ಕೆ ಕಳುಹಿಸಿದರು.

ಹಳೆ ಪಿಂಚಣಿ ಯೋಜನೆ ಜಾರಿಗೆ ಮನವಿ: ಹೊಸ ಪಿಂಚಣಿ ಯೋಜನೆಯಿಂದ ಬಾಧಿತರಾಗಿರುವ ನೌಕರರ ಸಮಸ್ಯೆ ಬಗೆಹರಿಸಲು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.

ಹೊಸ ಪಿಂಚಣಿ ಯೋಜನೆಯಿಂದ ರಾಜ್ಯದಲ್ಲಿ 1.80 ಲಕ್ಷ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ತೊಂದರೆ ಸಿಲುಕುವ ಸಾಧ್ಯತೆ ಇದೆ. 6 ನೇ ವೇತನ ಆಯೋಗ ವರದಿ ನೀಡುವ ಸಂದರ್ಭದಲ್ಲಿ ಈ ಲೋಪ ಸರಿಪಡಿಸಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry