ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಕಡಿತ: ನೆಪ ಹೇಳಿ ಜಾರುವಂತಿಲ್ಲ

ದೂರಸಂಪರ್ಕ ಕಂಪನಿಗಳಿಗೆ ಟ್ರಾಯ್‌ ಕಡಕ್‌ ಎಚ್ಚರಿಕೆ
Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಗೋಪುರಗಳನ್ನು ಅಳವಡಿಸಲು ಸಮಸ್ಯೆಗಳಿರುವುದರಿಂದ ಕರೆ ಕಡಿತ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂಬ ನೆಪಗಳನ್ನು ಹೇಳುವಂತಿಲ್ಲ ಎಂಬ ಖಡಕ್‌ ಸಂದೇಶವನ್ನು ದೂರಸಂಪರ್ಕ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದೆ.

ಮೊಬೈಲ್‌ ಸೇವೆಗಳ ಗುಣಮಟ್ಟ ನಿರ್ಧರಿಸಲು ಹೊಸ ಸೂತ್ರವೊಂದನ್ನು ಟ್ರಾಯ್‌ ಅಭಿವೃದ್ಧಿಪಡಿಸಿದೆ. ಇದರ ಆಧಾರದಲ್ಲಿ ಗುಣಮಟ್ಟದ ವರದಿ ಸಿದ್ಧಪಡಿಸಲಾಗುವುದು. ಇದೇ 21ರಂದು ದೂರಸಂಪರ್ಕ ಕಂಪನಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಹೇಳಿದ್ದಾರೆ.

‘ಕರೆ ಕಡಿತ ಮತ್ತು ಸೇವಾ ಗುಣಮಟ್ಟದ ಬಗ್ಗೆ ಸರ್ಕಾರಕ್ಕೆ ಬಹಳ ಕಾಳಜಿ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರಿಯುವಂತಿಲ್ಲ. ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಮೊಬೈಲ್‌ ಗೋಪುರಗಳನ್ನು ಅಳವಡಿಸಲು ಕಂಪನಿಗಳಿಗೆ ಕೆಲವೊಮ್ಮೆ ಸಮಸ್ಯೆ ಎದುರಾಗುವುದು ನಿಜ. ಗೋಪುರ ಅಳವಡಿಸುವಾಗ ಜನರು ಪ‍್ರತಿರೋಧ ತೋರುತ್ತಾರೆ. ಆದರೆ ಕರೆ ಕಡಿತಕ್ಕೆ ಇದೇ ಕಾರಣ ಎಂದು ಕಂಪನಿಗಳು ಹೇಳುವಂತಿಲ್ಲ. ಹಾಗೆಯೇ, ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲು ಕಂಪನಿಗಳು ಹೂಡಿಕೆ ಮಾಡಲೇಬೇಕು ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳಲ್ಲಿ ದೂರಸಂಪರ್ಕ ಮೂಲಸೌಕರ್ಯವನ್ನು ಉತ್ತಮಪಡಿಸುವುದಕ್ಕೆ ಇಲಾಖೆ ಒತ್ತು ನೀಡುತ್ತಿದೆ. ಮೂಲಸೌಕರ್ಯಕ್ಕೆ ಹೆಚ್ಚು ಹೆಚ್ಚು ಹಣ ಮೀಸಲಿಡಬೇಕು ಎಂದು ಅವರು ಕರೆ ನೀಡಿದ್ದಾರೆ.

ಕರೆಕಡಿತಕ್ಕೆ ಸಂಬಂಧಿಸಿದ ಹೊಸ ಸೂತ್ರ ಮತ್ತು ಕಠಿಣ ನಿಯಮಗಳು ಕಳೆದ ಅಕ್ಟೋಬರ್‌ 1ರಿಂದ ಜಾರಿಗೆ ಬಂದಿದೆ. ಇದು ಜಾರಿಗೆ ಬಂದ ನಂತರದ ಮೊದಲ ತ್ರೈಮಾಸಿಕ ಡಿಸೆಂಬರ್‌ಗೆ ಪೂರ್ಣಗೊಂಡಿದೆ. ಹೊಸ ಸೂತ್ರದ ಅನ್ವಯ ಕರೆ ಕಡಿತದ ವರದಿ ಹೇಗೆ ಬರಲಿದೆ ಎಂಬ ಕುತೂಹಲ ಇದೆ.

ಕರೆ ಕಡಿತವನ್ನು ಮೊದಲು ವಲಯ ಮಟ್ಟದಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಈಗ ಮೊಬೈಲ್‌ ಟವರ್‌ ಮಟ್ಟದಲ್ಲಿ ಲೆಕ್ಕ ಹಾಕಲಾಗುತ್ತಿದೆ. ಕರೆ ಕಡಿತಕ್ಕೆ ದೂರ ಸಂಪರ್ಕ ಕಂಪನಿಗಳಿಗೆ ಗರಿಷ್ಠ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ.

2016ರ ಹರಾಜು: ಹುಸಿಯಾದ ನಿರೀಕ್ಷೆ

₹5.6 ಲಕ್ಷ ಕೋಟಿ: ಸಂಗ್ರಹದ ನಿರೀಕ್ಷೆ

₹65,789 ಕೋಟಿ: ಸಂಗ್ರಹವಾದ ಮೊತ್ತ

60% ಮಾರಾಟವಾಗದೆ ಉಳಿದ ತರಂಗಾಂತರ ಪ್ರಮಾಣ

ತರಂಗಾಂತರ ಹರಾಜು: ಚರ್ಚೆ ಆರಂಭ

ತರಂಗಾಂತರ ಹರಾಜಿಗೆ ಸಂಬಂಧಿಸಿ ದೂರಸಂಪರ್ಕ ಕಂಪನಿಗಳ ಜತೆಗೆ ಟ್ರಾಯ್‌ ವಿಸ್ತೃತ ಮಾತುಕತೆ ನಡೆಸಿದೆ. ತರಂಗಾಂತರದ ಬೆಲೆ ಎಷ್ಟಿರಲಿದೆ ಮತ್ತು ಹರಾಜು ಯಾವಾಗ ನಡೆಯಲಿದೆ ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಸದ್ಯದಲ್ಲೇ ಶಿಫಾರಸುಗಳನ್ನು ನೀಡಲಾಗುವುದು ಎಂದು ಟ್ರಾಯ್‌ ಹೇಳಿದೆ.

ಭಾರ್ತಿ ಏರ್‌ಟೆಲ್‌, ವೊಡಾಫೋನ್‌, ಏರ್‌ಸೆಲ್‌, ರಿಲಯನ್ಸ್‌ ಜಿಯೊ ಕಂಪನಿಗಳ ಪ್ರತಿನಿಧಿಗಳು ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. ಬ್ರಾಡ್‌ಬ್ಯಾಂಡ್‌ ಇಂಡಿಯಾ ಫೋರಂನಂತಹ ಸಮಿತಿಗಳ ಪ್ರತಿನಿಧಿಗಳು ಕೂಡ ಹಾಜರಿದ್ದರು.

ದೂರಸಂಪರ್ಕ ಉದ್ಯಮವು ಆರ್ಥಿಕ ವಿಚಾರದಲ್ಲಿ ಸಂಕಷ್ಟದಲ್ಲಿದೆ. ಹಲವು ಕಂಪನಿಗಳು ಒಟ್ಟುಗೂಡಿದರೆ ಕೆಲವು ಕಂಪನಿಗಳು ಕ್ಷೇತ್ರದಿಂದ ಹೊರನಡೆದಿವೆ. ಮುಂದಿನ ಹರಾಜು ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕು ಎಂದು ಕಂಪನಿಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT