ಹಫೀಜ್‌, ಸಲಾಹುದ್ದೀನ್‌ ವಿರುದ್ಧ ಎನ್‌ಐಎ ಆರೋಪಪಟ್ಟಿ

6
ಜಮ್ಮು ಕಾಶ್ಮೀರದಲ್ಲಿ ಭಯೋತ್ಪದನೆ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ ಪ್ರಕರಣ

ಹಫೀಜ್‌, ಸಲಾಹುದ್ದೀನ್‌ ವಿರುದ್ಧ ಎನ್‌ಐಎ ಆರೋಪಪಟ್ಟಿ

Published:
Updated:

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳ ಸಂಚುಕೋರರಾದ ಹಫೀಜ್‌ ಸಯೀದ್‌, ಸಯ್ಯದ್‌ ಸಲಾಹುದ್ದೀನ್‌ ಮತ್ತು ಹತ್ತು ಮಂದಿ ಕಾಶ್ಮೀರ ಪ್ರತ್ಯೇಕತಾವಾದಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ. ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಇವರು ಹಣ ನೀಡುತ್ತಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಆರೋಪಪಟ್ಟಿಗೆ ಸಂಬಂಧಿಸಿದ ವಾದವನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ತರುಣ್‌ ಶೆರಾವತ್‌ ಇದೇ 30ಕ್ಕೆ ವಿಚಾರಣೆ ಮುಂದೂಡಿದರು. 12,794 ಪುಟಗಳ ದಾಖಲೆಗಳನ್ನು ಎನ್‌ಐಎ ಸಲ್ಲಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುವ ಮೂಲಕ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಲು ಪಿತೂರಿ (ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 121), ಅಪರಾಧ ಒಳಸಂಚು (ಸೆಕ್ಷನ್‌ 120 ಬಿ) ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಲಷ್ಕರ್‌ ಎ ತಯ್ಯಿಬಾ ಮುಖ್ಯಸ್ಥ ಹಫೀಜ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸಲಾಹುದ್ದೀನ್‌ ಮತ್ತು ಇತರರ ವಿರುದ್ಧ ಆರೋಪ ದಾಖಲಿಸಲಾಗಿದೆ.

ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್‌ ಕಾನ್ಫರೆನ್ಸ್‌ ನಾಯಕ ಸಯ್ಯದ್‌ ಶಾ ಗಿಲಾನಿಯ ಅಳಿಯ ಅಲ್ತಾಪ್‌ ಅಹ್ಮದ್‌ ಶಾ, ಗಿಲಾನಿಯ ಆಪ್ತ ಸಹಾಯಕ ಬಷೀರ್‌ ಅಹ್ಮದ್‌ ಭಟ್‌, ಹುರಿಯತ್‌ನ ಮಾಧ್ಯಮ ಸಲಹೆಗಾರ ಅಫ್ತಾಬ್‌ ಅಹ್ಮದ್‌ ಶಾ, ಪ್ರತ್ಯೇಕತಾವಾದಿ ಸಂಘಟನೆ ನ್ಯಾಷನಲ್‌ ಫ್ರಂಟ್‌ನ ಮುಖ್ಯಸ್ಥ ನಯೀದ್‌ ಅಹ್ಮದ್‌ ಖಾನ್‌, ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ನ ಅಧ್ಯಕ್ಷ ಫಾರೂಕ್‌ ಅಹ್ಮದ್‌ ದರ್‌, ಹುರಿಯತ್‌ನ ಮಾಧ್ಯಮ ಸಲಹೆಗಾರ ಮೊಹಮ್ಮದ್‌ ಅಕ್ಬರ್‌ ಖಾಂಡೆ, ತೆಹ್ರೀಕ್‌ ಎ ಹುರಿಯತ್‌ ಪದಾಧಿಕಾರಿ ರಜಾ ಮೆಹ್ರಾಜುದ್ದೀನ್‌ ಕಲ್ವಲ್‌, ಹವಾಲಾ ಜಾಲದ ನಿರ್ವಾಹಕ ಜಹೂರ್‌ ಅಹ್ಮದ್‌ ಶಾ ವಟಲ್‌ ಮತ್ತು ಕಲ್ಲು ತೂರಾಟ ನಡೆಸಿದ ಕಮ್ರಾನ್‌ ಯೂಸುಫ್‌ ಹಾಗೂ ಜಾವೇದ್‌ ಅಹ್ಮದ್‌ ಭಟ್‌ ಇತರ ಆರೋಪಿಗಳು.

2017ರ ಮೇಯಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು. ಅದೇ ವರ್ಷ ಜುಲೈ 24ರಂದು ಮೊದಲ ಬಂಧನ ನಡೆದಿದೆ. ಜಮ್ಮು ಕಾಶ್ಮೀರ, ಹರಿಯಾಣ ಮತ್ತು ದೆಹಲಿಯ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಆರೋಪವನ್ನು ಸಮರ್ಥಿಸುವ 950ಕ್ಕೂ ಹೆಚ್ಚು ದಾಖಲೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪ ಏನು: ಆರೋಪಪಟ್ಟಿಯಲ್ಲಿ ಹೆಸರಿಸಲಾದ ಈ 12 ಮಂದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಗಳನ್ನು ನಡೆಸಿದ್ದಾರೆ. ತಮ್ಮ ಯೋಜಿತ ಅಪರಾಧ ಒಳಸಂಚಿನ ಮೂಲಕ ಆ ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಸಂಘಟನೆಗಳ ಸಕ್ರಿಯ ಬೆಂಬಲ, ಶಾಮೀಲು ಮತ್ತು ಆರ್ಥಿಕ ನೆರವಿನೊಂದಿಗೆ ಈ ಸಂಚು ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry