ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ 3 ದಿನ ಸಾವಯವ, ಸಿರಿಧಾನ್ಯ ವೈವಿಧ್ಯ

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿಯಲ್ಲಿ ಇನ್ನೂ ಮೂರು ದಿನಗಳು ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಲೋಕ ಅವತರಿಸಲಿದೆ. ಈ ಕುರಿತ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಅರಮನೆ ಪ್ರಾಂಗಣ ಸಜ್ಜಾಗಿದೆ.

ಕೃಷಿ ಇಲಾಖೆ ನೇತೃತ್ವದಲ್ಲಿ ಜ.19 ರಿಂದ (ಶುಕ್ರವಾರ) 21ರ ವರೆಗೆ ನಡೆಯಲಿರುವ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮೂರೂ ದಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಇಲಾಖೆ ಆಯುಕ್ತ ಜಿ.ಸತೀಶ್, ‘ಪ್ರಮಾಣೀಕೃತ ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ 350 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆಹಾರ ಮಳಿಗೆಗಳೂ ಇರಲಿದ್ದು, ದೇಶದ ಹೆಸರಾಂತ 20 ರೆಸ್ಟೊರೆಂಟ್‌ಗಳು ಸಾವಯವ ಸಿರಿಧಾನ್ಯ ಖಾದ್ಯಗಳನ್ನು ಪರಿಚಯಿಸಲಿವೆ. ಬೆಲೆಯೂ ಕಡಿಮೆ ಇರಲಿದೆ’ ಎಂದರು.

ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳ ಮಾರಾಟಕ್ಕೆ ‘ಖಾನಾವಳಿ ಫೋರಂ’ ಮಳಿಗೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ರಾಜ್ಯದ ಸಾವಯವ ರೈತರ 14 ಒಕ್ಕೂಟಗಳೂ ಉತ್ಪನ್ನಗಳನ್ನು ಮಾರಾಟ ಮಾಡಲಿವೆ. ಆಹಾರ ತಜ್ಞರಿಂದ ಆರೋಗ್ಯ ಸಲಹೆ ನೀಡಲು ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಲಾಗಿದೆ.

‘ಸಾವಯವ ಉತ್ಪನ್ನ ಮತ್ತು ಸಿರಿಧಾನ್ಯ ಬೆಳೆಯುವ ರೈತರು, ಉದ್ಯಮಿಗಳು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕೊಂಡಿ ಬೆಸೆಯಲು ಮೇಳ ಆಯೋಜಿಸಲಾಗಿದೆ. ಅಮೆರಿಕ, ಯುರೋಪ್‌, ಜರ್ಮನಿ, ಸ್ವಿಟ್ಜರ್‌ಲೆಂಡ್‌, ಯುಎಇ, ದಕ್ಷಿಣ ಕೊರಿಯಾ, ಉಗಾಂಡ, ಚೀನಾ ರಾಷ್ಟ್ರಗಳ ಸಾವಯವ ಹಾಗೂ ಸಿರಿಧಾನ್ಯಗಳ ತಜ್ಞರು ಮತ್ತು ಖರೀದಿದಾರರು ಭಾಗವಹಿಸಲಿದ್ದಾರೆ. 20 ರೀಟೆಲ್‌ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒ) ಭಾಗವಹಿಸಲಿದ್ದಾರೆ. ಸುಮಾರು 10,000 ರೈತರೂ ಪಾಲ್ಗೊಳ್ಳಲಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಮೇಳಕ್ಕೆ ಬರಲು ರೈತರಿಗೆ ವಾಹನ ವ್ಯವಸ್ಥೆ ಮಾಡಿದ್ದೇವೆ. ಮೇಳಕ್ಕೆ 1 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯನ್ನು ಹೊಂದಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

ಅಡುಗೆ ತಯಾರಿಕೆ ಸ್ಪರ್ಧೆ ಹಾಗೂ ಅಡುಗೆ ಪ್ರದರ್ಶನ, ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು.

ಸಭಾ ಕಾರ್ಯಕ್ರಮ ಹಾಗೂ ವಿಶೇಷ ಕಾರ್ಯಾಗಾರಗಳಿಗೆ ಎರಡು ಪತ್ಯೇಕ ವೇದಿಕೆಗಳು ಸಿದ್ಧಗೊಂಡಿವೆ. ಸಾವಯವ ಮಾರುಕಟ್ಟೆ ಮೂಲಕ ರೈತರ ಆದಾಯ ಹೆಚ್ಚಿಸುವ ಕುರಿತು ‘ಜೈವಿಕ’ ಸಭಾಂಗಣದಲ್ಲಿ ಹಾಗೂ ರೈತರಿಗೆ ಮತ್ತು ಬಳಕೆದಾರರಿಗೆ ಸಿರಿಧಾನ್ಯಗಳ ಮಹತ್ವ ತಿಳಿಸಲು ‘ಸಿರಿಧಾನ್ಯ’ ಸಭಾಂಗಣದಲ್ಲಿ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಬಸ್‌ ಸೌಲಭ್ಯ: ‘ಮೇಳಕ್ಕೆ ಬರುವವರಿಗೆ ಅನುಕೂಲವಾಗಲೆಂದು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಅರಮನೆ ಮೈದಾನದ ವರೆಗೆ ಮೂರೂ ದಿನಗಳೂ ಬಿಎಂಟಿಸಿ ಉಚಿತ ಬಸ್‌ ಸೌಲಭ್ಯ ಕಲ್ಪಿಸಿದ್ದೇವೆ’ ಎಂದು ಸತೀಶ್ ತಿಳಿಸಿದರು.

ಮೇಳದ ಬ್ಯಾನರ್‌ಗಳನ್ನು ಅಳವಡಿಸಿದ ಬಸ್‌ಗಳನ್ನು ಜನ ಬಳಸಬಹುದು. ಪ್ರತಿ 15 ನಿಮಿಷಕ್ಕೊಂದು ಬಸ್‌ಗಳು ಸಂಚರಿಸಲಿವೆ.  ಎಂದು ಹೇಳಿದರು.

ಜೈವಿಕ ಇಂಡಿಯಾ ಪ್ರಶಸ್ತಿ:

ಸಾವಯವ ಕೃಷಿ ಕ್ಷೇತ್ರದಲ್ಲಿ ಹಾಗೂ ಸಾವಯವ ಉದ್ದಿಮೆ ಕ್ಷೇತ್ರದಲ್ಲಿ ಸಾಧನೆಗೈದ 21 ಮಂದಿಗೆ ಜ.20ರಂದು ಇಕೋವಾ ಸಂಸ್ಥೆಯ ವತಿಯಿಂದ ಇದೇ 20ರಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಮನೋಜ್ ಮೆನನ್ ಮಾಹಿತಿ ನೀಡಿದರು.

ಮೇಳಕ್ಕೆ ಸಾಂಸ್ಕೃತಿಕ ಸ್ಪರ್ಶ: ಮೇಳದ ಅಂದವನ್ನು ಹೆಚ್ಚಿಸುವ ಸಲುವಾಗಿ ಡೊಳ್ಳು ಕುಣಿತ, ನಾದಸ್ವರ, ಪೂಜಾ ಕುಣಿತ, ವೀರಗಾಸೆ, ಗೊರವರ ಕುಣಿತ, ಮಹಿಳಾ ತಮಟೆ, ಸೋಮನ ಕುಣಿತ ಹಾಗೂ ಜಾನಪದ ಗೀತೆಗಳ ಗಾಯನ ಏರ್ಪಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT