ಮಲಿನಗೊಂಡಿದೆ ದೊಡ್ಡನೆಕ್ಕುಂದಿ ಕೆರೆ ಒಡಲು

7
ನೂರಾರು ಸಂಖ್ಯೆಯಲ್ಲಿ ಜಲಚರಗಳ ಸಾವು

ಮಲಿನಗೊಂಡಿದೆ ದೊಡ್ಡನೆಕ್ಕುಂದಿ ಕೆರೆ ಒಡಲು

Published:
Updated:
ಮಲಿನಗೊಂಡಿದೆ ದೊಡ್ಡನೆಕ್ಕುಂದಿ ಕೆರೆ ಒಡಲು

ಬೆಂಗಳೂರು: ಮಹದೇವಪುರ ಕ್ಷೇತ್ರಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ಇಲ್ಲಿನ ಬೃಹತ್‌ ಕೆರೆಗಳಲ್ಲಿ ಒಂದಾದ ದೊಡ್ಡನೆಕ್ಕುಂದಿ ಒಡಲು ಈಗ ಸಂಪೂರ್ಣ ಕಲುಷಿತಗೊಂಡಿದೆ.

ಕಗ್ಗದಾಸಪುರ, ವಿಭೂತಿಪುರ, ವಿಜ್ಞಾನನಗರ, ಎಚ್‌ಎಎಲ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿನ ವಸತಿ ಸಮುಚ್ಛಯಗಳ ಕೊಳಚೆ ನೀರು ಹಾಗೂ ಕೈಗಾರಿಕೆಗಳ ರಸಾಯನಿಕ ಮಿಶ್ರಿತ ನೀರು ಕೆರೆಗೆ ಸೇರುತ್ತಿದೆ. ಇದರಿಂದ ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ದುರ್ನಾತ ಬೀರುತ್ತಿದೆ.

ಹತ್ತು ವರ್ಷಗಳ ಹಿಂದೆ ಈ ಕೆರೆ ಸ್ವಚ್ಛವಾಗಿತ್ತು. ಗ್ರಾಮದ ಜನರು ನೀರಿಗಾಗಿ ಈ ಜಲಮೂಲವನ್ನೇ ಅವಲಂಬಿಸಿದ್ದರು. ಇತ್ತೀಚಿನ ದಿನಗಳವರೆಗೂ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿತ್ತು. ಕೆರೆ ನೀರಿಗೆ ರಾಸಾಯನಿಕ ಸೇರಿರುವುದರಿಂದ ನೂರಾರು ಸಂಖ್ಯೆಯಲ್ಲಿ ಮೀನುಗಳು ಮೃತಪಟ್ಟಿವೆ.

ಕಳೆಯೇ ಕೆರೆಯನ್ನು ಆವರಿಸಿಕೊಂಡಿದ್ದು, ದಿನದಿನಕ್ಕೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ, ಕೆರೆಗೆ ಘನತ್ಯಾಜ್ಯ, ಕಟ್ಟಡ ತ್ಯಾಜ್ಯವನ್ನು ಸುರಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ‘ಕೆರೆಗೆ ಕೊಳಚೆ ನೀರು ಸೇರದಂತೆ ಪ್ರತ್ಯೇಕ ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ, ಅದು ಅವೈಜ್ಞಾನಿಕವಾಗಿರುವುದರಿಂದ ಕೊಳಚೆ ನೀರು ನೇರವಾಗಿ ಕೆರೆಗೆ ಸೇರುತ್ತಿದೆ’ ಎಂದು ಸ್ಥಳೀಯರು ದೂರಿದರು.

ನಡಿಗೆ ಪಥ ಕುಸಿದಿದೆ: ದೊಡ್ಡನೆಕ್ಕುಂದಿ ಸರ್ವೆ ನಂ 200 ಹಾಗೂ ಕಗ್ಗದಾಸಪುರ ಸರ್ವೆ ನಂ 25ರಲ್ಲಿ ಜಂಟಿಯಾಗಿರುವ ಕೆರೆ ಪ್ರದೇಶದಲ್ಲಿ ಕಳೆದ ವರ್ಷ ನಡಿಗೆ ಪಥ ನಿರ್ಮಿಸಲಾಗಿತ್ತು. ಅದೂ ಈಗ ಹಾಳಾಗಿದೆ. ಕೆರೆಗೆ ನಿರ್ಮಿಸಿದ್ದ ತಡೆಗೋಡೆಯು ಬಿದ್ದು ಹೋಗಿದೆ.

‘ರಾತ್ರಿ ವೇಳೆ ಕೆರೆ ಅಂಗಳದಲ್ಲಿ ಕುಡಿಯುವುದು, ಇಸ್ಪೀಟ್‌ ಆಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಗ್ರಾಮದ ದೊಡ್ಡ ಕೆರೆಯೇ ಈ ರೀತಿ ನಿರ್ಲಕ್ಷಿಸಲಾಗಿದೆ. ಇನ್ನು ಸಣ್ಣ ಕೆರೆಗಳ ಗತಿಯೇನು’ ಎಂದಯ ಸ್ಥಳೀಯರಾದ ಪ್ರತಿಭಾ ಕಳವಳ ವ್ಯಕ್ತಪಡಿಸಿದರು.

‘ಕೆರೆ ಕಲುಷಿತಗೊಂಡಿದೆ ಎಂಬುದು ತಿಳಿದಿದ್ದರೂ ಬಿಬಿಎಂಪಿ, ಬಿಡಿಎ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೆರೆಗಳ ನಿರ್ಲಕ್ಷ್ಯಕ್ಕೆ ಹಿಡಿದಕೈಗನ್ನಡಿಯಾಗಿದೆ’ ಎಂದರು.

ವಲಸೆ ಪಕ್ಷಿಗಳ ಬೀಡಾಗಿತ್ತು

‘ಈ ಕೆರೆಗೆ ಬೇರೆ ಕಡೆಗಳಿಂದ ಪಕ್ಷಿಗಳು ವಲಸೆ ಬರುತ್ತಿದ್ದವು. ಕೆರೆ ಮಧ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ಮರಿ ಮಾಡುತ್ತಿದ್ದವು. ಛಾಯಾಗ್ರಹಣಕ್ಕೆ ಅನೇಕರು ಇಲ್ಲಿ ಸೇರುತ್ತಿದ್ದರು. ಈಗ ನೀರು ಕಲುಷಿತವಾಗಿರುವುದರಿಂದ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಸ್ಥಳೀಯರಾದ ಆನಂದ್‌ ಬೇಸರ ವ್ಯಕ್ತಪಡಿಸಿದರು.

*ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಬೇಕಾಗುವಷ್ಟು ಅನುದಾನ ಬಿಬಿಎಂಪಿಯಿಂದ ಬಿಡುಗಡೆಯಾಗಿಲ್ಲ. ಹೆಚ್ಚು ಅನುದಾನ ಸಿಕ್ಕರೆ ಖಂಡಿತಾ ಅಭಿವೃದ್ಧಿಗೊಳಿಸುತ್ತೇವೆ

–ಶ್ವೇತಾ ವಿಜಯಕುಮಾರ್‌, ಬಿಬಿಎಂಪಿ ಸದಸ್ಯೆ

         

-ಹ.ಸ.ಬ್ಯಾಕೋಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry