ಮಾನ‍ಪ್ಪ ವಜ್ಜಲ, ಶಿವರಾಜ ಪಾಟೀಲ ಬಿಜೆಪಿಗೆ

7
ಕಾಂಗ್ರೆಸ್, ಜೆಡಿಎಸ್‌ನಿಂದ ಹಲವರು ಬಿಜೆಪಿ ಸೇರಲಿದ್ದಾರೆ: ಬಿ. ಎಸ್‌ ಯಡಿಯೂರಪ್ಪ

ಮಾನ‍ಪ್ಪ ವಜ್ಜಲ, ಶಿವರಾಜ ಪಾಟೀಲ ಬಿಜೆಪಿಗೆ

Published:
Updated:
ಮಾನ‍ಪ್ಪ ವಜ್ಜಲ, ಶಿವರಾಜ ಪಾಟೀಲ ಬಿಜೆಪಿಗೆ

ಬೆಂಗಳೂರು: ಜೆಡಿಎಸ್‌ ಶಾಸಕರಾದ ಮಾನಪ್ಪ ವಜ್ಜಲ್‌(ಲಿಂಗಸುಗೂರು) ಮತ್ತು ಡಾ. ಶಿವರಾಜ ಪಾಟೀಲ (ರಾಯಚೂರು ನಗರ) ಗುರುವಾರ ಬಿಜೆಪಿ ಸೇರಿದರು.

ಈ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ‘ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದಕ್ಕೆ ಈ ಬೆಳವಣಿಗೆ ಸಾಕ್ಷಿ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಇನ್ನೂ ಹಲವರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ’ ಎಂದರು.

‘ರೈಲ್ವೆ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಲು ಅವರು ಬಂದಿದ್ದರು. ದೇಶದ ಪ್ರಧಾನಿಯಾಗಿದ್ದವರು ಮತ್ತು ಹಿರಿಯ ರಾಜಕಾರಣಿ ಎಂಬ ಕಾರಣಕ್ಕೆ ನಾನೇ ಅವರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ್ದೇನೆ. ಇದು ನಮ್ಮ ಸಂಸ್ಕೃತಿ ಮತ್ತು ಹಿರಿಯರಿಗೆ ಕೊಡುವ ಗೌರವ’ ಎಂದು ಕೆಂದ್ರ ಸಚಿವ ಪಿಯೂಷ್ ಗೋಯಲ್‌ ಹೇಳಿದರು.

2013ರ ಚುನಾವಣೆಯಲ್ಲಿ ಗೌರಿಬೀದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಜೈಪಾಲರೆಡ್ಡಿ, ಅಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್‌ಕುಮಾರ್, ಕೆಪಿಸಿಸಿ ಸದಸ್ಯ ಶಂಕರಪ್ಪ ಕೂಡ ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ

ಬಿಜೆಪಿ ಸೇರುವ ಮುನ್ನ ಮಾನಪ್ಪ ವಜ್ಜಲ್‌ ಮತ್ತು ಡಾ. ಶಿವರಾಜ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಲು ಇಬ್ಬರೂ ವಿಧಾನಸೌಧಕ್ಕೆ ಬಂದಾಗ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿಗೆ ರಾಜೀನಾಮೆ ಪತ್ರ ನೀಡಿದರು.

‘ನಿಯಮಾವಳಿ ಪ್ರಕಾರ ಶಾಸಕರು ನೇರವಾಗಿ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬೇಕು. ನನ್ನ ಬಳಿ ಕೊಟ್ಟು ಹೋಗುವಂತೆ ಸಭಾಧ್ಯಕ್ಷರೇ ತಿಳಿಸಿರುವುದಾಗಿ ಶಾಸಕರು ಹೇಳಿದ್ದರಿಂದ ರಾಜೀನಾಮೆ ಪತ್ರಗಳನ್ನು ಪಡೆದುಕೊಂಡಿದ್ದೇನೆ’ ಎಂದು ಮೂರ್ತಿ ಹೇಳಿದರು.

‘ಕಳೆದ ಒಂದು ವರ್ಷದಿಂದ ಜೆಡಿಎಸ್‌ನಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಈಗಾಗಲೇ ಕೆಲವರು ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶಾಸಕ ಸ್ಥಾನ ಹಾಗೂ ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ’ ಎಂದು ವಜ್ಜಲ್‌ ತಿಳಿಸಿದರು.

‘ಜೆಡಿಎಸ್‍ನಲ್ಲಿ ನಮ್ಮ ಮಾತಿಗೆ ಮನ್ನಣೆ ಇರಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆದಿದ್ದೇನೆ’ ಎಂದು ಶಿವರಾಜ ಪಾಟೀಲ ಸಮರ್ಥಿಸಿದರು.

ಬಜೆಟ್ ಮಂಡಿಸಲು ಜನಾದೇಶ ಇಲ್ಲ

2018–19ನೇ ಸಾಲಿನ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜನಾದೇಶ ಇಲ್ಲ, ಹೀಗಾಗಿ ಲೇಖಾನುದಾನ ಪಡೆಯಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

2017–18ನೇ ಸಾಲಿನ ಬಜೆಟ್‌ನಲ್ಲಿ ಶೇ 40ರಷ್ಟು ಹಣ ಮಾತ್ರ ಈವರೆಗೆ ಖರ್ಚಾಗಿದೆ. ಪ್ರವಾಸದ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳಿದ 73 ದಿನಗಳಲ್ಲಿ ₹80,000 ಕೋಟಿ ಖರ್ಚು ಮಾಡಲು ಹೊರಟಿದ್ದಾರೆ.

ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರದ ಹಣ ಲೂಟಿ ಮಾಡುವ ಷಡ್ಯಂತ್ರ ನಡೆಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ಕಾಂಗ್ರೆಸ್‌ನ ಐವರು ಶಾಸಕರು ಬಿಜೆಪಿಗೆ?

ಬೆಂಗಳೂರು: ಜೆಡಿಎಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಸೇರಿದ ಬೆನ್ನಲ್ಲೇ ಕಾಂಗ್ರೆಸ್‌ನ ಐವರು ಶಾಸಕರು ಬಿಜೆಪಿಗೆ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಐವರು ಕಾಂಗ್ರೆಸ್‌ ಶಾಸಕರ ಬಿಜೆಪಿ ಸೇರ್ಪಡೆಗೆ ವರಿಷ್ಠರು ಹಸಿರು ನಿಶಾನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 4 ರಂದು ಬೆಂಗಳೂರಿಗೆ ಬಂದಾಗ ಈ ಶಾಸಕರ ಸೇರ್ಪಡೆ ಆಗುವ ಸಾಧ್ಯತೆ ಇದೆ. ಐವರ ಹೆಸರು ಎಲ್ಲೂ ಬಹಿರಂಗವಾಗದಂತೆ ಗೌಪ್ಯವಾಗಿಡಲು ‍ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಐವರು ಶಾಸಕರಲ್ಲಿ ಇಬ್ಬರು ಬೆಂಗಳೂರಿನ ಪ್ರಭಾವಿ ಶಾಸಕರು. ಉಳಿದವರು ಬೇರೆ ಜಿಲ್ಲೆಯವರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬಜೆಟ್‌ ಅಧಿವೇಶನ ಮುಗಿದ ಬಳಿಕ ವಲಸೆ ಹೆಚ್ಚಲಿದೆ. ಕಾಂಗ್ರೆಸ್‌ನಿಂದ ಇನ್ನೂ ಏಳು ಶಾಸಕರು ಚುನಾವಣೆಗೆ ಮೊದಲು ಬಿಜೆಪಿಗೆ ಜಿಗಿಯಲಿದ್ದಾರೆ. ಪಕ್ಷಕ್ಕೆ ಸೇರಿಕೊಳ್ಳುವುದಕ್ಕೆ ಮೊದಲು ಅವರ ಹಿನ್ನೆಲೆ ಮತ್ತು ಗೆಲ್ಲುವ ಸಾಮರ್ಥ್ಯವನ್ನು ನೋಡಿಯೇ ಸೇರಿಸಿಕೊಳ್ಳಲು ಸಮ್ಮತಿ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry