ಕಾವೇರಿ ಸಮಸ್ಯೆ: ರೈತರ ಜೊತೆ ಚರ್ಚಿಸಲು ಚಿಂತನೆ

7
ಸ್ವಾಮಿನಾಥನ್‌ ಅವರಿಗೆ ‘ಬಸವ ಕೃಷಿ ಪ್ರಶಸ್ತಿ’ ಪ್ರದಾನ

ಕಾವೇರಿ ಸಮಸ್ಯೆ: ರೈತರ ಜೊತೆ ಚರ್ಚಿಸಲು ಚಿಂತನೆ

Published:
Updated:

ಬೆಂಗಳೂರು: ‘ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ತಮಿಳುನಾಡು–ಕರ್ನಾಟಕ ರೈತರ ಸಹಕಾರದೊಂದಿಗೆ ಬಗೆಹರಿಸಲು ಭಾರತೀಯ ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್‌ ನೇತೃತ್ವದಲ್ಲಿ ಪ್ರಯತ್ನಿಸಲಾಗುವುದು’ ಎಂದು ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಪೀಠದ ವತಿಯಿಂದ ನೀಡಲಾಗುವ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ಯನ್ನು ಇದೇ 24ರಂದು ಚೆನ್ನೈನಲ್ಲಿ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

‘ರಾಜ್ಯಗಳ ನಡುವಿನ ನದಿ ನೀರಿನ ಸಮಸ್ಯೆಗಳನ್ನು ಸರ್ಕಾರ ಹಾಗೂ ಕೋರ್ಟ್‌ಗಳ ಮುಖಾಂತರ ಬಗೆಹರಿಸಿಕೊಳ್ಳಲು ಸುದೀರ್ಘ ಸಮಯ ಬೇಕಾಗುತ್ತದೆ. ಆದ್ದರಿಂದ ಇವುಗಳನ್ನು ರೈತರ ಜೊತೆಗಿನ ಚರ್ಚೆ ಮೂಲಕವೇ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ’ ಎಂದರು.

‘ಮಹದಾಯಿ ವಿವಾದದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಈ ವಿವಾದವನ್ನು ಸೌಹಾರ್ದಯುತ ಚರ್ಚೆಯ ಮೂಲಕ ಬಗೆಹರಿಸಲು ಅವರು ಮುಂದಾಗಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.

‘ಚೆನ್ನೈನ ಡಾ.ಎಂ.ಎಸ್.ಸ್ವಾಮಿನಾಥನ್‌ ಪ್ರತಿಷ್ಠಾನದಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕದಿಂದ ತೆರಳುವವರಿಗೆ ಚೆನ್ನೈನಲ್ಲಿ ವಸತಿ, ಊಟದ ಸೌಲಭ್ಯ ಒದಗಿಸಲಾಗುವುದು. ಆಸಕ್ತರು 99801–25358 ಅಥವಾ 94498–72877 ಫೋನ್‌ ನಂಬರ್‌ಗೆ ಸಂಪರ್ಕಿಸಬಹುದು’ ಎಂದು ಸ್ವಾಮೀಜಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry