ಅನ್ನನಾಳ ದೋಷ ನಿವಾರಣೆಗೆ ರೋಬೊಟ್!

7

ಅನ್ನನಾಳ ದೋಷ ನಿವಾರಣೆಗೆ ರೋಬೊಟ್!

Published:
Updated:
ಅನ್ನನಾಳ ದೋಷ ನಿವಾರಣೆಗೆ ರೋಬೊಟ್!

ವಾಷಿಂಗ್ಟನ್: ಮಗುವಿನ ಆಹಾರ ಕೊಳವೆಯಲ್ಲಿ ಇರುವ ದೋಷ ನಿವಾರಣೆಗೆ ದೇಹದಲ್ಲಿ ಅಳವಡಿಸಬಹುದಾದ ಪುಟ್ಟ ರೋಬೊಟ್‌ ಸಾಧನವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಅಮೆರಿಕದ ಹಾರ್ವರ್ಡ್ ವೈದ್ಯಕೀಯ ಶಾಲೆ ಮತ್ತು ಬಾಸ್ಟನ್ ಮಕ್ಕಳ ಆಸ್ಪತ್ರೆ ಜಂಟಿಯಾಗಿ ಈ ರೋಬೊಟ್ ಅಭಿವೃದ್ಧಿಪಡಿಸಿವೆ. ಇದನ್ನು ಯುರೋಪ್‌ ಮತ್ತು ಅಮೆರಿಕದ ಪ್ರತಿ 4,000 ಮಕ್ಕಳ ಪೈಕಿ ಒಬ್ಬರಲ್ಲಿ ಕಂಡು ಬರುವ ‘ಈಸೊಫೇಜೀಯಲ್ ಎಟ್ರೆಷಿಯಾ’ ಎಂಬ ಅಪರೂಪದ, ವಂಶವಾಹಿ ಕಾಯಿಲೆಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿದೆ.

ಅನ್ನನಾಳದ ಮೇಲಿನ ಮತ್ತು ಕೆಳಗಿನ ಭಾಗಗಳು ಒಂದಕ್ಕೊಂದು ಸಂಪರ್ಕ ಪಡೆಯದೆ ಇದ್ದಾಗ, ಆಹಾರ ಹೊಟ್ಟೆಯನ್ನು ತಲುಪುವುದಿಲ್ಲ. ಆಗ ಈ ಕಾಯಿಲೆ ಬರುತ್ತದೆ.

ಎರಡು ಉಂಗುರಗಳನ್ನು ಬಳಸಿ ಈ ರೋಬೊಟ್‌ ಅನ್ನು ಅನ್ನನಾಳಕ್ಕೆ ಜೋಡಿಸಲಾಗಿದೆ. ರೋಬೊಟ್‌ನಲ್ಲಿರುವ ಮೋಟರ್‌, ಅನ್ನನಾಳದ ಅಂಗಾಂಶವನ್ನು ನಿಧಾನವಾಗಿ ಎಳೆಯುವ ಮೂಲಕ ಜೀವಕೋಶಗಳನ್ನು ಪ್ರಚೋದಿಸುತ್ತದೆ. ಈ ರೋಬೊಟ್‌ನಲ್ಲಿ ಎರಡು ರೀತಿಯ ಸಂವೇದಕಗಳನ್ನು ಬಳಸಲಾಗಿದೆ. ಒಂದು ರೀತಿಯ ಸಂವೇದಕ, ಅಂಗಾಂಶದ ಒತ್ತಡ ಅಳೆಯುತ್ತದೆ. ಮತ್ತೊಂದು ರೀತಿಯ ಸಂವೇದಕವು ಅಂಗಾಂಶದ ಸ್ಥಳಾಂತರವನ್ನು ತಿಳಿಸುತ್ತದೆ.

‘ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅನ್ನನಾಳದ ಮೇಲೆ ಎಷ್ಟು ಒತ್ತಡ ಹಾಕಬೇಕು, ಯಾವ ಅಳತೆಗೆ ಎಳೆಯಬೇಕು ಎಂಬ ಅನುಮಾನಗಳು ಇರುತ್ತಿದ್ದವು. ಅಲ್ಲದೆ, ಒಂದಕ್ಕಿಂತ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾಗುತ್ತಿತ್ತು. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಗುವಿಗೆ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳು ಇದ್ದವು. ಈ ಸಾಧನದಿಂದ ಅವನ್ನು ತಡೆಯಬಹುದು’ ಎಂದು ಷೆಫೀಲ್ಡ್‌ ವಿಶ್ವವಿದ್ಯಾಲಯದ ಡನಾ ಡಮಿಯನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry