ಒಳ ಮೀಸಲಾತಿಗೆ 99 ಜಾತಿಗಳ ವಿರೋಧ

7

ಒಳ ಮೀಸಲಾತಿಗೆ 99 ಜಾತಿಗಳ ವಿರೋಧ

Published:
Updated:

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಬಾರದು ಎಂದು ಒತ್ತಾಯಿಸಿ ಇದೇ 29ರಂದು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿರ್ಧರಿಸಿದೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 99 ಸಮುದಾಯಗಳ ಮುಖಂಡರು, ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಸಭೆ ನಡೆಸಿದರು. ಫೆ.1ರಂದು ಶಿಕಾರಿಪುರ ಚಲೋ ನಡೆಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮನೆ ಮುಂದೆಯೂ ಧರಣಿ ನಡೆಸಲು ತೀರ್ಮಾನಿಸಿದರು.

ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಒಂದು ಸಮುದಾಯದ ಪರವಾಗಿದೆ. ಹೀಗಾಗಿ, ಅದನ್ನು ತಿರಸ್ಕರಿಬೇಕು. ಸಾಧಕ-ಬಾಧಕಗಳ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿ ಮಾಕಳಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

‘ವರದಿ ಅನುಷ್ಠಾನಕ್ಕೂ ಮುನ್ನ ಕಾನೂನು ಅಭಿಪ್ರಾಯ ಪಡೆದುಕೊಳ್ಳಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಅನುಷ್ಠಾನ ವಿರೋಧಿಸಿ ಲಕ್ಷಾಂತರ ಜನರೊಂದಿಗೆ ಪ್ರತಿಭಟನೆ ನಡೆಸಿದರೂ ನಮ್ಮನ್ನು ಚರ್ಚೆಗೆ ಕರೆಯದಿರುವುದು ಖಂಡನೀಯ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಆಯೋಗದ ವರದಿ ಜಾರಿಗೊಳಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದಾರೆ. ಹೀಗಾಗಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಹೇಳಿದರು.

ವರದಿ ಅನುಷ್ಠಾನ ವಿರೋಧಿಸಿ ಕಾನೂನು ಹೋರಾಟಕ್ಕೆ ಆರ್. ನಾಯಕ್, ಜಯದೇವ ನಾಯಕ್, ರಾಮಕೃಷ್ಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಾಹಿತಿಗಳು ಹಾಗೂ ಪ್ರಗತಿಪರರಿಗೆ ಆಯೋಗದ ವರದಿಯ ಸಾಧಕ-ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರ ಸಹಕಾರ ಪಡೆಯಲಾಗುವುದು. ಸಾಹಿತಿ ಬಿ.ಟಿ. ಲಲಿತಾ ನಾಯಕ್ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry