ಗಣಿ ತನಿಖೆ: ರಾಜಕೀಯ ದುರುದ್ದೇಶ ಇಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ

7

ಗಣಿ ತನಿಖೆ: ರಾಜಕೀಯ ದುರುದ್ದೇಶ ಇಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ

Published:
Updated:
ಗಣಿ ತನಿಖೆ: ರಾಜಕೀಯ ದುರುದ್ದೇಶ ಇಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿರುವುದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಪಡಿಸಿದರು.

ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಪ್ರಕರಣಗಳ ಬಗ್ಗೆ ಕಾನೂನಿನಂತೆ ತನಿಖೆ ನಡೆದಿಲ್ಲ. ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ಸಿಬಿಐ ಕೆಲವೊಂದು ಪ್ರಕರಣಗಳನ್ನು ಕೈಬಿಟ್ಟಿತ್ತು. ಸಿಬಿಐ ನೀಡಿದ್ದ ವರದಿಯನ್ನು ಪರಿಶೀಲಿಸಲು ಸಚಿವ ಎಚ್‌.ಕೆ.ಪಾಟೀಲ್‌ ಅಧ್ಯಕ್ಷತೆಯ ಸಂಪುಟ ಉಪಸಮಿತಿ ರಚಿಸಿದ್ದೆವು. ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ. ಪ್ರಕರಣವನ್ನು ಎಸ್‌ಐಟಿಗೆ ಕೊಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ ಎಂದರು.

ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಲೋಕಾಯುಕ್ತದವರೂ ವರದಿ ಕೊಟ್ಟಿದ್ದಾರೆ. ಅದನ್ನು ಕಸದ ಬುಟ್ಟಿಗೆ ಹಾಕಲು ಆಗುತ್ತದೆಯೇ. ಕೇಂದ್ರ ಸರ್ಕಾರವು ತನಿಖೆಗೆ ಅನುಮತಿಯನ್ನೇ ಕೊಡದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಕೆಲವು ಪ್ರಕರಣಗಳಲ್ಲಿ ತನಿಖೆ ಮುಂದುವರಿಸಲು ಕೇಂದ್ರ ಸರ್ಕಾರವು ಸಿಬಿಐಗೆ ಅನುಮತಿಯನ್ನೇ ಕೊಡಲಿಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪ್ರಕರಣಗಳನ್ನು ಅಲ್ಲಿಗೇ ಕೊನೆಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಅನಿವಾರ್ಯವಾಗಿ ಎಸ್‌ಐಟಿಗೆ ವಹಿಸಲು ಶಿಫಾರಸು ಮಾಡಲಾಗಿದೆ ಎಂದರು.

’ಎಸ್‌ಐಟಿ ರಚನೆ ಸ್ವಾಗತಾರ್ಹ’

ಬಳ್ಳಾರಿ: ‘ಸಿಬಿಐ ಕೈ ಬಿಟ್ಟಿದ್ದ ಅಕ್ರಮ ಅದಿರು ಸಾಗಣೆ ಪ್ರಕರಣಗಳ ತನಿಖೆಯ ಹೊಣೆಯನ್ನು ಎಸ್‌ಐಟಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ತಡವಾದರೂ ಸ್ವಾಗತಿಸಲೇಬೇಕು’ ಎಂದು ಜನಸಂಗ್ರಾಮ ಪರಿಷತ್‌ನ ರಾಜ್ಯ ಸಮಿತಿ ಸದಸ್ಯ ಶಿವಕುಮಾರ ಮಾಳಗಿ ಅಭಿಪ್ರಾಯಪಟ್ಟರು.

‘ಅಕ್ರಮ ಗಣಿಗಾರಿಕೆ ಕುರಿತು ಸ್ಪಷ್ಟ ಮಾಹಿತಿ ನೀಡದ ಕಾರಣ ಸಿಬಿಐ ಸಾಕ್ಷ್ಯ ಕೊರತೆಯ ಕಾರಣ ಕೊಟ್ಟು ತನಿಖೆಯನ್ನು ಕೈಬಿಡುವಂತಾಯಿತು' ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ವಸೂಲಾತಿ ಮಾಡದೇ ಇದ್ದರೆ ಎಸ್‌ಐಟಿ ತನಿಖೆಗೆ ಅರ್ಥವೇ ಇರುವುದಿಲ್ಲ. ನಷ್ಟ ಮಾಡಿದವರನ್ನು ಜೈಲಿಗೆ ಕಳಿಸಿದರೆ ಎಸ್‌ಐಟಿ ರಚಿಸಿ ಹೆಚ್ಚಿನ ಪ್ರಯೋಜನವಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.

ಪ್ರತಿ ಪೈಸೆ ವಸೂಲಾಗಬೇಕು:

‘ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರು ಕಾಂಗ್ರೆಸ್‌ನವರಾಗಲೀ ವಿರೋಧ ಪಕ್ಷದವರಾಗಲೀ ಎಲ್ಲರಿಂದಲೂ ಪ್ರತಿಪೈಸೆಯನ್ನೂ ವಸೂಲು ಮಾಡಬೇಕು. ಆದರೆ ಅಧಿಕಾರ ಕೊನೆಗೊಳ್ಳಲು ಕೇವಲ ಮೂರೂವರೆ ತಿಂಗಳಿರುವಾಗ ಎಸ್‌ಐಟಿ ರಚಿಸಲು ನಿರ್ಧರಿಸಿದೆ. ನಾಲ್ಕೂವರೆ ವರ್ಷ ಅಕ್ರಮದ ವಿರುದ್ಧ ಸರ್ಕಾರ ಏನೂ ಮಾಡಲಿಲ್ಲ’ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ದೂರಿದರು.

‘ರಾಜಕೀಯ ವಿರೋಧಿಗಳನ್ನು ಮಣಿಸಲು, ಚುನಾವಣೆ ಕಾರಣಕ್ಕೇ ಈ ನಿರ್ಧಾರ ಮಾಡಿರುವುದಾದರೆ ಜನರಿಗೆ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry