ವಾವ್ರಿಂಕಾಗೆ ಆಘಾತ ನೀಡಿದ ಸದರ್ಜನ್‌

7
ಆಸ್ಟ್ರೇಲಿಯಾ ಓಪನ್ ಟೆನಿಸ್; ಮೂರನೇ ಸುತ್ತಿಗೆ ಫೆಡರರ್‌

ವಾವ್ರಿಂಕಾಗೆ ಆಘಾತ ನೀಡಿದ ಸದರ್ಜನ್‌

Published:
Updated:
ವಾವ್ರಿಂಕಾಗೆ ಆಘಾತ ನೀಡಿದ ಸದರ್ಜನ್‌

ಮೆಲ್ಬರ್ನ್‌: ಅಮೆರಿಕದ ಟೆನ್ನಿಸ್‌ ಸದರ್ಜನ್‌ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ಸ್ವಿಟ್ಜರ್‌ಲೆಂಡ್‌ನ ಆಟಗಾರ ಸ್ಟಾನಿಸ್ಲಾನ್‌ ವಾವ್ರಿಂಕಾಗೆ ಆಘಾತ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.‌

ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಸ್ ಆಟಗಾರ ಎರಡನೇ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಮೆರಿಕದ ಸದರ್ಜನ್‌ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿಯೇ ಮೂರನೇ ಸುತ್ತು ಪ್ರವೇಶಿಸಿದ್ದು ಇದೇ ಮೊದಲು. 2017ರ ಫ್ರೆಂಚ್ ಓಪನ್‌ ಹಾಗೂ ಅಮೆರಿಕ ಓಪನ್‌ನಲ್ಲಿ ಮೊದಲ ಸುತ್ತು ಪ್ರವೇಶಿಸಿರುವುದು ಅವರ ಈವರೆಗಿನ ಸಾಧನೆಯಾಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಸದರ್ಜನ್‌ 97ನೇ ಸ್ಥಾನದಲ್ಲಿ ಇದ್ದಾರೆ. ವಾವ್ರಿಂಕಾ 8ನೇ ಸ್ಥಾನದಲ್ಲಿದ್ದಾರೆ.

ಎರಡನೇ ಸುತ್ತಿನ ಪಂದ್ಯದಲ್ಲಿ ಸದಜರ್ನ್‌ 6–2, 6–1, 6–4ರಲ್ಲಿ ವಾವ್ರಿಂಕಾಗೆ ಸೋಲುಣಿಸುವ ಮೂಲಕ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸ್‌ಮಿಲಿಯನ್ ಮಾರ್ಟೆನರ್ ಅವರ ಸವಾಲು ಎದುರಿಸಲಿದ್ದಾರೆ.

ಆರು ತಿಂಗಳ ಹಿಂದೆ ವಿಂಬಲ್ಡನ್‌ನಲ್ಲಿ ಆಡಿದ್ದ ವಾವ್ರಿಂಕಾ ಬಳಿಕ ಎಡ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಋತುವಿನಲ್ಲಿ ಅವರು ಆಡಿದ ಮೊದಲ ಟೂರ್ನಿ ಇದಾಗಿದೆ. 2014ರ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ರಫೆಲ್‌ ನಡಾಲ್ ಎದುರು ಜಯದಾಖಲಿಸಿ ಪ್ರಶಸ್ತಿ ಎತ್ತಿಹಿಡಿದಿದ್ದರು.

‘ಎದುರಾಳಿ ಉತ್ತಮವಾಗಿ ಆಡಿದರು. ನಾನು ಈ ವರ್ಷ ಕಠಿಣ ಸಂದರ್ಭಗಳನ್ನು ಎದುರಿಸುತ್ತಿದ್ದೇನೆ. ಆಟದಲ್ಲಿ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಈ ಸೋಲು ನನಗೆ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ವಾವ್ರಿಂಕಾ ಹೇಳಿದ್ದಾರೆ.

ಪಂದ್ಯದಲ್ಲಿ ವಾವ್ರಿಂಕಾ 35 ಅನಗತ್ಯ ತಪ್ಪುಗಳನ್ನು ಎಸಗಿದರು. ಸದರ್ಜನ್ ಐದು ಬಾರಿ ವಾವ್ರಿಂಕಾ ಅವರ ಸರ್ವ್ ಮುರಿದರು.

ಮೂರನೇ ಸುತ್ತಿಗೆ ಫೆಡರರ್‌: ಹಾಲಿ ಚಾಂಪಿಯನ್ ಎರಡನೇ ಶ್ರೇಯಾಂಕದ ರೋಜರ್ ಫೆಡರರ್‌ 6–4, 6–4, 7–6ರಲ್ಲಿ 55ನೇ ರ‍್ಯಾಂಕ್‌ನ ಜರ್ಮನಿಯ ಲಾನ್ ಲೆನಾರ್ಡ್‌ ಸ್ಟರ್ಫ್‌ ಎದುರು ಗೆದ್ದಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಆಟಗಾರ ಒಂದು ಗಂಟೆ 55ನಿಮಿಷಗಳಲ್ಲಿ ಪಂದ್ಯ ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ಫ್ರೆಂಚ್‌ನ ರಿಚರ್ಡ್‌ ಗಾಸ್ಕೆಟ್ ಎದುರು ಆಡಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಗಾಸ್ಕೆಟ್‌ 6–2, 6–2, 6–3ರಲ್ಲಿ ಇಟಲಿಯ ಲೊರೆನ್ಜೊ ಸನೆಗೊ ಅವರನ್ನು ಮಣಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಡೊಮಿನಿಕ್ ಥೀಮ್‌ 6–7, 3–6, 6–3, 6–2, 6–3ರಲ್ಲಿ ಡೇನಿಲ್‌ ಕುಡ್ಲಾ ಮೇಲೂ, ಥಾಮಸ್‌ ಬೆರ್ಡಿಕ್‌ 6–3, 2–6, 6–2, 6–3ರಲ್ಲಿ ಗುಲೆರ್ಮೊ ಗಾರ್ಸಿಯಾ ಲೊಪೆಜ್‌ ವಿರುದ್ಧವೂ, ನೊವಾಕ್ ಜೊಕೊವಿಚ್‌ 4–6, 6–3, 6–1, 6–3ರಲ್ಲಿ ಗೇಲ್‌ ಮೊನ್ಫಿಲ್ಸ್ ಎದುರೂ ಗೆದ್ದರು.

ಜೋಹನ್ನಾ ಕೊಂಟಾಗೆ ಸೋಲು: ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಬ್ರಿಟನ್‌ನ ಜೋಹನ್ನಾ ಕೊಂಟ ಸೋತಿದ್ದಾರೆ. ಅಮೆರಿಕದ ಬೆನರ್ಡಾ ಪೆರಾ 6–4, 7–5ರಲ್ಲಿ ನೇರ ಸೆಟ್‌ಗಳಿಂದ ಕೊಂಟಾಗೆ ಸೋಲುಣಿಸಿದ್ದಾರೆ.

ರಷ್ಯಾದ ಮರಿಯಾ ಶರಪೋವಾ 6–3, 6–4ರಲ್ಲಿ ಲಾಟ್ವಿಯಾದ ಆಟಗಾರ್ತಿ ಅನಸ್ತಸೆಜಾ ಸೆವಾಸ್ತೊವಾ ಎದುರು ಗೆದ್ದು ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಇತರ ಪಂದ್ಯಗಳಲ್ಲಿ ಕರೊಲಿನಾ ಗಾರ್ಸಿಯಾ 6–7, 6–2, 8–6ರಲ್ಲಿ ಮಾರ್ಕೆಟಾ ವಂದರೊಸೊವಾ ಮೇಲೂ, ಕರೊಲಿನಾ ಪ್ಲಿಸ್ಕೋವಾ 6–2, 6–4ರಲ್ಲಿ ಸೊರಾನಾ ಕ್ರಿಸ್ಟಿಯಾ ಎದುರೂ, ಏಂಜಲಿಕ್ ಕೆರ್ಬರ್‌ 6–4, 6–1ರಲ್ಲಿ ಕ್ರೊವೇಷ್ಯಾದ ಡೊನ್ನಾ ವೆಕಿಕ್ ವಿರುದ್ಧವೂ, ನವೊಮಿ ಓಸ್ಕರಾ 7–6, 6–2ರಲ್ಲಿ ಎಲಿನಾ ವೆಸನಿನಾ ಎದುರೂ, ಸಿಮೊನಾ ಹಲೆಪ್‌ 6–2, 6–2ರಲ್ಲಿ ಎಜೆನಿ ಬೋಚರ್ಡ್ ವಿರುದ್ಧವೂ ಜಯದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry