ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಳ್ಳು ಸುದ್ದಿ’ ಪ್ರಶಸ್ತಿ ಘೋಷಣೆ

ಪಟ್ಟಿ ಬಿಡುಗಡೆ: ಮಾಧ್ಯಮಗಳ ವಿರುದ್ಧ ಆಕ್ರೋಶ
Last Updated 18 ಜನವರಿ 2018, 20:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮಾಧ್ಯಮಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಸುಳ್ಳು ಸುದ್ದಿ’ ಪ್ರಶಸ್ತಿಗೆ ಆಯ್ಕೆಯಾದ ಮಾಧ್ಯಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

‘ಅತಿ ಭ್ರಷ್ಟ ಮತ್ತು ಅಪ್ರಾಮಾಣಿಕ’ವಾಗಿ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಟ್ರಂಪ್‌ ಲೇವಡಿ ಮಾಡಿದ್ದಾರೆ.

’ಹಲವು ಶ್ರೇಷ್ಠ ವರದಿಗಾರರು ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಅವರನ್ನು ನಾನು ಗೌರವಿಸುತ್ತೇನೆ’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಟ್ವಿಟರ್‌ ಮೂಲಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಟ್ರಂಪ್‌ ಪ್ರಕಟಿಸಿದ್ದಾರೆ. ರಿಪಬ್ಲಿಕನ್‌ ನ್ಯಾಷನಲ್‌ ಕಮಿಟಿ ವೆಬ್‌ಸೈಟ್‌ನಲ್ಲೂ ಪಟ್ಟಿ ಪ್ರಕಟಿಸಲಾಯಿತು. ಆದರೆ, ಕೆಲವೇ ನಿಮಿಷಗಳಲ್ಲಿ ಈ ವೆಬ್‌ಸೈಟ್‌ ನಿಷ್ಕ್ರಿಯವಾಯಿತು.

2016ರ ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರಲು ಟ್ರಂಪ್‌ ಅವರು ರಷ್ಯಾ ಜತೆ ಸೇರಿ ಒಳಸಂಚು ರೂಪಿಸಿದ್ದರು ಎನ್ನುವ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮಾಧ್ಯಮಗಳ ಮೇಲೆ ಈ ಪಟ್ಟಿ ಹೆಚ್ಚು ಕೇಂದ್ರೀಕೃತವಾಗಿದೆ.

‘2017ರಲ್ಲಿ ಪಕ್ಷಪಾತದಿಂದ, ಅಪ್ರಾಮಾಣಿಕ ಮತ್ತು ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗಿತ್ತು. ಮಾಧ್ಯಮಗಳು ಪ್ರಕಟಿಸಿರುವ ಶೇಕಡಾ 90ರಷ್ಟು ವರದಿಗಳು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧವಾಗಿದ್ದವು’ ಎಂದು ಪ್ರಶಸ್ತಿ ಪಟ್ಟಿಯ ವಿವರಣೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿ ಪಟ್ಟಿಯಲ್ಲಿ ‘ನ್ಯೂಯಾರ್ಕ್‌ ಟೈಮ್ಸ್‌’ ಮೊದಲ ಸ್ಥಾನದಲ್ಲಿದೆ. ದೇಶದ ಆರ್ಥಿಕತೆ ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಟ್ರಂಪ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಈ ಪತ್ರಿಕೆ ವರದಿ ಮಾಡಿತ್ತು ಎಂದು ದೂರಲಾಗಿದೆ.

‘ಎಬಿಸಿ ನ್ಯೂಸ್‌’ ಪ್ರಶಸ್ತಿ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. ಚುನಾವಣೆ ಸಂದರ್ಭದಲ್ಲಿ ರಷ್ಯಾ ಜತೆ ಸಂಪರ್ಕ ಸಾಧಿಸುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್‌ ಫ್ಲೈನ್‌ಗೆ ಟ್ರಂಪ್‌ ಸೂಚಿಸಿದ್ದರು ಎಂದು ಎಬಿಸಿ ನ್ಯೂಸ್‌ನ ಬ್ರಿಯಾನ್‌ ರಾಸ್‌ ವಿಶೇಷ ವರದಿ ಮಾಡಿದ್ದರು. ಬಳಿಕ ರಾಸ್‌ ಅವರನ್ನು ಅಮಾನತು ಮಾಡಲಾಗಿತ್ತು.

‘ಸಿಎನ್‌ಎನ್‌’ಗೆ ಮೂರನೇ ಸ್ಥಾನ ನೀಡಲಾಗಿದೆ. ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪುತ್ರನಿಗೆ ವಿಕಿಲೀಕ್ಸ್‌ ಪಡೆದಿದ್ದ ದಾಖಲೆಗಳು ದೊರೆಯುತ್ತಿದ್ದವು ಎಂದು ಸಿಎನ್‌ಎನ್‌ ವರದಿ ಮಾಡಿತ್ತು ಎಂದು ಟೀಕಿಸಲಾಗಿದೆ.

‘ಟೈಮ್‌’ ವಾರಪತ್ರಿಕೆಗೆ ನಾಲ್ಕನೇ ಸ್ಥಾನ ನೀಡಲಾಗಿದೆ. ಶ್ವೇತ ಭವನದ ಒವಲ್‌ ಕಚೇರಿಯಿಂದ ಜ್ಯೂನಿಯರ್‌ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಪುತ್ಥಳಿಯನ್ನು ತೆಗೆದು ಹಾಕಲಾಗಿದೆ ಎಂದು ‘ಟೈಮ್‌’ ವರದಿ ಮಾಡಿತ್ತು ಎಂದು ದೂರಲಾಗಿದೆ.

‘ವಾಷಿಂಗ್ಟನ್‌ ಪೋಸ್ಟ್‌’ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಫ್ಲೋರಿಡಾದಲ್ಲಿ ನಡೆದ ಅಧ್ಯಕ್ಷರ ರ‍್ಯಾಲಿಗೆ ಯಾರೂ ಬಂದಿರಲಿಲ್ಲ. ಜನರಿಲ್ಲದೇ ಬಿಕೋ ಎನ್ನುತ್ತಿತ್ತು ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿತ್ತು ಎಂದು ಟೀಕಿಸಲಾಗಿದೆ.

‘ಐಎಸ್‌ ಉಗ್ರ ಸಂಘಟನೆ ಈಗ ಸಂಕಷ್ಟದಲ್ಲಿದೆ. ನಮ್ಮ ಆರ್ಥಿಕತೆ ಚೇತರಿಸಿಕೊಂಡಿದೆ. ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗಿವೆ. ನಾವು ಮತ್ತೆ ಅಮೆರಿಕವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ’

‘ಸುಳ್ಳು ಸುದ್ದಿ’ ಪ್ರಶಸ್ತಿ ಪ್ರಕಟಿಸಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನವನ್ನು ಟ್ರಂಪ್‌ ಮಾಡುತ್ತಿದ್ದಾರೆ ಎಂದು ರಿಪಬ್ಲಿಕನ್‌ ಪಕ್ಷದ ಜಾನ್‌ ಮ್ಯಾಕ್‌ಕೈನ್‌ ಮತ್ತು ಜೆಫ್‌ ಫ್ಲೇಕ್‌ ದೂರಿದ್ದಾರೆ.

*

‘ಅಪ್ರಮಾಣಿಕ ಮಾಧ್ಯಮ’ ಸತ್ಯ ಸಂಗತಿಗಳನ್ನು ವರದಿ ಮಾಡುತ್ತಿಲ್ಲ.

-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT