ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಡಿಎಲ್ ಮಾರಾಟ ಜಾಲ ಪತ್ತೆ: ಮೂವರ ಬಂಧನ

₹ 20 ಸಾವಿರಕ್ಕೆ ಡಿಎಲ್ ನೀಡುತ್ತಿದ್ದ ಆರೋಪಿಗಳು
Last Updated 18 ಜನವರಿ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಚಾಲನಾ ಪರವಾನಗಿ (ಡಿಎಲ್) ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿರುವ ಕೊತ್ತನೂರು ಪೊಲೀಸರು, ತಲೆಮರೆಸಿಕೊಂಡಿರುವ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಪುತ್ರನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮಂಡ್ಯದ ಅಯಾಜ್ ಪಾಷಾ (30), ಸೈಯದ್ ಜಿಲಾನ್ (30), ಜೆ.ಪಿ.ನಗರದ ಮಹಮದ್ ರೆಹಮತ್ ಅಲಿ (50) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ 22 ನಕಲಿ ಡಿಎಲ್‌ಗಳು, ಆರು ಖಾಲಿ ಸ್ಮಾರ್ಟ್‌ಕಾರ್ಡ್‌ಗಳು, ಡಿಎಲ್ ಮುದ್ರಿಸಲು ಬಳಸುತ್ತಿದ್ದ ಮ್ಯಾಜಿಕ್ ಕಾರ್ಡ್‌ ಪ್ರಿಂಟರ್, ಲ್ಯಾಪ್‌ಟಾಪ್, ₹ 2 ಸಾವಿರ ನಗದು, ಸಾರ್ವಜನಿಕರ ಗುರುತಿನ ಚೀಟಿ ಹಾಗೂ ಭಾವಚಿತ್ರಗಳನ್ನು ಜಪ್ತಿ ಮಾಡಿದ್ದೇವೆ. ಪ್ರಕರಣದ ಪ್ರಮುಖ ಆರೋಪಿಯಾದ ಎಎಸ್‌ಐ ಪುತ್ರ ಸಮೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬಯಲಾಗಿದ್ದು ಹೀಗೆ: ಕೊತ್ತನೂರು ನಿವಾಸಿ ಸೈಯ್ಯದ್ ಇರ್ಷಾದ್ ಎಂಬುವರು, ಕಾರಿನ ಡಿಎಲ್ ಮಾಡಿಸಿಕೊಳ್ಳಲು ಓಡಾಡುತ್ತಿದ್ದರು. ಇವರನ್ನು ಪರಿಚಯ ಮಾಡಿಕೊಂಡ ರೆಹಮತ್ ಅಲಿ, ₹ 20 ಸಾವಿರ ಕೊಟ್ಟರೆ ಡಿಎಲ್ ಮಾಡಿಸಿಕೊಡುವುದಾಗಿ ಹೇಳಿದ್ದ. ಅದಕ್ಕಾಗಿ ಆಧಾರ್ ಕಾರ್ಡ್, ಎಂಟು ಫೋಟೊಗಳು ಹಾಗೂ ಮತದಾನದ ಗುರುತಿನ ಚೀಟಿಯ ಜೆರಾಕ್ಸ್‌ ಪ್ರತಿ ನೀಡುವಂತೆ ತಿಳಿಸಿದ್ದ.

ಅಂತೆಯೇ ಇರ್ಷಾದ್, 2016ರ ಜನವರಿಯಲ್ಲಿ ಜಯನಗರ ಆರ್‌ಟಿಒ ಕಚೇರಿ ಬಳಿ ತೆರಳಿ ಆತನಿಗೆ ಹಣ ಹಾಗೂ ದಾಖಲೆಗಳನ್ನು ಕೊಟ್ಟು ಬಂದಿದ್ದರು. ತಿಂಗಳ ಬಳಿಕ ಆರೋಪಿ ಅಂಚೆ ಮೂಲಕ ಇರ್ಷಾದ್ ಮನೆ ವಿಳಾಸಕ್ಕೆ ಡಿಎಲ್ ಕಳುಹಿಸಿದ್ದ.

ಅದರಲ್ಲಿ ಜಯನಗರ ಆರ್‌ಟಿಒ ಬದಲಾಗಿ, ಇಂದಿರಾನಗರ ಆರ್‌ಟಿಒ ಎಂದು ನಮೂದಾಗಿತ್ತು. ಇದರಿಂದ ಅನುಮಾನಗೊಂಡ ಇರ್ಷಾದ್, ಇಂದಿರಾನಗರ ಆರ್‌ಟಿಒ ಕಚೇರಿಗೆ ತೆರಳಿ ವಿಚಾರಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿತ್ತು. ನಂತರ ಅವರು ರೆಹಮತ್‌ನನ್ನು ಸಂಪರ್ಕಿಸಿ, ಹಣ ಮರಳಿಸದಿದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಎಚ್ಚರಿಸಿದ್ದರು. ಎರಡು ವರ್ಷ ಕಳೆದರೂ ಆತ ಹಣ ಕೊಡದಿದ್ದಾಗ ಇದೇ ಜ.10ರಂದು ಕೊತ್ತನೂರು ಠಾಣೆಗೆ ದೂರು ಕೊಟ್ಟಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಮೊದಲು ರೆಹಮತ್‌ನನ್ನು ವಶಕ್ಕೆ ಪಡೆದರು. ಆತ ನೀಡಿದ ಮಾಹಿತಿ ಆಧರಿಸಿ ಉಳಿದಿಬ್ಬರನ್ನು ಮಂಡ್ಯದಲ್ಲಿ ಪತ್ತೆ ಮಾಡಿದರು.

ಡಿಎಲ್ ಪಡೆಯಲು 8ನೇ ತರಗತಿ ವ್ಯಾಸಂಗ ಕಡ್ಡಾಯವಿದೆ. ಹೀಗಾಗಿ, 8ನೇ ತರಗತಿ ವ್ಯಾಸಂಗ ಮಾಡದವರು, ಶೈಕ್ಷಣಿಕ ದಾಖಲೆಗಳು ಇಲ್ಲದವರು ಇವರನ್ನು ಸಂಪರ್ಕಿಸುತ್ತಿದ್ದರು. ಡಿಎಲ್‌ಗಳನ್ನು ಸಾರಿಗೆ ಇಲಾಖೆಯಿಂದಲೇ ವಿತರಣೆ ಮಾಡಲಾಗುತ್ತಿದೆ ಎಂದು ನಂಬಿಸಲು ಆರೋಪಿಗಳು ಸಾರ್ವಜನಿಕರನ್ನು ಆರ್‌ಟಿಒ ಕಚೇರಿಗಳ ಬಳಿಯೇ ಕರೆಸಿಕೊಂಡು ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಕಾರ್ಡ್‌ ಖರೀದಿ

ಅಯಾಜ್ ಹಾಗೂ ಸೈಯದ್, ಚಿಪ್ ಇರುವ ಖಾಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದರು. ಕಾರ್ಡ್‌ ಪೂರೈಸುವವರು ಟಿನ್ ಸಂಖ್ಯೆ ಕೇಳಿದರೆ, ‘ನಾವು ಹೊಸದಾಗಿ ವ್ಯವಹಾರ ಪ್ರಾರಂಭಿಸಿದ್ದೇವೆ. ಟಿನ್ ಸಂಖ್ಯೆ ಬಂದ ಕೂಡಲೇ ಕೊಡುತ್ತೇವೆ’ ಎಂದು ಸುಳ್ಳು ಹೇಳುತ್ತಿದ್ದರು.

ಆರೋಪಿಗಳಿಂದ ಯಾರ‍್ಯಾರು ಡಿಎಲ್‌ಗಳನ್ನು ಪಡೆದಿದ್ದಾರೋ, ಅವರೆಲ್ಲರನ್ನೂ ಠಾಣೆಗೆ ಕರೆಸಿ ಹೇಳಿಕೆ ಪಡೆಯಲಾಗುತ್ತಿದೆ. ಬಾಂಗ್ಲಾದೇಶದ ಪ್ರಜೆಗಳಿಗೂ ಇವರು ಡಿಎಲ್ ನೀಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT