ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ವೈದ್ಯ!

7
ಬೆಳಗಾವಿ ಪೊಲೀಸರಿಂದ ಡಾ.ಅಮಿತ್‌ ಗಾಯಕವಾಡ ಬಂಧನ

ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ವೈದ್ಯ!

Published:
Updated:
ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ವೈದ್ಯ!

ಬೆಳಗಾವಿ: ನಗರ ಹಾಗೂ ಕಲಬುರ್ಗಿಯಲ್ಲಿ ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದ ಕಲಬುರ್ಗಿಯ ಡಾ.ಅಮಿತ್‌ ಗಾಯಕವಾಡ (37) ಎಂಬುವವರನ್ನು ಇಲ್ಲಿನ ಎಪಿಎಂಸಿ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌)ಯ ಪೆಥಾಲಜಿ ವಿಭಾಗದಲ್ಲಿ ಅವರು ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಬುಧವಾರ ನಸುಕಿನಲ್ಲಿ ಜಾಧವನಗರದಲ್ಲಿ ಏಳು ಕಾರುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣದ ತನಿಖೆ ನಡೆಸುವಾಗ, ಕ್ಯಾಂಪ್‌ ಠಾಣೆ ವ್ಯಾಪ್ತಿಯಲ್ಲೂ ಮೂರು ದುಬಾರಿ ಕಾರುಗಳಿಗೆ ಬೆಂಕಿ ಹಾಕಲಾಗಿದೆ ಎನ್ನುವ ಮಾಹಿತಿ ಬಂತು. 11ನೇ ಕಾರಿಗೆ ಬೆಂಕಿ ಹಚ್ಚುವ ಯತ್ನದಲ್ಲಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ’ ಎಂದು ಡಿಸಿಪಿ ಸೀಮಾ ಲಾಟ್ಕರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪೆಟ್ರೋಲ್‌– ಡೀಸೆಲ್‌ ಡಬ್ಬಿಗಳು, ಕರ್ಪೂರದ ಮೂರು ಪೊಟ್ಟಣ (ತಲಾ 250 ಗ್ರಾಂ), ಕಾಟನ್‌ ವೇಸ್ಟ್‌, ಸ್ಪಿರಿಟ್‌, ಲೈಟರ್‌, ಚಾಕು, ಸುತ್ತಿಗೆ ಹಾಗೂ 6 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೆಟ್ರೋಲ್‌ ಅಥವಾ ಡೀಸೆಲ್‌ನಿಂದ ಬಟ್ಟೆ ನೆನೆಸಿ, ಅದನ್ನು ಕಾರಿನ ಮೇಲೆ ಇಟ್ಟು ಬೆಂಕಿಹಚ್ಚುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ಮನೆ ಕಾಂಪೌಂಡ್‌ ಅಥವಾ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಜಾಗದಲ್ಲಿದ್ದ ಕಾರುಗಳಿಗೆ ಮಾತ್ರವೇ ಬೆಂಕಿ ಹಚ್ಚಿದ್ದಾರೆ. ರಸ್ತೆ ಬದಿಯಲ್ಲಿದ್ದ ಕಾರುಗಳಿಗೆ ಹಾನಿ ಮಾಡಿಲ್ಲ. ವಿಶೇಷವಾಗಿ, ಐಷಾರಾಮಿ ಕಾರುಗಳನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ’ ಎಂದು ಅವರು ತಿಳಿಸಿದರು.

‘ವೈದ್ಯರಾಗಿದ್ದುಕೊಂಡು ಏಕೆ ಈ ಕೃತ್ಯ ಎಸಗುತ್ತಿದ್ದ, ಇದಕ್ಕೆ ಕಾರಣ ಏನು ಎನ್ನುವುದು ತನಿಖೆ ನಂತರವಷ್ಟೇ ಖಚಿತವಾಗಬೇಕಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕಲಬುರ್ಗಿಯಲ್ಲೂ ಘಟನೆ: ‘ಕಲಬುರ್ಗಿಯಲ್ಲೂ ಈಚೆಗೆ ಇದೇ ರೀತಿಯ ಘಟನೆಗಳು ನಡೆದಿವೆ. ಅಲ್ಲಿ 12ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ 12ರಿಂದ 15ರವರೆಗೆ ಕಲಬುರ್ಗಿಗೆ ಹೋಗಿದ್ದಾಗಿ ಆರೋಪಿ ತಿಳಿಸಿದ್ದಾರೆ. ಅವರೇ ದುಷ್ಕೃತ್ಯ ಎಸಗಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ. ಆದರೆ, ಎರಡೂ ಕಡೆ ನಡೆದಿರುವ ಕೃತ್ಯಗಳು ಒಂದೇ ರೀತಿಯವಾಗಿವೆ’ ಎಂದು ಅವರು ತಿಳಿಸಿದರು.

ಸಹೋದ್ಯೋಗಿಗಳ ದೂರು: ಆರೋಪಿ ಅಮಿತ್‌ ವಿರುದ್ಧ ಕಾಲೇಜಿನ ಸಹೋದ್ಯೋಗಿಗಳು ಕೂಡ ದೂರು ನೀಡಿದ್ದಾರೆ. ‘ತೊಂದರೆ ಕೊಡುವ ಅವರನ್ನು ಮೊದಲು ವರ್ಗಾವಣೆ ಮಾಡಿ. ಇಲ್ಲವೇ, ನಮ್ಮನ್ನು ವರ್ಗಾಯಿಸಿ’ ಎಂದು ಸಹೋದ್ಯೋಗಿಗಳು ಈಚೆಗೆ ಬಿಮ್ಸ್‌ ನಿರ್ದೇಶಕರಿಗೆ ದೂರು ನೀಡಿದ್ದರು.

‘ದೂರು ಬಂದ ಕಾರಣ ಅವರಿಗೆ ಇದೇ 16ರಿಂದ ಒಂದು ತಿಂಗಳು ಕಡ್ಡಾಯ ರಜೆ ನೀಡಲಾಗಿತ್ತು’ ಎಂದು ಬಿಮ್ಸ್‌ ನಿರ್ದೇಶಕ ಡಾ.ಷಣ್ಮುಖ ಕಳಸದ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry