ಅಗ್ನಿ ಅವಘಡ; ಹೊತ್ತಿ ಉರಿದ ಹೋಟೆಲ್‌

7

ಅಗ್ನಿ ಅವಘಡ; ಹೊತ್ತಿ ಉರಿದ ಹೋಟೆಲ್‌

Published:
Updated:
ಅಗ್ನಿ ಅವಘಡ; ಹೊತ್ತಿ ಉರಿದ ಹೋಟೆಲ್‌

ಬೆಂಗಳೂರು: ಜಯನಗರದ 4ನೇ ಹಂತದಲ್ಲಿರುವ ‘ಉಪಾಹಾರ ದರ್ಶಿನಿ’ ಹೋಟೆಲ್‌ನಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟುಹೋಗಿವೆ.

ಬಿಎಂಟಿಸಿ ಬಸ್‌ ನಿಲ್ದಾಣ ಎದುರಿನ ಮೂರು ಅಂತಸ್ತಿನ ಕಟ್ಟಡದಲ್ಲಿ ಈ ಹೋಟೆಲ್‌ ಇದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಇತ್ತೀಚೆಗೆ ಹೋಟೆಲ್‌ಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 3.30 ಗಂಟೆಗೆ ಆ ದೀಪಗಳಿಂದ ಬೆಂಕಿ ಬರಲಾರಂಭಿಸಿತ್ತು. ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿ ಹೋಟೆಲ್‌ ಹೊತ್ತಿ ಉರಿಯತೊಡಗಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಸಂಜೆ 5 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಪ್ರಾಣಾಪಾಯವಿಲ್ಲ: ‘ಹೋಟೆಲ್‌ನಲ್ಲಿ 35 ಮಂದಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆ ನಂತರ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಬೆಂಕಿ ಕಾಣಿಸುತ್ತಿದ್ದಂತೆ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

‘ಕಟ್ಟಡದ ನೆಲ ಮಹಡಿಯಲ್ಲಿ ಸ್ವ–ಸಹಾಯ ಕೌಂಟರ್‌ ಇದೆ. ಮೊದಲ ಮಹಡಿಯಲ್ಲಿ ಕುಳಿತುಕೊಂಡು ಆಹಾರ ಸೇವನೆಗೆ ಅವಕಾಶವಿದೆ. ಎರಡನೇ ಮಹಡಿಯಲ್ಲಿ ಅಡುಗೆ ಕೊಠಡಿ ಹಾಗೂ ಮೂರನೇ ಮಹಡಿಯಲ್ಲಿ ಹಳೆ ವಸ್ತುಗಳ ಸಂಗ್ರಹಣಾ ಕೊಠಡಿ ಇದೆ. ಬೆಂಕಿ ಉರಿಯುತ್ತಿದ್ದ ವೇಳೆಯಲ್ಲೆ ಹೋಟೆಲ್‌ ಒಳಗಿದ್ದ ನಾಲ್ಕು ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಹೊರಗೆ ತರುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry