ಕೆಂಪುತೋಟದ ಕಥೆ

7

ಕೆಂಪುತೋಟದ ಕಥೆ

Published:
Updated:
ಕೆಂಪುತೋಟದ ಕಥೆ

ಕಣ್ಣಿಗೆ ಹಸಿರು ಗಾಜು ಹಾಕಿಕೊಂಡಂತೆ ಎಲ್ಲಾ ಕಡೆಯೂ ಹಸಿರೋ ಹಸಿರು. ಅಲ್ಲಲ್ಲಿ ನಗೆ ಚೆಲ್ಲುವ ಬಣ್ಣಬಣ್ಣದ ಹೂಗಳ ಚಿತ್ತಾರ. ಇವುಗಳೊಂದಿಗೆ ಕಾಣಸಿಗುವ ವಿವಿಧ ಫಲಗಳಿಗೇನೂ ಕಡಿಮೆ ಇಲ್ಲ... ಇದು ಬೆಂಗಳೂರಿನ ಶ್ವಾಸಕೋಶ ಎಂದೇ ಖ್ಯಾತಿಪಡೆದಿರುವ ಕೆಂಪುತೋಟದ (ಲಾಲ್‌ಬಾಗ್‌) ನಿತ್ಯ ದೃಶ್ಯ.

‘ಲಾಲ್‌ಬಾಗ್‌’ ಎಂದರೆ ಎಲ್ಲರ ಕಣ್ಣು ಅರಳುತ್ತೆ. ಪ್ರವಾಸಿಗರಿಗಂತೂ ಇದು ಬೆಂಗಳೂರಿನ ಪ್ರಧಾನ ಆಕರ್ಷಣೆ. ನಿವಾಸಿಗಳಿಗೆ ಲಾಲ್‌ಬಾಗ್‌ ವಾಕಿಂಗ್‌ ತಾಣ. ರೈತಾಪಿ ಜನರಿಗೆ ಇದು ಹಲವು ಬಗೆಯ ಸಸಿ, ಬಿತ್ತನೆ ಬೀಜ ದೊರೆಯುವ ಸ್ಥಳ. ತೋಟ ಬೆಳೆಸುವರಿಗೆ ಬಗೆಬಗೆ ಸಸ್ಯಗಳು ಸಿಗುವ ಸಂತೆ.

‘ಎಷ್ಟೆಲ್ಲ ವೈವಿಧ್ಯತೆಗಳನ್ನು ತನ್ನಲ್ಲಿಟ್ಟುಕೊಂಡ ಲಾಲ್‌ಬಾಗ್‌ ಈಗಿರುವ ರೂಪು ತಳೆಯಲು ಎರಡೂವರೆ ಶತಮಾನಗಳ ಶ್ರಮ ಇದೆ. ಮೊಘಲರ ಆಡಳಿತಾವಧಿಯ ಬಳಿಕ ಕೆಲ ಉದ್ಯಾನಗಳಿಗೆ ‘ಲಾಲ್‌ಬಾಗ್‌’ ಎಂಬ ಹೆಸರಿದೆ. ಇಂಥ ಉದ್ಯಾನಗಳಿಗೆ ವಿಶಿಷ್ಟ ಶೈಲಿಯ ಮೊಘಲ್‌ ಉದ್ಯಾನಗಳೇ ಸ್ಫೂರ್ತಿ’ ಎನ್ನುತ್ತಾರೆ ಸಸ್ಯತಜ್ಞ ಡಾ.ಎಸ್‌. ನಾರಾಯಣ ಸ್ವಾಮಿ.

ಆಗ ಶುರುವಾದ ಮೊಘಲ್‌ ಶೈಲಿಯ ಪಾರ್ಕ್‌ಗಳಲ್ಲಿ ಮೊದಲನೆಯದು ಬಂಗಾಲದ ಲಾಲ್‌ಬಾಗ್‌. ಈಗ ಅದು ಬಾಂಗ್ಲಾ ದೇಶದ ಡಾಕಾದಲ್ಲಿದೆ. ಅದನ್ನು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿ ಸುಸ್ಥಿತಿಯಲ್ಲಿ ಇಡಲಾಗಿದೆ. ‘ಲಾಲ್‌ಬಾಗ್‌’ ಹೆಸರಿನಲ್ಲಿ ಆರಂಭವಾದ ಎರಡನೇ ಉದ್ಯಾನ ನಮ್ಮ ಶ್ರೀರಂಗಪಟ್ಟಣ ದ್ವೀಪದಲ್ಲಿ ಇತ್ತು. ದ್ವೀಪದ ದಕ್ಷಿಣ ತುದಿಯಲ್ಲಿ ನಿರ್ಮಾಣಗೊಂಡ ಉದ್ಯಾನ ಇದ್ದ ಸ್ಥಳದ ಹೆಸರು ‘ಸಹಾರ್‌ ಗಂಜಂ’ ಅದನ್ನೇ ಹೈದರಾಲಿ ‘ಲಾಲ್‌ಬಾಗ್‌’ ಎಂದು ಕರೆದರು. ಅದು ಆತನ ಅಕ್ಕರೆಯ ಉದ್ಯಾನ. ಆದರೆ ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್‌ ಸೇನೆ ಉದ್ಯಾನವನ್ನು ಹಾಳುಗೆಡವಿತು. ಉದ್ಯಾನದಲ್ಲಿದ್ದ ‘ಲಾಲ್‌ ಮಹಲ್‌’ ಪುಟ್ಟ ಕಟ್ಟಡ ಮಾತ್ರ ‘ಲಾಲ್‌ಬಾಗ್‌’ ನೆನಪನ್ನು ಈಗಲೂ ಅಲ್ಲಿ ಉಳಿಸಿದೆ.

ಮೂರನೇ ‘ಲಾಲ್‌ಬಾಗ್‌’ ಇದ್ದುದು ಹೈದರಾಲಿ ಆಳ್ವಿಕೆ ಕಾಲದಲ್ಲಿ. ಆಗಿನ ಬೆಂಗಳೂರಿನ ಹೊರವಲಯದಲ್ಲಿ. ಅದು ಆಗ ಮಾವಿನ ತೋಪು ಪುಟ್ಟ ಹಳ್ಳಿಯೊಂದರ ಬದಿಯಲ್ಲಿ. ಆ ಗ್ರಾಮದ ಹೆಸರು ಮಾವಳ್ಳಿ. ಬೆಂಗಳೂರಿನ ಕೋಟೆ ಸುತ್ತಲೂ ಹರಡಿದ್ದ ಹತ್ತಾರು ಹಳ್ಳಿಗಳಲ್ಲಿ ಇದೂ ಒಂದು. ಹೈದರಾಲಿ ಸೂಚನೆಯಂತೆ ಮಾವಿನತೋಪನ್ನು ಪುಟ್ಟ ಉದ್ಯಾನವನ್ನು ಅಭಿವೃದ್ಧಿಗೊಳಿಸಿದವರು ಬೆಂಗಳೂರಿನ ಖಿಲ್ಲೇದಾರ್‌ ಆಗಿದ್ದ ಇಬ್ರಾಹಿಂ ಖಾನ್‌.

ಬ್ರಿಟಿಷ್‌ ದಾಳಿಯಲ್ಲಿ (1791) ಇಬ್ರಾಹಿಂ ತೀರಿಕೊಂಡ ನಂತರ ಲಾಲ್‌ಬಾಗ್‌ಗೆ ಪೋಷಕನೊಂದಿಗೆ ನಂಟು ಹೋಯಿತು. ಬ್ರಿಟಿಷರ ಹಿಡಿತದಲ್ಲಿದ್ದ ಲಾಲ್‌ಬಾಗ್‌ ಅನ್ನು ನಂತರ ಸಂಧಾನದಿಂದ ಪಡೆದುಕೊಂಡ ಟಿಪ್ಪುಸುಲ್ತಾನ್‌ ಶ್ರೀರಂಗಪಟ್ಟಣದ  ಲಾಲ್‌ಬಾಗ್‌ನಂತೆಯೇ ಬೆಂಗಳೂರು ಲಾಲ್‌ಬಾಗ್‌ ಅಭಿವೃದ್ಧಿಗೆ ಕ್ರಮ ಕೈಗೊಂಡ. ಆದರೆ ಹವಾಮಾನ ವೈಪರಿತ್ಯದಿಂದಾಗಿ ಶ್ರೀರಂಗಪಟ್ಟಣದ ಉದ್ಯಾನ ಸರಿಯಾಗಿ ಬೆಳೆಯಲಿಲ್ಲ. ಎಲ್ಲಾ ಋತುಗಳಲ್ಲೂ ಅನುಕೂಲವಾದ ವಾತಾವರಣವಿದ್ದ ಬೆಂಗಳೂರು ಲಾಲ್‌ಬಾಗ್‌ ಏರುಮುಖ ಖಂಡಿತು. ಬೇರೆ ಬೇರೆ ದೇಶಗಳಿಂದ ವಿವಿಧ ಬಗೆ ಹಣ್ಣು, ಹೂಗಳ ಗಿಡಗಳನ್ನು ಆಮದು ಮಾಡಿಕೊಂಡು ಬೆಂಗಳೂರು ಲಾಲ್‌ಬಾಗ್‌ ಬೆಳವಣಿಗೆಗೆ ಟಿಪ್ಪು ಮುಂದಾದ.

ಉದ್ಯಾನಕ್ಕಾಗಿ ಅನೇಕ ಭಾವಿಗಳು ತೋಡಲ್ಪಟ್ಟವು. ಸೈಪ್ರಸ್‌ ಮರಗಳೊಂದಿಗೆ ಹಣ್ಣುಗಳ ಪ್ರತ್ಯೇಕ ತೋಟವೂ ಸಿದ್ಧವಾಯಿತು. ಲಾಲ್‌ಬಾಗ್‌ ನಳನಳಿಸತೊಡಗಿತು. ಹೂವು–ಹಣ್ಣು–ಹಸಿರು ಲಾಲ್‌ಬಾಗ್‌ನಲ್ಲಿ ಮನೆ ಮಾಡಿತು. ಮತ್ತೆ ಯುದ್ಧದಲ್ಲಿ ಬೆಂಗಳೂರು–ಶ್ರೀರಂಗಪಟ್ಟಣ ಎರಡನ್ನು ಬ್ರಿಟಿಷರು ತಮ್ಮ ಹತೋಟಿಗೆ ತೆಗೆದುಕೊಂಡರು. ಎರಡೂ ಕಡೆ ಸೈನಿಕ ನೆಲೆಗಳು ಸ್ಥಾಪನೆಗೊಂಡವು. ಬೆಂಗಳೂರು ಬಿಳಿಯರ ಅಚ್ಚುಮೆಚ್ಚಿನ ಸ್ಥಳವಾಯಿತು. ಆಗಿನ್ನೂ ಛಾಯಾಗ್ರಹಣ ಅನ್ವೇಷಣೆ ಆಗಿರಲಿಲ್ಲ. ಬರಹ ಹಾಗೂ ಚಿತ್ರಗಳಲ್ಲಿಯೇ ಎಲ್ಲವೂ ದಾಖಲಾಗಬೇಕಿತ್ತು. ಹಲವು ಬಿಳಿಯ ಚಿತ್ರಕಲಾವಿದರು ಬ್ರಿಟಿಷ್‌ ಸರಹದ್ದಿನ ಸ್ಥಳಗಳಿಗೆ ಬಂದರು.

ಬೆಂಗಳೂರಿಗೆ ಬಂದ ಚಿತ್ರಕಲಾವಿದರಿಗೆ ‘ಲಾಲ್‌ಬಾಗ್‌’ ಪ್ರಿಯ ಸ್ಥಳವಾಯಿತು. ಅನೇಕ ಕಲಾವಿದರು ಕುಂಚದಿಂದ ಬಿಡಿಸಿದ ಚಿತ್ರಗಳೇ ಆಗಿನ ‘ಲಾಲ್‌ಬಾಗ್‌’ ಸೌಂದರ್ಯವನ್ನು ಅಸ್ವಾದಿಸಲು ಈಗ ಇರುವ ದಾಖಲೆಗಳು. ಇಂಗ್ಲೆಂಡಿನಲ್ಲಿ ಹೆಸರು ಮಾಡಿದ ಹಲವು ಕಲಾವಿದರು ತಮ್ಮ ಕ್ಯಾನ್‌ವ್ಯಾಸ್‌ನಲ್ಲಿ ‘ಬೆಂಗಳೂರು ಕೆಂಪು ತೋಟ’ವನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರಕೃತಿಗಳು ಹೊತ್ತುಗಳಾಗಿ ಇಂಗ್ಲೆಂಡಿನಲ್ಲಿಯೇ ಮುದ್ರಣಗೊಂಡು ಬಿಡುಗಡೆ ಕಂಡಿವೆ. ಕೆಲವು ಮಾತ್ರ ಈಗ ಲಭ್ಯ. ಅವುಗಳಲ್ಲಿ ಬೆಂಗಳೂರು–ಲಾಲ್‌ಬಾಗ್‌ನ ವಿವಿಧ ನೋಟಗಳು ಆಕರ್ಷಕ.

ಬೆಂಗಳೂರಿಗೆ ಭೇಟಿ ನೀಡಿ ಚಿತ್ರಬಿಡಿಸಿದ ಕಲಾವಿದರಲ್ಲಿ ಕೋಲ್‌ಬ್ರೂಕ್‌ ಒಬ್ಬರು. ಅವರು 1793ರಲ್ಲಿ ಲಾಲ್‌ಬಾಗ್‌ನ ಕೆಂಪೇಗೌಡ ಗೋಪುರವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಚಿತ್ರಗಳನ್ನು ರಚಿಸಿದ್ದಾರೆ. ಇನ್ನೊಬ್ಬ ಕಲಾಕಾರ ಹ್ಯೂಮ್‌ ಅವರೂ ಆಗಿನ ಲಾಲ್‌ಬಾಗ್‌ ತೋಟವನ್ನು ಚಿತ್ರಿಸಿದ್ದಾರೆ.

ದಕ್ಷಿಣ ಭಾರತದ ಭೌಗೊಳಿಕ ಸ್ಥಿತಿಗತಿಗಳನ್ನು ಡಾ. ಪ್ರಾನ್ಸಿಸ್‌ ಬುಕಾನನ್‌ ಸವಿಸ್ತಾರವಾಗಿ ಬರೆದು ಇಟ್ಟಿದ್ದಾರೆ. ವೈದ್ಯರಾಗಿದ್ದ ಬುಕಾನನ್‌ ನಂತರ ಸಸ್ಯ ಹಾಗೂ ಜೀವಿ ಶಾಸ್ತ್ರದಲ್ಲಿ ಪರಿಣಿತ ರೆನ್ನಿಸಿಕೊಂಡರು. ಇವರು ಜನಜೀವನವನ್ನಲ್ಲದೆ ಸಸ್ಯ ಹಾಗೂ ಪ್ರಾಣಿ ಪಕ್ಷಿ ಪ್ರಪಂಚವನ್ನು ಸುಧೀರ್ಘ ಚಿತ್ರಗಳ ಸಮೇತ ದಾಖಲುಗೊಳಿಸಿದ್ದಾರೆ.

ಡಾ. ಬುಕಾನನ್‌ 1800 ರಲ್ಲಿ ದಾಖಲು ಮಾಡಿದ್ದ ಲಾಲ್‌ಬಾಗ್‌ನಲ್ಲಿರುವ ಸಸ್ಯಗಳ ಪಟ್ಟಿ ನೋಡಿ ಬ್ರಿಟಿಷ್‌ ಮೇಲಧಿಕಾರಿಗಳು ಅಚ್ಚರಿಗೊಂಡರಲ್ಲದೆ ಅಲ್ಲಿ ಇನ್ನೂ ಏನೆಲ್ಲಾ ಬೆಳೆಯಬಹುದು ಎಂಬುದರ ಬಗ್ಗೆ ಸಮೀಕ್ಷೆಯನ್ನು ನಡೆಸಲು ಆದೇಶ ಮಾಡಿದರು. ಬೆಂಗಳೂರು ವಾತಾವರಣದಲ್ಲಿ ಅನೇಕ ಹಣ್ಣು–ಅಲಂಕಾರಿಕ ಗಿಡ ಮರಗಳನ್ನು ಬೆಳೆಸಲು ಸಾಧ್ಯವಿದೆ ಎಂಬುದು ಸಮೀಕ್ಷೆಯಿಂದ ಗೊತ್ತಾಯಿತು. ಆಗಲೇ ಲಾಲ್‌ಬಾಗ್‌ ಸಸ್ಸೋದ್ಯಾನವೆಂದು ಎಲ್ಲರ ಗಮನ ಸೆಳೆಯಿತು. ಇದು ಮುಂದೆ ಬ್ರಿಟಿಷ್‌ ಪ್ರಜೆಗಳಿಗೆ ಅನುಕೂಲವಾಗುವಂತಹ ಹೂ, ಹಣ್ಣು–ತರಕಾರಿಗಳನ್ನು ಬೆಳೆಯುವ ಬೃಹತ್‌ ತೋಟವಾಗಿ ಮಾರ್ಪಟ್ಟಿತು.

ಮನೆಬಳಕೆಯ ತರಕಾರಿ–ಹಣ್ಣುಗಳಲ್ಲದೆ ವಾಣಿಜ್ಯ ಬೆಳೆಗಳಿಗೂ ಲಾಲ್‌ಬಾಗ್‌ ತೋಟ ಅಂಗಳವಾಯಿತು. ಆಲೂಗಡ್ಡೆ, ಕ್ಯಾರೆಟ್‌, ಮೂಲಂಗಿ, ಬದನೆ, ಕಾಫಿ, ಟೀ, ರಬ್ಬರ್‌, ದ್ರಾಕ್ಷಿ ಅಷ್ಟೇಕೆ ಸೇಬು ಬೆಳೆಯುವ ತಾಣವಾಯಿತು ಲಾಲ್‌ಬಾಗ್‌. ಏನು ಬೆಳೆಯುತ್ತದೆ ಎಂಬುದನ್ನು ತೋರಿಸಿದರೆ ತಾನೇ ಬೇರೆಯವರಿಗೆ ಗೊತ್ತಾಗುವುದು ಅದಕ್ಕಾಗಿ ಶುರುವಾಯ್ತು ನೋಡಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ.

ಕಾಯಿಪಲ್ಲೆ ಮಾತ್ರವಲ್ಲ ಆದಾಯ ತಂದುಕೊಡುವ ಅಲಂಕಾರಿಕ ಹೂ ಗಿಡಗಳೂ ಫಲಪುಷ್ಪಗಳು ಪ್ರದರ್ಶನದಲ್ಲಿ ಕಾಣಿಸಿಕೊಂಡವು. ವರ್ಷ ವರ್ಷ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ರಾಷ್ಟ್ರಮಟ್ಟದಲ್ಲೂ ಹೆಸರಾಯಿತು. ಚಳಿಗಾಲ ಹಾಗೂ ಮಳೆಗಾಲದಲ್ಲಿ ಎರಡೂ ಪ್ರದರ್ಶನಗಳು ಏರ್ಪಾಡಾದವು. ಸ್ವಾತಂತ್ರ್ಯ ನಂತರ ಇಂತಹ ಪ್ರದರ್ಶನಗಳಿಗೆ ಗಣರಾಜ್ಯೋತ್ಸವ–ಸ್ವಾತಂತ್ರೋತ್ಸವ ಪ್ರದರ್ಶನಗಳೆಂಬ ಹೆಸರು ಬಿತ್ತು.

ಜಾಗತಿಕ ಮಟ್ಟದಲ್ಲೂ ಜನಪ್ರಿಯವಾಗಿರುವ ಲಾಲ್‌ಬಾಗ್‌ ಫಲ ಪುಷ್ಪ ಪ್ರದರ್ಶನಗಳು ವರ್ಷದಿಂದ ವರ್ಷಕ್ಕೆ ಬದಲಾವಣೆಗಳೊಂದಿಗೆ ವಿನೂತನವಾಗಿ ಕಾಣಿಸಿಕೊಳ್ಳುತ್ತ ನೋಡುಗರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಜನಾಕರ್ಷಣೆಗೆ ಇನ್ನೊಂದು ಹೆಸರನ್ನು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry