ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

7

ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

Published:
Updated:

ರಾಮನಗರ: 2006ರ ಏಪ್ರಿಲ್‌ 1ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇಲ್ಲಿನ ಕಂದಾಯ ಭವನದ ಎದುರು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ನೂತನ ಪಿಂಚಣಿ ಯೋಜನೆಯು ನೌಕರರಿಗೆ ಮಾರಕವಾಗಿದೆ. ಈ ಯೋಜನೆಗೆ ಒಳಪಡುವ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯ ಶೇ 10ರಷ್ಟು ನೌಕರರ ವೇತನದಲ್ಲಿ ಮುರಿದುಕೊಳ್ಳಲಾಗುತ್ತದೆ. ಅದಕ್ಕೆ ಶೇ 10ರಷ್ಟನ್ನು ಸರ್ಕಾರ ಸಂದಾಯ ಮಾಡುತ್ತಿದೆ. ಎಲ್ಲ ಹಣವನ್ನು ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತಿದೆ ಎಂದರು.

ನಿವೃತ್ತಿ ಹೊಂದಿದ ನಂತರ ಸೇವಾ ಅವಧಿಯಲ್ಲಿ ಮುರಿದುಕೊಂಡ ಒಟ್ಟು ಮೊತ್ತವನ್ನು ಅಂದು ಷೇರು ಪೇಟೆ ಹೊಂದಿರುವ ಮೌಲ್ಯ ಲೆಕ್ಕ ಹಾಕಿ, ಅದರಲ್ಲಿ ಶೇ 60ರಷ್ಟನ್ನು ಮಾತ್ರ ಪಿಂಚಣಿದಾರರಿಗೆ ನೀಡಲಾಗುತ್ತಿದೆ. ಈ ಮೊತ್ತಕ್ಕೂ ಶೇ 35ರಷ್ಟು ತೆರಿಗೆ ಪಾವತಿಸಬೇಕಾಗುತ್ತಿದೆ. ಹಳೆಯ ಯೋಜನೆಯಲ್ಲಿ ₹ 50,000 ಮೂಲ ವೇತನವಿದ್ದರೆ ₹ 25,000 ಪಿಂಚಣಿ ಲಭಿಸುತ್ತಿತ್ತು. ಈಗ ಈ ರೀತಿ ನಿಶ್ಚಿತ ಹಣ ಸಿಗುವುದಿಲ್ಲ. ಹೊಸ ಯೋಜನೆಯಿಂದ ನೌಕರರಿಗೆ ಅನುಕೂಲವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಚೆಗೆ ಬಂದ ಹೊಸ ಆದೇಶದಂತೆ ಪ್ರತಿ ವಹಿವಾಟಿಗೆ ಸೇವಾ ಶುಲ್ಕ ಶೇ 0.01ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತಿದೆ. ₹ 16,000 ಮೂಲ ವೇತನವಿದ್ದರೆ ₹ 192 ಮುರಿದುಕೊಳ್ಳಲಾಗುತ್ತಿದೆ. ಇದುವರೆಗೆ ಸುಮಾರು 800 ಎನ್‌.ಪಿ.ಎಸ್‌. ನೌಕರರು ಮೃತಪಟ್ಟಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಪಿಂಚಣಿ ಮೊತ್ತ ಇರುವ ಬಗ್ಗೆ ಬಾಂಡ್‌ ಸಹ ನೀಡಲಾಗುತ್ತಿಲ್ಲ. ಕುಟುಂಬ ಪಿಂಚಣಿ ವ್ಯವಸ್ಥೆಯಿಲ್ಲ ಎಂದು ದೂರಿದರು.

ಐದು ವರ್ಷ ಆಳ್ವಿಕೆ ಮಾಡುವ ಜನಪ್ರತಿನಿಧಿಗಳಿಗೆ ಪಿಂಚಣಿ ಸೌಲಭ್ಯವಿದೆ. ಆದರೆ, 35 ವರ್ಷ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಸೂಕ್ತ ಪಿಂಚಣಿ ಕೊಡದಿರುವುದು ಖಂಡನೀಯ. ಪಶ್ಚಿಮ ಬಂಗಾಳ ಹಾಗೂ ತ್ರಿಪುರಾ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿಲ್ಲ. ರಾಜ್ಯದಲ್ಲಿರುವ 94 ಸಾವಿರಕ್ಕೂ ಅಧಿಕ ಎನ್‌.ಪಿ.ಎಸ್‌. ನೌಕರರ ಹಿತ ಕಾಪಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶ್ರೀನಿವಾಸ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ರಾಜೇಗೌಡ, ನರಸಯ್ಯ, ಸತೀಶ್, ಎಸ್. ಮಂಜುನಾಥ್, ಡಿ. ಪುಟ್ಟಸ್ವಾಮಿಗೌಡ, ಎಂ.ಎನ್. ದೇವರಾಜ್‌, ಎಸ್. ನರಸಿಂಹಸ್ವಾಮಿ, ಕೆ. ನಾಗೇಶ್, ಇಂದಿರಮ್ಮ, ಶಿವಪ್ರಕಾಶ್, ಕಾಂತರಾಜು, ಗುರುಮೂರ್ತಿ, ಪ್ರದೀಪ್‌, ಬೈರಪ್ಪ, ಮರುಳಸಿದ್ದಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry