ಮರಳು ಸಾಗಣೆ: ಚಾಲಕನ ಬಂಧನ ವಿರೋಧಿಸಿ ಪ್ರತಿಭಟನೆ

7

ಮರಳು ಸಾಗಣೆ: ಚಾಲಕನ ಬಂಧನ ವಿರೋಧಿಸಿ ಪ್ರತಿಭಟನೆ

Published:
Updated:

ಕಾರ್ಗಲ್: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ದಾಖಲಾದ ಮರಳು ಕಳ್ಳ ಸಾಗಣೆ ಪ್ರಕರಣದಲ್ಲಿ ಅಮಾಯಕನಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಶರಾವತಿ ವಾಹನ ಚಾಲಕರ ಸಂಘಟನೆ ಮತ್ತು ವಿವಿಧ ಸಂಘಟನೆ ಪ್ರಮುಖರು ಸಾಗರ ಸಿಪಿಐ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

‘ಬಜಾರ್ ಮುಖ್ಯ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಮಾಲೀಕರು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಊರಿನ ಹೊರಭಾಗದಲ್ಲಿ ಮರಳನ್ನು ಸ್ಥಳಾಂತರಿಸುವಾಗ ಸಾಗರ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಕಾರ್ಗಲ್ ಪೋಲೀಸರು ವಾಹನ ಸಮೇತ ಚಾಲಕ ಎಂ.ಟಿ. ಜಲೀಲ್ ಅವರ ವಿರುದ್ಧ ಮರಳು ಅಕ್ರಮ ಸಾಗಣೆ ಪ್ರಕರಣ ದಾಖಲಿಸಿ, ಬಂಧಿಸಿರುವುದು ವಿಷಾದಕರ ಸಂಗತಿ’ ಎಂದು ಪ್ರತಿಭಟನಾಕಾರರು ತಿಳಿಸಿದರು.

ನಿರಪರಾಧಿಗಳನ್ನು ವಿನಾಕಾರಣ ಜೈಲಿಗೆ ಕಳುಹಿಸಿರುವ ಪೋಲೀಸರ ಕ್ರಮ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಾಗಿದೆ ಎಂದು ವರ್ತಕರಾದ ಶ್ರೀನಿವಾಸ ಎಂ.ಪೈ ಆರೋಪಿಸಿದರು.

ಇಂಥ ಪ್ರಕರಣಗಳು ಮರುಕಳಿಸದಂತೆ ಮತ್ತು ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಇಲಾಖೆಯ ಮೇಲಧಿಕಾರಿಗಳು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದರು.

ಪ್ರಮುಖ ವರ್ತಕರಾದ ಅಣ್ಣಪ್ಪ ಪೂಜಾರಿ, ಚಾಲಕರ ಸಂಘದ ಮುಖಂಡರಾದ ಮಲ್ಲಿಕ್, ಎನ್.ಮಂಜುನಾಥ್, ಟಿ.ಸುರೇಶ್ ಅವರೂ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry