ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಪಿಂಚಣಿ ಯೋಜನೆ ರದ್ದುಪಡಿಸಲು ಆಗ್ರಹ

Last Updated 19 ಜನವರಿ 2018, 6:56 IST
ಅಕ್ಷರ ಗಾತ್ರ

ಶಿವಮೊಗ್ಗ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಸರ್ಕಾರಿ ನೌಕರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ನೂತನ ಪಿಂಚಣಿ ಪದ್ಧತಿ ಅವೈಜ್ಞಾನಿಕವಾಗಿದೆ. ಹಾಗಾಗಿ ಇದನ್ನು ಶೀಘ್ರವೇ ರದ್ದುಗೊಳಿಸಿ ಈ ಹಿಂದಿನಂತೆ ಸರ್ಕಾರವೇ ನೀಡುವ ನಿಶ್ಚಿತ ಪಿಂಚಣಿಯನ್ನು ಜಾರಿಗೆ ತರುವಂತೆ ಆಗ್ರಹಿಸಿದರು. ನೂತನ ಪಿಂಚಣಿ ಯೋಜನೆಯಲ್ಲಿ ಹಲವು ನ್ಯೂನತೆಗಳಿವೆ.

ಈ  ಪದ್ಧತಿಯಿಂದ 2006ರ ನಂತರ ನೇಮಕಗೊಂಡ ಸುಮಾರು 1.80 ಲಕ್ಷ ನೌಕರರು ಸಾಮಾಜಿಕ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಇದು ಅನಿಶ್ಚಿತ ಪಿಂಚಣಿ ಯೋಜನೆಯಾಗಿದ್ದು, ನೂತನ ಪಿಂಚಣಿ ಪದ್ಧತಿಗೆ ಒಳಪಡುವ ಸರ್ಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇನ್ನಿತರ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ ಎಂದು ದೂರಿದರು.

ಅಲ್ಲದೆ ಹೊಸ ಪದ್ದತಿಯಲ್ಲಿ ಜಿಪಿಎಫ್ ಸೌಲಭ್ಯವಿಲ್ಲ. 33 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೂ ಕಡಿಮೆ ಪಿಂಚಣಿ ನಿಗದಿಪಡಿಸಲಾಗಿದೆ. ಪಿಂಚಣಿಗಾಗಿ ವೇತನದಲ್ಲಿ ಶೇ 10ರಷ್ಟು ಕಡಿತ ಮಾಡಲಾಗುತ್ತಿದೆ. ಅದನ್ನು ಶೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತಿದೆ. ಕುಟುಂಬ ಪಿಂಚಣಿ, ಮರಣ ಉಪದಾನ, ನಿವೃತ್ತಿ ಉಪದಾನ ಇಲ್ಲವಾಗಿದೆ. ನಿವೃತ್ತರಿಗೆ ಕಾಲಕಾಲಕ್ಕೆ ತುಟ್ಟಿಭತ್ಯೆ ಹೆಚ್ಚಳ ಆಗುವುದಿಲ್ಲ. ನಿವೃತ್ತಿ ನಂತರ ಸರ್ಕಾರದ ಜತೆಗಿನ ಸಂಬಂಧ ಕಡಿದು ಹೋಗುತ್ತದೆ. ಇದರಿಂದ ನೌಕರರಿಗೆ ಗರಿಷ್ಠ ಭರವಸೆಯೂ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ಈ ಪದ್ಧತಿ ರದ್ದುಗೊಳಿಸಿ ಸರ್ಕಾರಿ ನೌಕರರ ಹಿತರಕ್ಷಣೆಗೆ ಮುಂದಾಗಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಕಾರ್ಯದರ್ಶಿ ಆರ್.ಮೋಹನ್ ಕುಮಾರ್, ಖಜಾಂಚಿ ಶಾಂತರಾಜ್, ಎ.ಎಸ್‌.ಮಣಿ, ಬಸವಣ್ಣಗೌಡ, ಸಿದ್ದಬಸಪ್ಪ, ರಾಜು, ಧರ್ಮಪ್ಪ, ರವಿ ಇದ್ದರು. ಭದ್ರಾವತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್.ಪಿ.ಎಸ್ ಪಿಂಚಣಿ ಯೋಜನೆ ಕೈಬಿಟ್ಟು ಹಿಂದಿನ ಪಿಂಚಣಿ ಯೋಜನೆ ಅನುಷ್ಠಾನ ಮಾಡುವತ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ತಾಲ್ಲೂಕು ಕಚೇರಿ ಮುಂಭಾಗ ಮಧ್ಯಾಹ್ನ ಊಟದ ವೇಳೆಯಲ್ಲಿ ಗುಂಪುಗೂಡಿದ ನೌಕರರು ಸೇವಾ ಭದ್ರತೆ ಇಲ್ಲದ ಎನ್.ಪಿ.ಎಸ್ ಕೈಬಿಡುವಂತೆ ಆಗ್ರಹಿಸಿ ಘೋಷಣೆ ಕೂಗಿ, ಮನವಿ ಸಲ್ಲಿಸಿದರು. ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಈ ಯೋಜನೆ ಜಾರಿಯಲ್ಲಿದ್ದು ರಾಜ್ಯ ಸರ್ಕಾರ ಪ್ರಸ್ತಾವಿತ ವೇತನ ಆಯೋಗದ ಮುಂದೆ ಎನ್.ಪಿ.ಎಸ್ ರದ್ದತಿಯ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವ ಮನವಿಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಕೆ ಮಾಡಲಾಯಿತು. ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ, ಶಿಕ್ಷಕರ ಸಂಘದ ಎಂ.ಎಸ್. ಬಸವರಾಜ್, ಬಸವಂತರಾವ್ ದಾಳೆ, ಸಿ. ಜಯಪ್ಪ, ಡಾ. ಗುಡದಪ್ಪಕಸಬಿ, ಮಹೇಂದ್ರ, ಟಿ.ಸಿ. ಭಾರತಿ, ರಂಗನಾಥ, ಉಮಾ ಇದ್ದರು.

ತೀರ್ಥಹಳ್ಳಿ
ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಂಘ ಎಚ್ಚರಿಸಿದೆ.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ್‌ಶೆಟ್ಟಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಪ್ಪ, ಎನ್‌ಪಿಎಸ್‌ ನೌಕರರ ಸಂಘದ ತಾಲ್ಲೂಕು ಸಂಚಾಲಕ ಈಶ್ವರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಸುಷ್ಮಾ, ರಾಜ್ಯ ಪರಿಷತ್‌ ಸದಸ್ಯ ಮಂಜುನಾಥ್‌ ಭಾಗವಹಿಸಿದ್ದರು.ಶಿರಸ್ತೇದಾರ್ ಎ.ವಿ.ಅರಸು ಮನವಿ ಸ್ವೀಕರಿಸಿದರು.

ಶಿಕಾರಿಪುರ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ನೌಕರರಿಗೆ ಜಾರಿಗೊಳಿಸಬೇಕು ಹಾಗೂ ಕರ್ನಾಟಕ ರಾಜ್ಯ 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಎನ್‌ಪಿಎಸ್‌ ನೌಕರರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎ. ಚಿನ್ನಪ್ಪ, ಪದಾಧಿಕಾರಿಗಳಾದ ಬಿ. ಪಾಪಯ್ಯ, ಬಿ.ಆರ್‌. ಹನುಮಂತಪ್ಪ, ಮಧುಕೇಶವ, ಎಂ.ಎಚ್‌. ಮಲ್ಲಿಕಾರ್ಜುನ್‌, ದಿನೇಶ್‌, ಎನ್‌ಪಿಎಸ್‌ ನೌಕಕರ ಸಂಘದ ಅಧ್ಯಕ್ಷ ಶ್ರೀನಿವಾಸ್‌, ವಿವಿಧ ಇಲಾಖೆ ನೌಕರರು ಉಪಸ್ಥಿತರಿದ್ದರು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ನೌಕರರು ಮನವಿ ಸಲ್ಲಿಸಿದರು.

ಸೊರಬ

ನೂತನ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಆಗ್ರಹಿಸಿ ತಾಲ್ಲೂಕು ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಡಿ.ಹೊಳೆಲಿಂಗಪ್ಪ ಮಾತನಾಡಿ, ‘ನೂತನ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದ್ದು, ಭದ್ರತೆ ಇಲ್ಲದಂತಾಗಿದೆ. ಮಾರಕವಾಗಿರುವ ನೂತನ ಈ ಯೋಜನೆ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿ ತರಬೇಕು’ ಎಂದು ಒತ್ತಾಯಿಸಿದರು.

ಶಾರದಮ್ಮ, ರುಕ್ಮಿಣಿ, ಇಂದೂಧರ್, ಆನಂದಪ್ಪ, ಮಮತಾ, ಅನಿತಾ, ರವಿಪ್ರಕಾಶ್, ಚನ್ನಮ್ಮ, ವಿಜಯಲಕ್ಷ್ಮೀ, ಕವಿತಾ, ದೊರೆ, ಚಂದ್ರನಾಯಕ್, ವಿಜಯಲಕ್ಷ್ಮೀ ಗಣಾಧರ್ ಇದ್ದರು.

ಸಾಗರ

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ವತಿಯಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ.ಪರಮೇಶ್ವರ್‌, ಪ್ರಧಾನ ಕಾರ್ಯದರ್ಶಿ ವೈ.ಮೋಹನ್, ಖಜಾಂಚಿ ವಿಜಯಕುಮಾರ್, ಗೌರವಾಧ್ಯಕ್ಷ ಡಿ.ಗಣಪತಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ, ರಾಜ್ಯ ನಿರ್ದೇಶಕ ಬಸವರಾಜ್‌, ಎಚ್‌.ಎಂ.ಪಂಡಿತಾರಾಧ್ಯ, ನಾಗಭೂಷಣ್‌, ಲಕ್ಷ್ಮೀ ಭಾಗವತ್‌, ಅಣ್ಣಪ್ಪ, ಬದರೀನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT