ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶು, ತಾಯಿ ಮರಣ ಪ್ರಮಾಣ ಇಳಿಕೆ

Last Updated 19 ಜನವರಿ 2018, 7:03 IST
ಅಕ್ಷರ ಗಾತ್ರ

ಉಡುಪಿ: ರೋಗಗಳು ಹರಡದಂತೆ ತಡೆಯುವುದು ಮತ್ತು ಆರೋಗ್ಯ ಕಾಯ್ದುಕೊಳ್ಳುವುದು ಹೊಸ ಆರೋಗ್ಯ ನೀತಿಯ (2017) ಪ್ರಮುಖ ಧ್ಯೇಯವಾಗಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡ ತಿಳಿಸಿದರು.ಜಿಲ್ಲಾಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಲು ತಾಯಿ ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಗತ್ಯವಿರುವ ಲಸಿಕೆ ಹಾಗೂ ಚುಚ್ಚು ಮದ್ದುಗಳನ್ನು ನಿರಂತವಾಗಿ ನೀಡುತ್ತಿರುವುದರಿಂದ ಶಿಶು– ತಾಯಿ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮಾತೃತ್ವ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸಲು ಸುಮಾರು 4,700 ಪ್ರಸೂತಿ ತಜ್ಞರು ಹೆಸರನ್ನು ನೋಂದಾಸಿ ಕೊಂಡಿದ್ದಾರೆ. ಪ್ರತಿ ತಿಂಗಳ 9ನೇ ತಾರೀಖಿನಿಂದ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಈಗಾಗಲೇ 1.5 ಕೋಟಿ ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗಿದೆ 5.5 ಲಕ್ಷದಷ್ಟು ಅಪಾಯಕಾರಿ ಪ್ರಸವ ಸಮಸ್ಯೆ (ಹೈ ರಿಸ್ಕ್ ಪ್ರಗ್ನೆನ್ಸಿ) ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸಲು ಅಗತ್ಯವಿರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸಾರ್ವಜನಿಕ– ಖಾಸಗಿ ಸಹಭಾಗಿತ್ವ ಆಸ್ಪತ್ರೆ ಯೋಜನೆಗೆ ಸಾಕಷ್ಟು ವಿರೋಧವಿದೆ. ಯಾವುದೇ ಹೊಸ ಸುಧಾರಣೆಗಳು ಬಂದಾಗ ಪರ-ವಿರೋಧಗಳು ಕಂಡು ಬರುವುದು ಸಾಮಾನ್ಯವಾಗಿದೆ. ಆದರೆ ಅಂತಹ ಸವಾಲನ್ನು ಸ್ವೀಕರಿಸಿ ಯಶಸ್ಸು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಕೂಡ ಆಳವಡಿಸಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆ ನೀಡುವ ಈ ಯೋಜನೆಗೆ ಆನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಜಿ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ನೀಡುವ ಸರ್ಕಾರಿ ವ್ಯವಸ್ಥೆ ಬದಲಿಗೆ ಆಸ್ಪತ್ರೆ ವ್ಯಾಪರೀಕರಣ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬಾರದು ಎನ್ನುವ ಒತ್ತಡ ಸಹ ಬಂದಿದೆ. ಈ ಬಗ್ಗೆ ಬಿ.ಆರ್.ಶೆಟ್ಟಿ ಅವರಿಗೆ ಕೇಳಿದಾಗ ಹಿಂದಿನಗಿಂತ ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಶ್ರೀಮಂತ ರೋಗಿಗಳಿಂದ ಹಣ ಪಡೆದು, ಬಡವರಿಗೆ ಉಚಿತವಾಗಿ ಸೇವೆ ನೀಡುವಂತಾಗಬೇಕು ಎಂದು ತಿಳಿಸಿದರು.

ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ನಗರ ಸಭೆ ಅದ್ಯಕ್ಷೆ ಮೀನಾಕ್ಷಿ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ, ಬಿ.ಆರ್.ಎಸ್‌ ಸ್ವಾಸ್ಥ್ಯ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಬಿ.ಆರ್ ಶೆಟ್ಟಿ, ಉಪಾಧ್ಯಕ್ಷೆ ಡಾ. ಸಿ.ಆರ್ ಶೆಟ್ಟಿ ಉಪಸ್ಥಿತರಿದ್ದರು.

ಸದ್ಯದಲ್ಲಿ ಒಪ್ಪಂದಕ್ಕೆ ಸಹಿ

‘400 ಹಾಸಿಗೆ ಆಸ್ಪತ್ರೆಯಿಂದ ಬಂದ ಲಾಭಾಂಶದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಡೆಯಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಿಗಲಿದೆ. ಹಿಂದೆ ಲಭ್ಯವಿದ್ದ ಎಲ್ಲಾ ಸೇವೆಗಳನ್ನೂ ಉಚಿತವಾಗಿ 200 ಹಾಸಿಗೆಯ ಆಸ್ಪತ್ರೆಯಲ್ಲಿ ಸಿಗುವಂತೆ ಬಿ.ಆರ್.ಶೆಟ್ಟಿ ಮತ್ತು ಸರ್ಕಾರ ನಡುವೆ ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು  ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT