ತೊಗರಿ ಮಾರಲು 78607 ರೈತರ ನೋಂದಣಿ

7

ತೊಗರಿ ಮಾರಲು 78607 ರೈತರ ನೋಂದಣಿ

Published:
Updated:

ವಿಜಯಪುರ: ಹಲವು ತಾಂತ್ರಿಕ ಸಮಸ್ಯೆ, ಸರಣಿ ರಜೆಯ ನಡುವೆಯೂ ತೊಗರಿ ಮಾರಾಟಕ್ಕಾಗಿ ಜಿಲ್ಲೆಯ 78,607 ರೈತರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಧಾರಣೆ ಪಾತಾಳಮುಖಿಯಾಗಿ ಕುಸಿಯುವುದನ್ನು ತಡೆಗಟ್ಟಲು, ರೈತರ ನೆರವಿಗೆ ಧಾವಿಸಲು ಕೇಂದ್ರ–ರಾಜ್ಯ ಸರ್ಕಾರ, ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳದ (ನಾಫೆಡ್‌) ಮೂಲಕ ಖರೀದಿಗೆ ಮುಂದಾಗಿವೆ.

ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಲು ಜ 15 ಕೊನೆ ದಿನವಾಗಿತ್ತು. ಅಂತಿಮ ಮೂರು ದಿನ ಸರಣಿ ರಜೆಯಿದ್ದುದರಿಂದ ಇನ್ನೂ ಬಹುತೇಕ ರೈತರಿಗೆ ತಮ್ಮ ನೋಂದಣಿ ಸಾಧ್ಯವಾಗಿಲ್ಲ. ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೋಂದಣಿ ಸ್ಥಗಿತಗೊಳಿಸಲಾಗಿದೆ. ತಡವಾಗಿ ರಾಶಿ ಮಾಡಿದ ರೈತರು, ತಮ್ಮೂರಿನಲ್ಲೇ ಖರೀದಿ ಕೇಂದ್ರ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿ ಹೆಸರು ನೋಂದಣಿ ಮಾಡಿಸದವರಿಗೆ ಅನುಕೂಲ ಕಲ್ಪಿಸಿಕೊಡಲು, ನೋಂದಣಿ ಅವಧಿಯನ್ನು ವಿಸ್ತರಿಸಬೇಕು ಎಂಬ ಮನವಿ ರೈತ ಸಮೂಹದ್ದು.

‘ಸರ್ಕಾರದ ಸೂಚನೆ, ನಾಫೆಡ್‌ ಮಾರ್ಗದರ್ಶಿಯಂತೆ ನಿಗದಿಪಡಿಸಿದ ಖರೀದಿಗಿಂತಲೂ, ಹೆಚ್ಚಿನ ಪ್ರಮಾಣದ ರೈತರು ಈಗಾಗಲೇ ತಮ್ಮ ತೊಗರಿ ಉತ್ಪನ್ನ ಖರೀದಿಸುವಂತೆ ಪಾಳಿ ಹಚ್ಚಿ ಹೆಸರು ನೋಂದಾಯಿಸಿದ್ದಾರೆ. ಈ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ’ ಎಂದು ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಪ್ಪಂದ; ಪ್ರಕ್ರಿಯೆಗೆ ಚಾಲನೆ...

‘ನೋಂದಣಿ ಪ್ರಕ್ರಿಯೆ ಮುಗಿದಿದೆ. ಬೇಡಿಕೆ ಹೆಚ್ಚಿದಂತೆ ಮೊದಲು ಆರಂಭಿಸಿದ್ದ 51 ಖರೀದಿ ಕೇಂದ್ರಗಳ ಜತೆಗೆ ಮತ್ತೆ 41 ಖರೀದಿ ಕೇಂದ್ರಗಳನ್ನು ಜಿಲ್ಲೆಯ ಐದು ತಾಲ್ಲೂಕಿನ ವ್ಯಾಪ್ತಿಯಲ್ಲಿ ತೆರೆಯಲಾಗಿದೆ.

92 ಖರೀದಿ ಕೇಂದ್ರಗಳ ಜತೆಗೆ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾಮಂಡಳ (ನಾಫೆಡ್‌) ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳ ಕಾರ್ಯದರ್ಶಿಗೆ ಖರೀದಿಗೆ ಸೂಚಿಸಿದ್ದು, ತೊಗರಿ ತುಂಬಿಕೊಳ್ಳಲು ಅಗತ್ಯವಿರುವ ಬ್ಯಾಗ್‌ಗಳನ್ನು ಪೂರೈಸಲಾಗುತ್ತಿದೆ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಡಿ.ಚಬನೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ನೋಂದಣಿಗಾಗಿ ಖರೀದಿ ಕೇಂದ್ರಗಳಲ್ಲಿ ಉಂಟಾಗುತ್ತಿದ್ದ ಜನದಟ್ಟಣೆ ನಿಯಂತ್ರಿಸಲು, ವಿವಿಧೆಡೆಯಿಂದ ಖರೀದಿ ಕೇಂದ್ರಕ್ಕಾಗಿ ಬಂದ ಬೇಡಿಕೆ ಪರಿಗಣಿಸಿ ಜಿಲ್ಲಾಡಳಿತ ಮತ್ತೆ ಹೆಚ್ಚಿನ ಖರೀದಿ ಕೇಂದ್ರ ಆರಂಭಿಸಿತು. ಎಲ್ಲೆಡೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಖರೀದಿ ಆರಂಭಗೊಳ್ಳಲಿದೆ’ ಎಂದು ಅವರು ಹೇಳಿದರು.

‘ಸಿಂದಗಿ, ಬಸವನಬಾಗೇವಾಡಿ ತಾಲ್ಲೂಕಿನ ವಿವಿಧೆಡೆಯಿಂದ ನೋಂದಣಿ ಅವಧಿ ವಿಸ್ತರಿಸಿ ಎಂಬ ಬೇಡಿಕೆಯ ಹಕ್ಕೊತ್ತಾಯ ಕೇಳಿ ಬರುತ್ತಿದೆ. ಕೆಲವರು ಮನವಿಯನ್ನು ನೀಡಿದ್ದಾರೆ. ಜಿಲ್ಲಾಡಳಿತ ಸರ್ಕಾರದೊಂದಿಗೆ ಚರ್ಚಿಸಿ ತನ್ನ ನಿರ್ಧಾರ ಪ್ರಕಟಿಸಲಿದೆ. ಅದರಂತೆ ನಾವೂ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯ ಖರೀದಿ ಕೇಂದ್ರಗಳ ವಿವರ

ತಾಲ್ಲೂಕು ಸಂಖ್ಯೆ

ವಿಜಯಪುರ 18

ಬ.ಬಾಗೇವಾಡಿ 17

ಮುದ್ದೇಬಿಹಾಳ 16

ಸಿಂದಗಿ 21

ಇಂಡ 20

ಒಟ್ಟು 92

* * 

ನಮ್ಮೂರಲ್ಲೇ ಖರೀದಿ ಕೇಂದ್ರ ಮಾಡ್ತಾರೆ ಅಂತಾ ಕಾದು ಕೂತೆವು. ಇದೀಗ ನೋಂದಣಿ ಅವಧಿ ಮುಗಿದಿದೆಯಂತೆ. 10 ಚೀಲ ಉತ್ಪನ್ನವಿದೆ. ಏನ್‌ ಮಾಡ್ಬೇಕಂತಾ ತಿಳಿತಿಲ್ಲ

ಸಿದ್ದಣ್ಣ ನಿಂಗಪ್ಪ ಚೌಧರಿ, ಕನ್ನೊಳ್ಳಿಯ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry