ಗಂಗಾ ಕಲ್ಯಾಣ ಗುತ್ತಿಗೆದಾರರಿಗೆ ಸಚಿವರ ಎಚ್ಚರಿಕೆ

7

ಗಂಗಾ ಕಲ್ಯಾಣ ಗುತ್ತಿಗೆದಾರರಿಗೆ ಸಚಿವರ ಎಚ್ಚರಿಕೆ

Published:
Updated:
ಗಂಗಾ ಕಲ್ಯಾಣ ಗುತ್ತಿಗೆದಾರರಿಗೆ ಸಚಿವರ ಎಚ್ಚರಿಕೆ

ಕಾರವಾರ: ‘ಗಂಗಾ ಕಲ್ಯಾಣ ಯೋಜನೆಯಡಿ ಒಬ್ಬರೇ ಗುತ್ತಿಗೆದಾರರಿಗೆ ನಾಲ್ಕು ಇಲಾಖೆಗಳು 371 ಕೊಳವೆಬಾವಿಗಳನ್ನು ಕೊರೆಯಲು ಗುತ್ತಿಗೆ ಕೊಡಲು ಹೇಗೆ ಸಾಧ್ಯ?. ಫೆ.28ರ ಮೊದಲು ನಿಗದಿತ ಗುರಿಯನ್ನು ಹೇಗೆ ತಲುಪುತ್ತೀರೋ ನನಗೆ ಗೊತ್ತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ.

ಆದರೆ, ಅವೆಲ್ಲವನ್ನೂ ಬೆಂಗಳೂರಿನ ಕಾವೇರಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಕಾಮಗಾರಿ ಬಾಕಿಯಿದೆ’ ಎಂದು ಅಧಿಕಾರಿಗಳು ತಮ್ಮ ಇಲಾಖೆಗಳ ವರದಿ ಮಂಡಿಸುವಾಗ ಹೇಳಿದರು. ಇದರಿಂದ ಅಸಮಾಧಾನಗೊಂಡ ಸಚಿವರು, ಸಭೆಯ ನಡುವೆಯೇ ಗುತ್ತಿಗೆದಾರರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ‘ಕೊಳವೆ ಬಾವಿ ಕೊರೆಯುವ ಒಂದೇ ಯಂತ್ರವನ್ನು ಇಟ್ಟುಕೊಂಡು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದೇರೇನು? ಅದೇನು ಮಾಡುತ್ತೀರೋ ಗೊತ್ತಿಲ್ಲ. ಇನ್ನೊಂದು ವಾರದಲ್ಲಿ ಇನ್ನೂ ನಾಲ್ಕು ಯಂತ್ರಗಳನ್ನು ಜಿಲ್ಲೆಯ ಬೇರೆ ಬೇರೆ ಭಾಗಗಳಿಗೆ ಕಳುಹಿಸಿ. ಇಲ್ಲದಿದ್ದರೆ ನಿಮ್ಮ ಲೈಸೆನ್ಸ್‌ ರದ್ದು ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ‘ಕೃಷಿಯಲ್ಲಿ ಯಾಂತ್ರೀಕರಣ ಮಾಡಲು ₹ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೇ 99ರಷ್ಟು ಬಳಕೆಯಾಗಿದೆ. ಕೃಷಿ ಭಾಗ್ಯದಡಿ ಡಿಸೆಂಬರ್ ಕೊನೆಯವರೆಗೆ ಮುಂಡಗೋಡ, ಹಳಿಯಾಳ, ಬನವಾಸಿ, ಶಿರಸಿ ಭಾಗದಲ್ಲಿ 202 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಆಗ ಸಚಿವ ದೇಶಪಾಂಡೆ, ‘ತೋಟಗಾರಿಕೆ ಮತ್ತು ಕೃಷಿ ಎರಡರಲ್ಲೂ ಒಬ್ಬರೇ ಫಲಾನುಭವಿಗಳು ಸಹಾಯಧನ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಹಾಗಾಗದಂತೆ ಎಚ್ಚರಿಕೆ ವಹಿಸಿ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಅನುಮಾನವಿದೆ. ಫಲಾನುಭವಿಗಳ ಆಯ್ಕೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕವೇ ಆಗಬೇಕು’ ಎಂದು ತಾಕೀತು ಮಾಡಿದರು.

ಲೋಕೋಪಯೋಗಿ ಇಲಾಖೆ ಕಾರ್ಯ ವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ‘ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿವೆ. ಜೋಯಿಡಾದಲ್ಲಿ ಕಳೆದ ವರ್ಷ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ರಸ್ತೆ ಈಗಾಗಲೇ ಸಂಪೂರ್ಣ ಹದಗೆಟ್ಟಿದೆ. ಯಾವುದೇ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ. ಅದರ ಬಗ್ಗೆ ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ ಜಾರಿಗೆ ತರುತ್ತೀರಿ’ ಎಂದು ಪ್ರಶ್ನಿಸಿದರು.

‘ಕುಮಟಾ ಬಳಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರು ಮೂರು ವರ್ಷಗಳಾದರೂ ಕಾಮಗಾರಿ ಆರಂಭಿಸಿಲ್ಲ. ಮರು ಗುತ್ತಿಯಲ್ಲೂ ಅದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಮಗೆ ನಿಮ್ಮ ಮೇಲೆಯೇ ಅನುಮಾನ ಬರುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಗುತ್ತಿಗೆ ಪಡೆದು ಕೆಲಸ ಮಾಡದವರ ಪಟ್ಟಿ ಮಾಡಿ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ಮಾತನಾಡಿ, ‘ಮೆಟ್ರಿಕ್ ನಂತರದ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಜಾತಿಯ 3,300 ಮಕ್ಕಳಿಗೆ ಈ ಬಾರಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಕಳೆದ ಬಾರಿ 2,820 ಮಕ್ಕಳಿಗೆ ನೀಡಲಾಗಿತ್ತು. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಲ್ಲಿ ಈ ಬಾರಿ 700 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಕಳೆದ ಬಾರಿ 430 ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ₹ 6 ಲಕ್ಷಕ್ಕೆ ಏರಿಕೆ ಮಾಡಿರುವುದು ಇದಕ್ಕೆ ಕಾರಣ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್, ‘ಜಿಲ್ಲೆಯಲ್ಲಿ ತಜ್ಞ ವೈದ್ಯರ 51 ಹುದ್ದೆಗಳು ಖಾಲಿಯಿವೆ. ಗ್ರಾಮೀಣ ಭಾಗಗಳಲ್ಲಿ ಕರ್ತವ್ಯಕ್ಕೆ ಯಾರೂ ಮುಂದೆ ಬರುತ್ತಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದರು.

ಈ ಬಾರಿ ಜಿಲ್ಲೆಯಲ್ಲಿ 108 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಒಬ್ಬರೂ ಸಾವಿಗೀಡಾಗಿಲ್ಲ. ಇಲಿ ಜ್ವರದ 21 ಪ‍್ರಕರಣಗಳು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. 49 ಎಚ್1ಎನ್1 ಪ್ರಕರಣಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಭಟ್ಕಳ, ಶಿರಸಿ ಭಾಗದಲ್ಲಿ ಈ ಪ್ರಕರಣಗಳು ಅಧಿಕವಾಗಿವೆ. ಮಲೇರಿಯಾ 41 ಹಾಗೂ ಮಂಗನಕಾಯಿಲೆಯ (ಕೆಎಫ್‌ಡಿ) ಆರು ಪ್ರಕರಣಗಳಲ್ಲಿ ಒಬ್ಬರೂ ಮೃತಪಟ್ಟಿಲ್ಲ ಎಂದು ಅಂಕಿ ಅಂಶ ನೀಡಿದರು.

ಶಾಸಕರಾದ ಸತೀಶ್ ಸೈಲ್, ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಗಜಾನನ ಮೊಗೇರ, ಸಂತೋಷ ಶಂಕರ ರೇಣುಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನೋಟಿಸ್ ಜಾರಿಗೆ ಸೂಚನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಗಂಗಾನಾಯ್ಕ ಕಚೇರಿ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದಾರೆ ಎಂದು ಅವರ ಪರವಾಗಿ ಬಂದ ಅಧಿಕಾರಿ ತಿಳಿಸಿದರು.

ಇದಕ್ಕೆ ಆಕ್ರೋಶಗೊಂಡ ಸಚಿವ ದೇಶಪಾಂಡೆ, ‘ಅನುಮತಿ ಪಡೆಯದೇ ಅವರು ಗೈರು ಹಾಜರಾಗಿದ್ದಾರೆ. ನಮಗೇನು ಗೌರವವೇ ಇಲ್ಲವೇ?. ಅವರಿಗೆ ಶೋಕಾಸ್ ನೋಟಿಸ್ ನೀಡಿ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರಿಗೆ ಸೂಚಿಸಿದರು.

ಚರಂಡಿಗೆ ಶೌಚಾಲಯದ ಕೊಳಚೆ!

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮೀಪದಲ್ಲಿರುವ ದೇವರಾಜ ಅರಸು ವಿದ್ಯಾರ್ಥಿ ನಿಲಯದ ಶೌಚಾಲಯದಿಂದ ಪೈಪ್‌ ಅನ್ನು ನೇರವಾಗಿ ತೆರೆದ ಚರಂಡಿಗೆ ಬಿಡಲಾಗಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಬಡಿಗೇರ್, ‘ವಿದ್ಯಾರ್ಥಿನಿಲಯದ ಸಮೀಪದಲ್ಲಿ ಭವನ ನಿರ್ಮಾಣ ಮಾಡಲು ಮೀಸಲಿಟ್ಟಿರುವ ಜಾಗದಲ್ಲಿ ಶೌಚಗುಂಡಿ ನಿರ್ಮಿಸಲಾಗುವುದು. ಭವನ ನಿರ್ಮಾಣಕ್ಕೆ ಬೇರೆಡೆ ಜಾಗ ಹುಡುಕಲಾಗುವುದು’ ಎಂದು ಹೇಳಿದರು.

‘ವೈದ್ಯರ ಅಮಾನತು’

‘‌ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟ ಬೀಬಿ ಆಯೀಷಾ ಪ್ರಕರಣ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಅವರನ್ನು ಸಚಿವರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್‌ ಕುಮಾರ್, ‘ಈ ಪ್ರಕರಣದಲ್ಲಿ ವೈದ್ಯ ಡಾ.ಸೋಮಶೇಖರ್ ನಿರ್ಲಕ್ಷ್ಯ ಸಾಬಿತಾಗಿದ್ದು, ಅವರನ್ನು ಅಮಾನತು ಮಾಡಲಾಗುವುದು. ಮುಂದೆ ಇಂತಹ ಪ್ರಕರಣಗಳಾದಾಗ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಇದಕ್ಕೆ ಸಮಾಧಾನಗೊಳ್ಳದ ದೇಶಪಾಂಡೆ, ಇದು ಹಾರಿಕೆಯ ಉತ್ತರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry