‘ಶೂನ್ಯ ಬಡ್ಡಿದರ ಸಾಲ ಸೌಲಭ್ಯದಿಂದ ಸಹಕಾರಿ’

7

‘ಶೂನ್ಯ ಬಡ್ಡಿದರ ಸಾಲ ಸೌಲಭ್ಯದಿಂದ ಸಹಕಾರಿ’

Published:
Updated:

ಸೋಮವಾರಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ಮೂಲಕ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಎಲ್ಲ ಕೃಷಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು. ಸಮೀಪದ ಐಗೂರು ಗ್ರಾಮದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರ ಸಂಘಗಳ ಮೂಲಕ ಸರ್ಕಾರ ನೀಡುತ್ತಿರುವ ಶೂನ್ಯ ಬಡ್ಡಿದರದ ಸಾಲದಿಂದ ಹೆಚ್ಚಿನ ಕೃಷಿಕರಿಗೆ ಸಹಕಾರಿಯಾಗಿದೆ. ಅಲ್ಲದೆ, ಸಂಘಗಳಿಗೂ ವ್ಯವಹಾರಕ್ಕೆ ಅನುಕೂಲವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ರೈತರಿಗೆ ಹೆಚ್ಚಿನ ಲಾಭವಾಗುತ್ತಿದ್ದು, ಸಂಘದ ಬೆಳವಣಿಗೆಗೆ ಎಲ್ಲ ಸದಸ್ಯರೂ ಹೆಚ್ಚಿನ ವ್ಯವಹಾರ ಮಾಡುವ ಮೂಲಕ ಆರ್ಥಿಕ ಆಭಿವೃದ್ಧಿಗೆ ಸಹಕರಿಸಬೇಕು’ ಎಂದು ಹೇಳಿದರು.

‘ಸಹಕಾರ ಸಂಘಗಳು ಸ್ಥಳೀಯರದ್ದೇ ಆಗಿದ್ದು, ಅದರಲ್ಲಿ ಸದಸ್ಯತ್ವ ಪಡೆದವರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಖರೀದಿ ಮಾಡಿದಲ್ಲಿ ಸಂಘದ ವ್ಯಾಪಾರ ವಹಿವಾಟು ಹೆಚ್ಚಾಗುವುದರೊಂದಿಗೆ ತಮ್ಮದೇ ಸಂಘ ಹೆಚ್ಚಿನ ಲಾಭಗಳಿಗಸಲು ಸಾಧ್ಯವಾಗುತ್ತಿದೆ. ಇದಕ್ಕೆ ಎಲ್ಲ ಸದಸ್ಯರು ಸಹಕರಿಸಬೇಕು. ಅಲ್ಲದೆ, ಸಂಘದ ಆಢಳಿತ ಮಂಡಳಿಯೂ ಸಹ ತನ್ನ ಸದಸ್ಯರ ಬೇಕು ಬೇಡಿಕೆಗಳನ್ನು ಪೂರೈಸಲು ಮುಂದಾಗಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಬೋಪಯ್ಯ ಮಾತನಾಡಿ, ‘ಸದಸ್ಯರು ತಾವು ಪಡೆದ ಸಾಲವನ್ನು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ನೂರರಷ್ಟು ಸಾಧನೆ ಮಾಡಿದೆ. ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಲು ಸದಸ್ಯರು ಹೆಚ್ಚಿನ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘದ ಮೂಲಕ ಇನ್ನೂ ಹೆಚ್ಚಿನ ಸವಲತ್ತು ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ನಟರಾಜ್ ಮಾತನಾಡಿ, ‘ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೂರಾರು ಕೋಟಿ ರೂಪಾಯಿ ಸಾಲ ನೀಡುತ್ತಿದೆ. ಸ್ಥಳೀಯ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ ₹ 10.5ಕೋಟಿ ಸಾಲವನ್ನು ನೀಡಿದ್ದು, ನೂರರಷ್ಟು ಸಾಲ ವಸೂಲಾತಿಯಾಗಿದೆ. ರೈತರಿಗೆ ಗೋದಾಮು ನಿರ್ಮಾಣ ಮಾಡಲು, ಕೃಷಿ ಉತ್ಪನ್ನ ಒಣಗಿಸಲು ಕಣ, ಬಾವಿ, ಯಂತ್ರೋಪಕರಣಗಳಿಗೆ ಸಾಲ ನೀಡುತ್ತಿದೆ. ಅಲ್ಲದೆ ಸ್ವಸಹಾಯ ಸಂಘಗಳು ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಲ್ಲಿ, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರ ಲಾಭವನನ್ನು ಸ್ವಸಹಾಯ ಸಂಘಗಳು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ.ಬಿ. ಕರುಂಬಯ್ಯ, ಸದಸ್ಯರಾದ ಎಚ್.ಜೆ. ಬಸಪ್ಪ, ಡಿ.ಸಿ. ಸಬಿತ, ಎಸ್.ಎಂ. ಲಲಿತಾ, ಎಂ.ಎಸ್. ಮುತ್ತಪ್ಪ, ಟಿ.ಕೆ. ರಮೇಶ್, ಕೆ.ಎಲ್. ಹೊನ್ನಪ್ಪ, ಡಿ.ಎಚ್. ವಿಶ್ವನಾಥರಾಜೇ ಅರಸ್, ಎಂ.ಜೆ. ಜಯಪ್ರಕಾಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry