ನಗರದಲ್ಲಿ ಬಿಎಸ್‌ಪಿ ಜಾಗೃತಿ ರ‍್ಯಾಲಿ

7

ನಗರದಲ್ಲಿ ಬಿಎಸ್‌ಪಿ ಜಾಗೃತಿ ರ‍್ಯಾಲಿ

Published:
Updated:
ನಗರದಲ್ಲಿ ಬಿಎಸ್‌ಪಿ ಜಾಗೃತಿ ರ‍್ಯಾಲಿ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯಲ್ಲಿ ಗುರುವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈಸೂರು ವಿಭಾಗದ ವತಿಯಿಂದ ಜಾಗೃತಿ ರ‍್ಯಾಲಿ ನಡೆಯಿತು. ಇದೇ 26ರಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ‘ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ’ ಎಂಬ ಘೋಷ ವಾಕ್ಯದಡಿ ರ‍್ಯಾಲಿ ನಡೆಯಿತು.

ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ದಮನಕಾರಿ ಬೆಳವಣಿಗೆಗಳು ರಾಷ್ಟ್ರದಲ್ಲಿ ನಡೆಯುತ್ತಿವೆ. ಪ್ರಜಾಪ್ರಭುತ್ವ ಉಳಿಸುವ ಕೆಲಸಗಳು ಆಗಬೇಕು. ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಹೇಳಿದರು.

‘50 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ಗೆ ಪಕ್ಷವು ಯಾವುದೇ ಮುನ್ನೋಟವನ್ನು ಹಾಕಿಕೊಳ್ಳದೇ ಕೆಲಸ ಮಾಡಿದೆ. ಉತ್ತಮ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಬಂಡವಾಳಗಳನ್ನು ಒದಗಿಸುವ ಯೋಜನೆಗಳನ್ನು ನೀಡದೇ ಅನ್ನಭಾಗ್ಯ, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯದಂತಹ ಯೋಜನೆ ಹಾಕಿಕೊಂಡು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದೇ ರಾಜ್ಯ ಸರ್ಕಾರದ ಕೊಡುಗೆಯಾಗಿದೆ’ ಎಂದು ದೂರಿದರು.

‘ಕೇಂದ್ರದ ಬಿಜೆಪಿ ಸರ್ಕಾರವೂ ಬಡತನ -ನಿರುದ್ಯೋಗ, ಅಪೌಷ್ಟಿಕತೆಯಂತಹ ಜ್ವಲಂತ ಸಮಸ್ಯೆ ನಿರ್ಲಕ್ಷ್ಯ ಮಾಡಿ ಜಾತಿಜಾತಿಗಳ ನಡುವೆ ವೈಷಮ್ಯ ಬಿತ್ತುವ ಕೆಲಸ ಮಾಡುತ್ತಿದೆ.ಧರ್ಮವೊಂದನ್ನು ಓಲೈಸುವ ಕೆಲಸಕ್ಕೆ ಕೈಹಾಕಿದೆ’ ಎಂದು ದೂರಿದರು.

‘ಕೊಡಗು ಜಿಲ್ಲಾಡಳಿತವೂ ಶ್ರೀಮಂತರ ಕೈಯಲ್ಲಿದೆ. ಇದೇ ಜಿಲ್ಲೆಯಲ್ಲಿ ಜನಿಸಿದ ಪಾಲೆಮಾಡು ನಿವಾಸಿಗಳಿಗೆ ಸ್ಮಶಾನಕ್ಕೆ ಜಾಗ ನೀಡಲು ಹಿಂದೇಟು ಹಾಕುತ್ತಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೂಲ ಸೌಲಭ್ಯವನ್ನೇ ಕಲ್ಪಿಸದ್ದಕ್ಕೆ ಜನರು ಉತ್ತರ ನೀಡಲಿದ್ದಾರೆ’ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಜ.15ರಿಂದ 26ರವರೆಗೆ ರಾಜ್ಯದ ಆರು ವಿಭಾಗಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಡಿಕೇರಿ, ಸಂಪಾಜೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಚಿಕ್ಕಮಗಳೂರು, ಹಾಸನ, ಮಂಡ್ಯ ಜಿಲ್ಲೆಗಳ ಮಾರ್ಗವಾಗಿ ರ್‍ಯಾಲಿ ಸಾಗಿ ಮೈಸೂರು ಸೇರಲಿದೆ. ಬಳಿಕ ಸಮಾವೇಶ ನಡೆಯಲಿದೆ ಎಂದು ಹೇಳಿದರು. ಸೋಮಶೇಖರ್, ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮೊಹಮದ್ ಹಾಜರಿದ್ದರು.

* * 

ಪಾಲೇಮಾಡು ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಿ; ಅವರು ಕಾಡಿನಲ್ಲೇ ಜೀವನ ಮಾಡಲಿದ್ದಾರೆ.

ಎನ್. ಮಹೇಶ್, ರಾಜ್ಯ ಘಟಕದ ಅಧ್ಯಕ್ಷ, ಬಿಎಸ್‌ಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry