ಅಕ್ಷರ ದಾಸೋಹ ಯೋಜನೆಯಲ್ಲಿ ರಾಜ್ಯ ಪ್ರಥಮ

7

ಅಕ್ಷರ ದಾಸೋಹ ಯೋಜನೆಯಲ್ಲಿ ರಾಜ್ಯ ಪ್ರಥಮ

Published:
Updated:

ಕೋಲಾರ: ‘ಅಕ್ಷರ ದಾಸೋಹ ಯೋಜನೆಯಲ್ಲಿ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ’ ಎಂದು ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ವಿ.ತಿಮ್ಮರಾಯಪ್ಪ ಹೇಳಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಗೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸವಿ ಅನ್ನ ಕಲಿ ಅಕ್ಷರ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರವು ಸಿಬ್ಬಂದಿಗೆ ಹೊಸತನ ನೀಡುವುದರೊಂದಿಗೆ ಹೊಸ ವಿಚಾರ ತಿಳಿಯಲು ಸಹಾಯಕವಾಗಿದೆ. ಜತೆಗೆ ನೈಪುಣ್ಯತೆ ಹೆಚ್ಚಿಸುತ್ತದೆ ಎಂದರು.

ಮಹಿಳೆಯರಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಿರುವ ಕಾರಣಕ್ಕೆ ಅಕ್ಷರ ದಾಸೋಹ ಯೋಜನೆಗೆ ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಹಿಂದೆ ಮಹಿಳೆಯರು ಸ್ವಾವಲಂಬಿಯಾಗಿಸುವ ಉದ್ದೇಶವಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಮುಖ್ಯ. ಈವರೆಗೂ ಬಿಸಿಯೂಟ ಯೋಜನೆ ಉತ್ತಮವಾಗಿ ನಡೆದಿದೆ. ಯೋಜನೆಯಿಂದ ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

‘ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ ಯೋಜನೆ ಮುಖ್ಯವಾಗಿವೆ’ ಎಂದು ಕ್ಷೀರಭಾಗ್ಯ ಯೋಜನೆ ನೋಡಲ್ ಅಧಿಕಾರಿ ಮಹದೇವನಾಯಕ್ ತಿಳಿಸಿದರು.

‘ಸರ್ಕಾರಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ಸಿಬ್ಬಂದಿಯು ಶಾಲೆಗಳಲ್ಲಿ ಆಹಾರ ಪದಾರ್ಥಗಳ ಸಂಗ್ರಹಣೆ, ಅಡುಗೆ ಸಿದ್ಧಪಡಿಸಬೇಕಾದರೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಮಕ್ಕಳ ಸುರಕ್ಷತೆ, ಅಗ್ನಿ ಅನಾಹುತ ತಡೆ, ಬೆಂಕಿ ನಂದಿಸುವಿಕೆ, ಅಗ್ನಿನಂದಕ ಸಲಕರಣೆಗಳ ಬಳಕೆಯ ವಿಧಾನವನ್ನು ತಿಳಿಯಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ವಿ.ರಾಮಕೃಷ್ಣಪ್ಪ ಸಲಹೆ ನೀಡಿದರು.

ವೈಯಕ್ತಿಕ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಅಡುಗೆ ಅನಿಲ ಸಿಲಿಂಡರ್ ಬಳಸುವಾಗ ವಹಿಸಬೇಕಾದ ಕ್ರಮಗಳು, ಶುಚಿತ್ವ, ಅಡುಗೆ ಸಹಾಯಕರ ಕರ್ತವ್ಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ, ಜಿಲ್ಲಾ ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry