ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕ ಕೋಕ್‌

Last Updated 19 ಜನವರಿ 2018, 8:51 IST
ಅಕ್ಷರ ಗಾತ್ರ

ಕೋಲಾರ: ‘ಕೈ’ ಪಾಳಯದ ವಿರುದ್ಧ ತೊಡೆ ತಟ್ಟಿ ‘ನಮ್ಮ ಕಾಂಗ್ರೆಸ್‌’ ಪಕ್ಷ ಸ್ಥಾಪಿಸಿರುವ ಶಾಸಕ ವರ್ತೂರು ಪ್ರಕಾಶ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯದ ಬಿಸಿ ಮುಟ್ಟಿಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಆಡಳಿತ ಮಂಡಳಿಗಳಲ್ಲಿನ ಶಾಸಕರ ಬಣದ 21 ಮಂದಿ ನಾಮನಿರ್ದೇಶಿತ ಸದಸ್ಯರಿಗೆ ಸಾಮೂಹಿಕವಾಗಿ ಕೋಕ್‌ ನೀಡಲಾಗಿದೆ.

ವರ್ತೂರು ಪ್ರಕಾಶ್‌ ಈ ಹಿಂದೆ ಕಾಂಗ್ರೆಸ್‌ ಜತೆ ಕೈಜೋಡಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ತಮ್ಮ ಬೆಂಬಲಿಗರು ಹಾಗೂ ಆಪ್ತರಿಗೆ ವಿವಿಧ ಆಡಳಿತ ಮಂಡಳಿಗಳಲ್ಲಿ ಸ್ಥಾನ ಕೊಡಿಸಿದ್ದರು. ಕಾಂಗ್ರೆಸ್‌ ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಮ್ಮ ಆಪ್ತರನ್ನು ನಾಮನಿರ್ದೇಶಿತ ಸದಸ್ಯರಾಗಿ ಮಾಡುವ ಯತ್ನದಲ್ಲಿ ಶಾಸಕರ ಜತೆ ಸ್ಪರ್ಧೆಗಿಳಿದು ಹಿನ್ನಡೆ ಅನುಭವಿಸಿದ್ದರು.

ನಗರಸಭೆಗೆ ಶಾಸಕರ ಬಣದ 5 ಮಂದಿಯನ್ನು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 4, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) 3, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ಗೆ 1, ದರಖಾಸ್ತು ಸಮಿತಿಗೆ 4 ಹಾಗೂ ಭೂನ್ಯಾಯ ಮಂಡಳಿಗೆ 4 ಮಂದಿಯನ್ನು ಸಿದ್ದರಾಮಯ್ಯ ನಾಮನಿರ್ದೇಶನ ಮಾಡಿದ್ದರು.

ಮುಖಂಡರ ಒತ್ತಡ: ಸಾಮಾನ್ಯವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮುಖಂಡರು ಅಥವಾ ಕಾರ್ಯಕರ್ತರನ್ನು ಸ್ಥಳೀಯ ಆಡಳಿತ ಮಂಡಳಿಗಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ವರ್ತೂರು ಪ್ರಕಾಶ್‌ ಬೆಂಬಲಿಗರಿಗೆ ಭಾಗ್ಯ ಒಲಿದಿತ್ತು. ಇದರಿಂದ ಕೈ ಪಾಳಯದ ಸ್ಥಳೀಯ ಮುಖಂಡರು ಸಿದ್ದರಾಮಯ್ಯ ವಿರುದ್ಧ ಮುನಿದಿದ್ದರು.

ಶಾಸಕರ ಬಣದ ವಿರುದ್ಧ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು, ಸಿದ್ದರಾಮಯ್ಯ ಮತ್ತು ವರ್ತೂರು ಪ್ರಕಾಶ್‌ ನಡುವಿನ ಸಂಬಂಧ ಹಳಸಿದ್ದೇ ತಡ ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದ ಮುಖಂಡರು, ಶಾಸಕರ ಬಣದ ಎಲ್ಲಾ ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದುಗೊಳಿಸುವಂತೆ ಒತ್ತಡ ಹೇರಿದ್ದರು.

ಸಿ.ಎಂ ಸೂಚನೆ: ಹಾದಿ ಬೀದಿಯಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ ವರ್ತೂರು ಪ್ರಕಾಶ್‌ ವಿರುದ್ಧ ಮೊದಲೇ ಸಿಡಿಮಿಡಿಗೊಂಡಿದ್ದ ಸಿದ್ದರಾಮಯ್ಯ ಮರು ಮಾತಿಲ್ಲದೆ ಶಾಸಕರ ಪಡೆಯ ಎಲ್ಲಾ ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದು ಮಾಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಇತ್ತೀಚೆಗೆ ಸೂಚನೆ ಕೊಟ್ಟಿದ್ದರು. ಅದರಂತೆ 21 ಮಂದಿಯ ಸದಸ್ಯತ್ವ ಸಾಮೂಹಿಕವಾಗಿ ರದ್ದಾಗಿದೆ. ಈ ಪೈಕಿ ವರ್ತೂರು ಪ್ರಕಾಶ್‌ರ ಬಲಗೈ ಬಂಟ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್‌ ಸಹ ಒಬ್ಬರಾಗಿದ್ದಾರೆ.

ಬೆಂಬಲ ವಾಪಸ್‌?: ನಗರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಬಿ ಫಾರಂನಿಂದ ಗೆದ್ದಿದ್ದ ಹಲವು ಸದಸ್ಯರು ವರ್ತೂರು ಪ್ರಕಾಶ್‌ರ ಜತೆ ಗುರುತಿಸಿಕೊಂಡಿದ್ದಾರೆ. ಕೈ ಪಾಳಯವು ಆ ಸದಸ್ಯರ ಬೆಂಬಲದೊಂದಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ.

ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ಏಕಾಏಕಿ ರದ್ದು ಮಾಡಿರುವ ಕ್ರಮದಿಂದ ವ್ಯಾಘ್ರ ರೂಪ ತಾಳಿರುವ ವರ್ತೂರು ಪ್ರಕಾಶ್‌ ಬಣವು ಕಾಂಗ್ರೆಸ್‌ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತಂತ್ರಗಾರಿಕೆ ರೂಪಿಸುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕೈ ಪಾಳಯಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಲು ತೆರೆಮರೆಯಲ್ಲೇ ಪ್ರಯತ್ನ ನಡೆದಿದೆ.

* * 

ಶಾಸಕ ವರ್ತೂರು ಪ್ರಕಾಶ್‌ ಬಣದ ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದು ಮಾಡಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವು ಅಧಿಕಾರ ಕಳೆದುಕೊಳ್ಳುವ ಭಯವಿಲ್ಲ. ಕಾಂಗ್ರೆಸ್‌ ಬಿ ಫಾರಂನಿಂದ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಸದಸ್ಯರು ಪಕ್ಷಕ್ಕೆ ಕೈ ಕೊಡುವುದಿಲ್ಲ
ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT