‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

7

‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

Published:
Updated:
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

ಕುಷ್ಟಗಿ: ಸಮಾಜ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಂಡರೆ ದೇಶದ ಜನರು ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯ ಎಂದು ತಾಲ್ಲೂಕಿನ ಮುದೇನೂರು ಉಮಾಚಂದ್ರಮೌಳೇಶ್ವರ ಮಠದ ನಿಯೋಜಿತ ಉತ್ತರಾಧಿಕಾರಿ ಸಿದ್ದಲಿಂಗ ದೇವರು ಹೇಳಿದರು.

ಬುಧವಾರ ಮಠದ ಆವರಣ ‘ಚಂದ್ರೋದಯದೆಡೆಗೆ’ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮ ಮಾರ್ಗದ ತಳಹದಿಯ ಮೇಲೆ ನಿಂತಿರುವ ನಮ್ಮ ರಾಷ್ಟ್ರದ ಜನರು ವಿಶ್ವಕ್ಕೆ ಪ್ರತಿನಿಧಿಯಾಗಿದೆ, ಅಂಥ ಪರಂಪರೆ, ಸಂಸ್ಕಾರ ಮತ್ತು ಸಂಸ್ಕೃತಿ ಮುಂದುವರೆಯಬೇಕು ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಆಗಾಧ ರೀತಿಯಲ್ಲಿ ಬದಲಾವಣೆ ಹೊಂದುತ್ತಿದೆ, ಆಧುನಿಕ ವ್ಯವಸ್ಥೆಯಲ್ಲಿ ಜೀವನ ರೂಪುಗೊಂಡಿದೆ. ಜಾಗತಿಕ ತಾಪಮಾನ ಕಡಿಮೆ ಮಾಡುವುದಕ್ಕೆ ಅನೇಕ ವೈಜ್ಞಾನಿಕ ರೀತಿ ನೀತಿಗಳನ್ನು ಅನುಸರಿಸುತ್ತಿದ್ದೇವೆ. ಅದೇ ರೀತಿ ನಮ್ಮ ಆಂತರಿಕ ತಾಪಮಾನ ಇಳಿಸುವುದಕ್ಕೆ ಆಧ್ಯಾತ್ಮಿಕ ಚಿಂತನೆ ಒಂದೇ ಮಾರ್ಗ ಸಾಕು ಎಂದರು.

ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ, ಯಾಂತ್ರಿಕ ಬದುಕಿನ ಒತ್ತಡದಲ್ಲಿ ನಮ್ಮತನ ಕಳೆದುಹೋಗುತ್ತಿದೆ. ನೆಮ್ಮದಿಯನ್ನು ಅರಸುತ್ತಿರುವ ಮನಕ್ಕೆ ಶರಣರು, ಸಂತರು, ದಾರ್ಶನಿಕ ಜೀವನ ಸಂದೇಶಗಳ ಚಿಂತನೆ ದಾರಿದೀಪವಾಗಬಲ್ಲದು ಎಂದು ಹೇಳಿದರು.

ಜನಪದ ಕಲಾವಿದ ಜೀವನಸಾಬ ಬಿನ್ನಾಳ ಜನಪದ ಗೀತೆ ಗಾಯನ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿ ಜನರನ್ನು ರಂಜಿಸಿದರು. ಶಿಕ್ಷಕ ಮಹಾಂತಯ್ಯ ಹಿರೇಮಠ ದತ್ತಿ ಉಪನ್ಯಾಸ ನೀಡಿದರು.

ಹಿರಿಯರಾದ ಶಶಿಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ ಅಧ್ಯಕ್ಷತೆ ವಹಿಸಿದ್ದರು. ವೀರೇಶ ಬಂಗಾರಶೆಟ್ಟರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಿನಾಯಕ ನಾಯಕ, ಭರತೇಶ ಜೋಷಿ, ಶಿವಪ್ಪ ನೀರಾವರಿ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ದೊಡ್ಡಪ್ಪ ಜ್ಯೋತಿ, ಶಂಕರಮ್ಮ ಪಾಟೀಲ, ಡಾ.ಪ್ರೀತಿ ಪಾಟೀಲ, ಉಮೇಶ ಹಿರೇಮಠ, ಹನುಮಂತರಾವ ದೇಸಾಯಿ, ಸಂಗಪ್ಪ ಕಡಿವಾಲ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry