ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಒತ್ತಾಯ

7

ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಒತ್ತಾಯ

Published:
Updated:

ಬಾಗಲಕೋಟೆ: ನೂತನ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ಸರ್ಕಾರ ರದ್ದು ಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಎನ್‌ಪಿಎಸ್‌ ಯೋಜನೆಯಿಂದ ನೌಕರರಲ್ಲಿ ಅಭದ್ರತೆ ಕಾಡುತ್ತಿದೆ ಕೂಡಲೇ ಅದನ್ನು ರದ್ದು ಪಡಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಏ.1, 2006 ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ಯೋಜನೆ ಮಾರಕವಾಗಿದೆ. ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಎನ್‌ಪಿಎಸ್‌ ಯೋಜನೆಯಿಂದ ಪಿಂಚಣಿ ಹೊಂದಿದ ನೌಕರರಿಗೆ ಮಾಸಿಕ ಕಡಿಮೆ ಪಿಂಚಣಿ ಬರುತ್ತದೆ. ಇದರಿಂದ ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತದೆ. ಈ ಯೋಜನೆಯಿಂದ ಶೇ.10ರಷ್ಟು ತುಟ್ಟಿ ಭತ್ಯೆ ಹಾಗೂ ಮೂಲ ವೇತನ ಕಡಿತ ಮಾಡಲಾಗುತ್ತಿದೆ. ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನ ಸೌಲಭ್ಯ ಇಲ್ಲ. ಸ್ವಯಂ ನಿವೃತ್ತಿಗೆ ಅವಕಾಶ ಇಲ್ಲ. ಸೇವಾ ಅವಧಿಯಲ್ಲಿ ಕಡಿತಗೊಳಿಸಿದ ಹಣವನ್ನು ನಿವೃತ್ತಿ ಸಮಯದಲ್ಲಿ ಶೇ.60 ರಷ್ಟು ಮಾತ್ರ ಹಿಂತಿರುಗಿಸಲಾಗುತ್ತಿದೆ. ಉಳಿದ ಶೇ.40 ರಷ್ಟು ಹಣವನ್ನು ಕಂಪನಿಗಳು ಪ್ರತಿ ತಿಂಗಳು ಕನಿಷ್ಠ ಮಟ್ಟದ ಪಿಂಚಣಿ ನೀಡುತ್ತವೆ ಎಂದು ದೂರಿದರು.

ತ್ರಿಪುರಾ, ಪಶ್ಚಿಮಬಂಗಾಲ ರಾಜ್ಯದಲ್ಲಿ ಎನ್‌ಪಿಎಸ್‌ ಯೋಜನೆ ಕೈಬಿಟ್ಟಿದ್ದಾರೆ. ತೆಲಂಗಾಣ ರಾಜ್ಯದಲ್ಲಿಯೂ ಈ ಯೋಜನೆಯನ್ನು ಕೈಬಿಡುವವರಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಈ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಂ.ಬಿ.ಬಳ್ಳಾರಿ, ಎಸ್.ವಿ.ಸತ್ಯರಡ್ಡಿ, ಎಸ್.ಕೆ.ಹಿರೇಮಠ, ಎಂ.ಎಸ್.ಲೋಕಾಪುರ, ಬಿ.ಪಿ.ಬಾಗೇನವರ, ಬಿ.ಟಿ.ಕೋವಳ್ಳಿ, ಎಸ್.ಎಸ್.ಪದಾರ, ಸಿ.ಬಿ.ಕಲ್ಲೋಲ, ಎಸ್.ಎ.ಸಾರಂಗಮಠ, ಸಿ.ಎಸ್.ಅರಸಿಕೇರಿ ಸೇರಿದಂತೆ ಅನೇಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry