ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

7

ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

Published:
Updated:
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌: ರಾಜ್ಯದಲ್ಲಿ ಹಣ ಸಂಗ್ರಹಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ನಿಯೋಜಿಸಿದ್ದಾರೆ ’ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಾಲ್ವರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಅಲಿಬಾಬಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ವರ್ಗಾವಣೆ ಮಾಡುತ್ತಿದ್ದಾರೆಂದು ಜನ ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ’ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಮುಖ್ಯಮಂತ್ರಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್‌ ಮುಖಂಡರಿಗೆ ಎರಡು, ಮೂರು ಕೋಟಿ ರೂಪಾಯಿ ಗುತ್ತಿಗೆ ಕೆಲಸ ಕೊಡಿಸುವ ಆಮಿಷ ಒಡ್ಡುತ್ತಿದ್ದಾರೆ. ಪಾಪದ ಹಣದಿಂದ ಎಲ್ಲರನ್ನೂ ಕೊಂಡುಕೊಳ್ಳಬಹುದು ಎನ್ನುವ ಭ್ರಮೆಯಲ್ಲಿದ್ದಾರೆ’ ಎಂದು ಟೀಕಿಸಿದರು.

‘ರಾಯಚೂರು ನಗರ ಹಾಗೂ ಲಿಂಗಸುಗೂರು ಶಾಸಕರು ಜೆಡಿಎಸ್‌ ತೊರೆದು ಬಿಜೆಪಿಗೆ ಸೇರಿದ್ದರಿಂದ ಪಕ್ಷಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಪಕ್ಷದಲ್ಲಿ ಇನ್ನೂ ಉತ್ತಮವಾದ ಅಭ್ಯರ್ಥಿಗಳಿದ್ದಾರೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತೇವೆ’ ಎಂದು ಹೇಳಿದರು.

ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ(ಎಸ್‌ಐಟಿ) ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದನ್ನು ಪ್ರಸ್ತಾಪಿಸಿ, ‘ದೇಶದಲ್ಲಿರುವ ತನಿಖಾ ಸಂಸ್ಥೆಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರನ್ನು ರಕ್ಷಣೆ ಮಾಡುವ ವ್ಯವಸ್ಥೆ ಈಗಲೂ ಮುಂದುವರಿದಿದೆ. ಬೋಪೋರ್ಸ್‌ ಹಗರಣ ಸಹ ತಾರ್ಕಿಕ ಅಂತ್ಯ ಕಾಣಲಿಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯ ಶಕ್ತಿಯನ್ನೇ ಕುಗ್ಗಿಸಲಾಗಿದೆ’ ಎಂದರು.

‘ಬಿಜೆಪಿಗೆ ಅಭಿವೃದ್ಧಿ ಅಜೆಂಡಾ ಇಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ರಾಜಕೀಯ ವ್ಯಾಪಾರ ಮಾಡಲು ಕರ್ನಾಟಕಕ್ಕೆ ಬಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಮಸ್ಯೆಗಳ ಪರಿಹಾರದ ಕುರಿತು ಮಾತನಾಡಿಲ್ಲ, ಅಭಿವೃದ್ಧಿಯ ಬಗೆಗೂ ಉಲ್ಲೇಖ ಮಾಡಿಲ್ಲ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry