ಚುನಾವಣಾ ಯಶಸ್ಸಿಗೆ ವಿದ್ಯಾರ್ಥಿಗಳೂ ಕೈಜೋಡಿಸಿ

7

ಚುನಾವಣಾ ಯಶಸ್ಸಿಗೆ ವಿದ್ಯಾರ್ಥಿಗಳೂ ಕೈಜೋಡಿಸಿ

Published:
Updated:

ಚಿತ್ರದುರ್ಗ:  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಯಲು ವಿದ್ಯಾರ್ಥಿಗಳು ಕೂಡ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸಲಹೆ ನೀಡಿದರು. ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ‘ಮತದಾರರ ನೋಂದಣಿ’ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಮೊದಲು ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಬೇಕಾಗಿದೆ. ಅದಕ್ಕಾಗಿ 18 ವರ್ಷ ತುಂಬಿದವರೆಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಅಲ್ಲದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ಅವರು

ತಿಳಿಸಿದರು.

ಹೊಸ ಸೇರ್ಪಡೆ, ಹೆಸರಿದ್ದು ತಿದ್ದುಪಡಿ, ಮತಗಟ್ಟೆ ವರ್ಗಾವಣೆ, ವಿಧಾನಸಭಾ ಕ್ಷೇತ್ರದಿಂದ ಬೇರೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಲು ಜ. 22 ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಹೊಸದಾಗಿ ನೋಂದಾಯಿಸಲು ನಮೂನೆ - 6 ರಲ್ಲಿ, ತಿದ್ದುಪಡಿ, ವರ್ಗಾವಣೆಗೆ ನಮೂನೆ - 8 ಹಾಗೂ ಪಟ್ಟಿಯಿಂದ ಕೈಬಿಡಲು ನಮೂನೆ - 7 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

2020ರ ವೇಳೆಗೆ ಒಟ್ಟಾರೆ ದೇಶದಲ್ಲಿನ ಜನಸಂಖ್ಯೆಯಲ್ಲಿ ಯುವಕ– ಯುವತಿಯರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲೂ ಯುವ ಜನಾಂಗ ಮೇಲುಗೈ ಸಾಧಿಸಲಿದೆ. ಈ ಹಿನ್ನೆಲೆಯಲ್ಲಿ ಉತ್ತಮರನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಯುವಸಮೂಹ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹಣ, ಆಮಿಷವನ್ನು ತಡೆಗಟ್ಟಲು ಕೈಜೋಡಿಸಬೇಕು.  ನವ ಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಸಣ್ಣಮ್ಮ, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಎನ್. ಸುಧಾಕರ್, ಪ್ರೊ.ಕೆ.ಕೆ.ಕಾಮಾನಿ, ಚುನಾವಣಾ ಶಿರಸ್ತೆದಾರ್ ಸಂತೋಷ್ ಇದ್ದರು. ನಗರಸಭೆ ಕಂದಾಯಾಧಿಕಾರಿ ವಾಸಿಂ ಸ್ವಾಗತಿಸಿದರು.

ನೋಂದಣಿಗೆ ಅರ್ಜಿ ನಮೂನೆ ವಿತರಣೆ: ಮತದಾರರ ನೋಂದಣಿಗಾಗಿ ಕಾಲೇಜುಗಳಲ್ಲಿಯೇ ನಮೂನೆ - 6 ರ ಅರ್ಜಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ ತಿಳಿಸಿದರು.

ಭರ್ತಿ ಮಾಡಿದ ನಂತರ ಆಯಾ ಕಾಲೇಜುಗಳಲ್ಲಿ ರಚನೆ ಮಾಡಿರುವ ಮತದಾರರ ಸಾಕ್ಷರತಾ ಸಮಿತಿಗೆ ನೀಡಿದಲ್ಲಿ ಅದನ್ನು ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗೆ ಕಳುಹಿಸಿಕೊಡುವ ಮೂಲಕ ನೋಂದಣಿ ಮಾಡಿಸಲಾಗುತ್ತದೆ. ಚುನಾವಣಾ ಆಯೋಗ ಕಲ್ಪಿಸಿರುವ ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry