ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

Last Updated 19 ಜನವರಿ 2018, 9:43 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಚೆಕ್‌ ಡ್ಯಾಂ ಗದ್ದಲ ಮತ್ತೊಮ್ಮೆ ಕೋಲಾಹಲ ಸೃಷ್ಟಿಸಿತು.

’ಜಿಲ್ಲೆಯಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಸಾಧ್ಯವಿದೆಯೋ, ಇಲ್ಲವೋ ಹೇಳಿ, ಸಾಧ್ಯವಿಲ್ಲ ಎನ್ನುವುದಾದರೆ ಇನ್ನು ಮುಂದೆ ಈ ಕುರಿತು ಚರ್ಚೆ ಮಾಡುವುದೇ ಬೇಡ’ ಎಂದು ಸಭೆಯಲ್ಲಿ ಸದಸ್ಯರು ಸಿಇಒ ಅವರ ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಚೈತ್ರಾ ಶಿರೂರ, ‘ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ನಾಲ್ಕು ಚೆಕ್‌ ಡ್ಯಾಂ ಮಾಡಿಸಿಕೊಡುವ ಭರವಸೆ ನೀಡಿದ್ದಿರಿ, ಇದೀಗ ಬೇರೆಯೇ ಕಾರಣ ಹೇಳುತ್ತಿದ್ದೀರಿ, ಕೇಳಿದಷ್ಟು ಕೊಡಲು ಆಗುವುದಿಲ್ಲ ಎಂದಾದರೆ ಇನ್ನು ಮುಂದೆ ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದರು.

ಅಧ್ಯಕ್ಷರ ಮಾತಿಗೆ ಸದಸ್ಯರಾದ ಚೆನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ಕರಿಯಪ್ಪ ಮಾದರ, ನಾಗನಗೌಡ ಪಾಟೀಲ, ವಿಜಯಲಕ್ಷ್ಮಿ ಪಾಟೀಲ ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ನೇಹಲ್, ‘ನಿಯಮ ಬಿಟ್ಟು ಕೆಲಸ ಮಾಡಲು ಆಗುವುದಿಲ್ಲ. ನರೇಗಾ ಯೋಜನೆಯಡಿ ಮಾನವ ದಿನಗಳು ಮತ್ತು ಸಲಕರಣೆಗೆ ಸಂಬಂಧಿಸಿದಂತೆ ಹಣ ಬಿಡುಗಡೆಗೆ ನಿಗದಿತ ಮಾನದಂಡ ಇದೆ. 60:40 ಅನುಪಾತ ಕಾಪಾಡಿಕೊಳ್ಳಬೇಕು ಎನ್ನುವ ನಿಯಮವಿದೆ. ಒಂದು ವೇಳೆ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು ಎಂದರೆ ಅದು ಗ್ರಾಮ ಪಂಚಾಯ್ತಿ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಬೇಕು. ಸದಸ್ಯರು ಕೇಳಿದಷ್ಟು ಚೆಕ್ ಡ್ಯಾಂ ಕೊಡುವ ಭರವಸೆ ನೀಡಲು ಸಾಧ್ಯವಿಲ್ಲ’ ಎಂದರು.

‘ಸಿಇಒ ಹುದ್ದೆಗೆ ವಹಿಸಿಕೊಂಡ ಆರಂಭದಲ್ಲಿ ನನಗೆ ಅನುಪಾತದ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಪ್ರತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ನಾಲ್ಕು ಚೆಕ್ ಡ್ಯಾಂ ನೀಡುವುದಾಗಿ ಹೇಳಿದ್ದೆ. ಆದರೆ, ಪರಿಶೀಲಿಸಿದಾಗ ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂಬುದು ತಿಳಿದುಬಂತು’ ಎಂದರು.

‘ಒಂದೊಮ್ಮೆ ಗ್ರಾಮ ಪಂಚಾಯ್ತಿ ಕ್ರಿಯಾ ಯೋಜನೆಯಲ್ಲಿ ಈ ಕಾಮಗಾರಿ ಸೇರಿದರೆ ಈಗ ಸಲ್ಲಿಕೆಯಾಗಿರುವ 273  ಅರ್ಜಿ ಮಾತ್ರವಲ್ಲ, ಎಷ್ಟು ಬೇಕಾದರೂ ಕಾಮಗಾರಿ ನಡೆಸಲು ಅನುಮತಿ ನೀಡುತ್ತೇನೆ. ಇಷ್ಟು ಮಾತ್ರವಲ್ಲ ಶಾಲಾ ಕಾಂಪೌಂಡ್‌ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಇದು ಅನ್ವಯಿಸಲಿದೆ’ ಎಂದು ಹೇಳಿದರು.

‘ನೀವು ಹೀಗೆ ಹೇಳಿದರೆ ನಾವು ಮುಂದಿನ ಕ್ರಮದ ಬಗ್ಗೆ ಯೋಚಿಸಬೇಕಾಗುತ್ತದೆ’ ಎಂದು ಚೈತ್ರಾ ಶಿರೂರ ಮರುತ್ತರ ನೀಡಿದರು. ‘ನಿಯಮ ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಯಾವುದೇ ಕ್ರಮ ಕೈಗೊಳ್ಳಲು ಸ್ವತಂತ್ರರು’ ಎಂದು ಸಿಇಒ ಹೇಳಿದರು.

ಅಧ್ಯಕ್ಷೆ–ಸಿಇಒ ಜಪಾಪಟಿ

ಚೆಕ್ ಡ್ಯಾಂ ವಿಷಯವಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹಾಗೂ ಸಿಇಒ ಸ್ನೇಹಲ್ ರಾಯಮಾನೆ ನಡುವೆ ನಡೆದ ಮಾತಿನ ಚಕಮಕಿ ಹೀಗಿತ್ತು...

ಅಧ್ಯಕ್ಷೆ: ನಮ್ಮ ಜತೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವುದಿದ್ದರೆ ಮಾಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.

ಸಿಇಒ: ನಾನು ನಿಯಮಾವಳಿ ಪ್ರಕಾರವೇ ಕೆಲಸ ಮಾಡುವುದು. ಅದನ್ನು ಬಿಟ್ಟು ಬೇರೆ ಮಾಡಲು ಸಾಧ್ಯವಿಲ್ಲ.

ಅಧ್ಯಕ್ಷೆ: ಚೆಕ್ ಡ್ಯಾಂ ನಿರ್ಮಾಣ ಕೆಲಸಕ್ಕೆ ಅನುಮೋದನೆ ನೀಡಲು ಆಗುವುದೋ? ಇಲ್ಲವೋ?

ಸಿಇಒ: ದಯವಿಟ್ಟು ಕ್ಷಮಿಸಿ. ಗ್ರಾಮ ಪಂಚಾಯ್ತಿ ಕ್ರಿಯಾ ಯೋಜನೆಯಲ್ಲಿ ಸೇರಿಸಿದರೆ ಅದಕ್ಕೆ ಅನುಮೋದನೆ ನೀಡುತ್ತೇನೆ. ಇಲ್ಲದಿದ್ದರೆ ಬೇಕಾದ್ದನ್ನು ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT