ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ

Last Updated 19 ಜನವರಿ 2018, 9:45 IST
ಅಕ್ಷರ ಗಾತ್ರ

ಗದಗ: ‘ಮಹದಾಯಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು, ಬೆಳೆ ವಿಮೆ ಪರಿಹಾರ ವಿತರಿಸಬೇಕು, ಕಡಲೆಗೆ ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರ ಆರಂಭಿಸಬೇಕು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸೇನಾ ರಾಜ್ಯ ಸಮಿತಿ ಸದಸ್ಯರು ಗುರುವಾರ ಇಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನರಗುಂದದಿಂದ ಗದಗ ಜಿಲ್ಲಾಧಿಕಾರಿ ಕಚೇರಿಗೆ ಬಂದ 50ಕ್ಕೂ ಹೆಚ್ಚು ಸದಸ್ಯರು, ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ‘ಕುಡಿಯುವ ನೀರಿಗಾಗಿ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ 918 ದಿನಕ್ಕೆ ಕಾಲಿಟ್ಟಿದೆ. ಯೋಜನೆ ಜಾರಿಗಾಗಿ ಜನಪ್ರತಿನಿಧಿಗಳು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತಿಲ್ಲ’ ಎಂದು ರೈತರು ಆರೋಪಿಸಿದರು.

‘2016–17ನೇ ಸಾಲಿನ ಬೆಳೆ ವಿಮಾ ಯೋಜನೆ ಮತ್ತು ಫಸಲ್‌ ಬೀಮಾ ಯೋಜನೆಯಡಿ ಕಂತು ಕಟ್ಟಿದ ರೈತರಿಗೆ ಈವರೆಗೆ ಹಣ ಜಮಾ ಆಗಿಲ್ಲ. ಧಾರವಾಡ ಭಾಗದಲ್ಲಿ ಸಾಕಷ್ಟು ರೈತರಿಗೆ ವಿಮೆ ಮೊತ್ತ ಬಿಡುಗಡೆಯಾಗಿದೆ. ಗದಗ ಜಿಲ್ಲೆಯ ರೈತರಿಗೆ ಮಾತ್ರ ಇನ್ನೂ ಬಂದಿಲ್ಲ. ಕೂಡಲೇ ವಿಮೆ ಹಣ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಕಾಲ ಭೀಕರ ಬರಗಾಲ ಎದುರಾಗಿತ್ತು. ಇದರಿಂದ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸಿದರು. ಸದ್ಯ ಅಲ್ಪ ಮಳೆಯಾಗಿದ್ದರಿಂದ ಬಂದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಜತೆಗೆ ಕಡಲೆ ಖರೀದಿ ಕೇಂದ್ರ ಆರಂಭಿಸಬೇಕು. ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿರುವ ರೈತರಿಗೆ ಹಣ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ರಮೇಶ ನಾಯ್ಕರ, ವೀರಬಸಪ್ಪ ಹೂಗಾರ, ಪಿ.ಎಫ್.ಜಂಬಗಿ, ಎಸ್.ಬಿ.ಜೋಗಣ್ಣವರ, ಎಸ್.ಎಂ.ಮೇಟಿ, ಅಶೋಕ ಬೇವಿನಕಟ್ಟಿ, ಆನಂದ ಕೊಟಗಿ, ಚಂದ್ರ ಹೊಣ್ಣವಾಡ, ಮಂಜುನಾಥ ಡಿ, ಸಿದ್ದಪ್ಪ ಶಿರಹಟ್ಟಿ, ಕಾಜಿಸಾಬ್ ರಾಹುತ್, ಶಿವಾನಂದ ಗೋಗೇರಿ, ಸೋಮು ಆಯಟ್ಟಿ, ಹನುಮಂತಪ್ಪ ಸರ್‌ನಾಯ್ಕಕ, ಯಲ್ಲಪ್ಪ ಗುಡದರಿ ಇದ್ದರು.

* * 

ಸರ್ಕಾರ 4 ದಿನದೊಳಗೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ, ನೂರಾರು ರೈತರು ಗದಗ ಜಿಲ್ಲಾಡಳಿತ ಭವನದ ಎದುರು ಮೌನ ಪ್ರತಿಭಟನೆ ನಡೆಸಲಿದ್ದಾರೆ.
–ವಿರೇಶ ಸೊಬರದಮಠ, ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT