ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

5

ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

Published:
Updated:
ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

ಹಾಸನ: ‘ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ಜಿಲ್ಲಾಡಳಿತ, ಸ್ಥಳೀಯ ಶಾಸಕರು ವಿಫಲವಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಇವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದು ಬಿಜೆಪಿ ಮುಖಂಡ ರಾಜೇಶ್‌ ಎಚ್ಚರಿಸಿದರು.

ಎರಡು ತಾಲ್ಲೂಕುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಾವು–ನೋವು ಮತ್ತು ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆ ಹಾವಳಿಯಿಂದ ಕಾರ್ಮಿಕರು ಜೀವ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ತೋಟಗಳ ಕಾರ್ಮಿಕರು ಸಂಜೆ 5ರೊಳಗೆ ಮನೆ ಸೇರಿಕೊಳ್ಳುವ ವಾತಾವರಣ

ನಿರ್ಮಾಣವಾಗಿದೆ. ಸಾವು ಸಂಭವಿಸಿದಾಗ ಶಾಸಕರು ಬಂದು ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡುವುದನ್ನು ಬಿಟ್ಟರೆ ಇದುವರೆಗೂ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಒಂದೆರಡು ಆನೆ ಹಿಡಿದು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಒಂದು ಆನೆ ಸೆರೆಗೆ ₹ 30 ಲಕ್ಷ ನೀಡುವ ಸರ್ಕಾರ, ಮನುಷ್ಯ ಸತ್ತರೆ ₹ 5 ಲಕ್ಷ ನೀಡಿ ಕೈ ತೊಳೆದುಕೊಳ್ಳುತ್ತದೆ. ಕುಟುಂಬಕ್ಕೆ ಆಧಾರವಾಗಿರುವ ವ್ಯಕ್ತಿ ಗಳು ಮೃತಪಟ್ಟ ಸಂದರ್ಭದಲ್ಲೂ ಸರ್ಕಾರ ಅವರ ನೆರವಿಗೆ ಧಾವಿಸಿಲ್ಲ. ಮೃತರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕಾಡಾನೆಗಳನ್ನು ಹಿಡಿಯುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೆ ಅರಿವಳಿಕೆ ಮದ್ದು ಇಲ್ಲ ಎಂದು ಅರಣ್ಯ ಇಲಾಖೆಯವರು ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಆನೆಗಳ ಹಾವಳಿಯಿಂದ ರೈತರು ಹೈರಣಾಗಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಆನೆ ದಾಳಿಗೆ ಕಡಿವಾಣ ಹಾಕಬೇಕಾದ ಶಾಸಕರೇ ಅಸಹಾಯಕರಾಗಿ ಪ್ರತಿಭಟನೆ ಮಾಡುತ್ತಾರೆ. ಅಧಿಕಾರಿಗಳು ಶಾಸಕರ ಮಾತನ್ನು ಕೇಳುತ್ತಿಲ್ಲ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದಲ್ಲಿ ಮೊದಲ ಆರೋಪಿಯಾಗಿ ಶಾಸಕ ಎಚ್‌.ಕೆ.ಕುಮಾರ ಸ್ವಾಮಿ, ಜಿಲ್ಲಾಧಿಕಾರಿ ಎರಡನೇ ಆರೋಪಿ, ಡಿಎಫ್‌ಒ ಅವರನ್ನು ಮೂರನೇ ಆರೋಪಿ ಮಾಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಭಾಗ್ಯ, ಶಶಿಕುಮಾರ್‌, ಮುತ್ತಣ್ಣ, ಸಂದೇಶ್‌, ಪ್ರಕಾಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry