ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

7

ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

Published:
Updated:
ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

ಹಾವೇರಿ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಜ.20ರಂದು 2 ಟಿಎಂಸಿ ಅಡಿ ನೀರು ಬಿಡುವ ಕುರಿತು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿದರು.

‘ಹಾವೇರಿ, ಬಳ್ಳಾರಿ, ಗದಗ ಮತ್ತು ದಾವಣಗೆರೆ ಜಿಲ್ಲೆಗಳ ಜನ–ಜಾನುವಾರುಗಳಿಗೆ ಕುಡಿಯಲು ಹಾಗೂ ಜಲಚರ, ಪಶು–ಪಕ್ಷಿಗಳಿಗಾಗಿ ಈ ನೀರನ್ನು ಬಿಡಲಾಗುತ್ತಿದೆ. ಹಾವೇರಿ ಜಿಲ್ಲಾಡಳಿತವು ಜ. 10ರಂದು ಪತ್ರ ಬರೆದು 0.5 ಟಿಎಂಸಿ ಅಡಿ ನೀರು ಬಿಡುವಂತೆ ಮನವಿ ಮಾಡಿತ್ತು’ ಎಂದರು.

‘ಕುಡಿಯುವ ಸಲುವಾಗಿ ನೀರು ಬಿಡಲಾಗುತ್ತಿದ್ದು, ನದಿ ಪಾತ್ರದಲ್ಲಿರುವ ಕೃಷಿ ಪಂಪ್‌ಸೆಟ್‌ಗಳನ್ನು ಬಳಸದಂತೆ ರೈತರಿಗೆ ಮನವಿ ಮಾಡಲಾಗಿದೆ’ ಎಂದ ಅವರು, ‘ಒಂದೊಮ್ಮೆ ಕೃಷಿಗೆ ಬಳಕೆ ಮಾಡುವುದು ಕಂಡು ಬಂದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದರು.

ಮರಳು ಅಕ್ರಮ ಗಣಿಗಾರಿಕೆ: ಮರಳು ಅಕ್ರಮ ಗಣಿಗಾರಿಕ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ಗುತ್ತಲ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲಾಗಿದೆ. 2 ಸ್ಟಾಕ್ ಯಾರ್ಡ್‌ಗಳ ಮೂಲಕ ನಿರ್ಮಿತಿ ಹಾಗೂ ಲೋಕೋಪಯೋಗಿ ಇಲಾಖೆಯು ಮರಳು ವಿತರಣೆ ಮಾಡುತ್ತಿದ್ದು, ಇನ್ನೊಂದು ಸ್ಟಾಕ್ ಯಾರ್ಡ್‌ ಶೀಘ್ರವೇ ಆರಂಭಿಸಲಾಗುವುದು ಎಂದರು.

ಜಿಲ್ಲಾ ಉತ್ಸವ: ಫೆಬ್ರುವರಿಯಲ್ಲಿ ಜಿಲ್ಲಾ ಉತ್ಸವ ಆಯೋಜಿಸುವ ಕುರಿತು ಚಿಂತನೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದು, ಒಪ್ಪಿಗೆಯ ನಿರೀಕ್ಷೆಯಲ್ಲಿ ಇದ್ದೇವೆ ಎಂದರು. ಜಿಲ್ಲೆಯ ಕುರಿತು ಇತಿಹಾಸ, ದಾರ್ಶನಿಕರು, ಐತಿಹಾಸಿಕ ಸ್ಥಳ, ವಸ್ತುಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದೇವಗಿರಿಯ ವಿಜ್ಞಾನ ಪಾರ್ಕ್ ಬಳಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸುಮಾರು 10 ಎಕರೆ ಸ್ಥಳ ಮೀಸಲು ಇಡಲಾಗಿದೆ ಎಂದರು.

ಚಲನ ಚಿತ್ರಗಳ ಗಾನ ಯಾನ: ಸಾಮಾಜಿಕ, ಸಾಮರಸ್ಯ, ಸಮ ಸಮಾಜದ ತತ್ವ ಪಸರಿಸುವ ಅಪೂರ್ವ ಚಲನಚಿತ್ರಗೀತೆಗಳ ‘ಗಾನ ಯಾನ’ ವನ್ನು ಜ.26 ರಂದು ಸಂಜೆ 6 ಗಂಟೆರಿಂದ9 ರ ತನಕ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಅತ್ಯಂತ ಅಪರೂಪ, ಮಧುರವಾದ ಕನ್ನಡ ಚಲನಚಿತ್ರ ಗೀತೆಗಳನ್ನು ಬೆಂಗಳೂರಿನ ‘ಕಲಾ ನಮನ’ ಕಲಾವಿದರು ಪ್ರಸ್ತುತ ಪಡಿಸುವರು. ಹಿನ್ನೆಲೆ ಗಾಯಕರಾದ ನಾಗಚಂದ್ರಿಕಾ ಭಟ್, ದ್ರಾಕ್ಷಾಯಿಣಿ, ಉದಯ ಅಂಕೋಲ, ಹರ್ಷ ಮತ್ತು ತಂಡದವರು ಪಾಲ್ಗೊಳ್ಳುವರು.

ಭಕ್ತ ಕನಕದಾಸ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಮೇಯರ್ ಮುತ್ತಣ್ಣದಿಂದಇಂದಿನ ಹೊಸ ಪೀಳಿಗೆ ಸಿನಿಮಾದ ವರೆಗಿನ ಐಕ್ಯತೆ ಸಾರುವ ಅಪರೂಪದ ಗೀತೆಗಳನ್ನು ಪ್ರಸ್ತುತ ಪಡಿಸುವರು ಎಂದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ವಾರ್ತಾಧಿಕಾರಿ ರಂಗನಾಥ ಕುಳೆಗಟ್ಟೆ ಇದ್ದರು.

* * 

ಜಿಲ್ಲೆಯ ಇತಿಹಾಸ ಮತ್ತು ದಾರ್ಶನಿಕರನ್ನು ಪರಿಚಯಿಸುವ ಕಲಾಕೃತಿಗಳು, ಐತಿಹಾಸಿಕ ವಸ್ತುಗಳನ್ನು ಒಳಗೊಂಡ ವಸ್ತುಸಂಗ್ರಹಾಲಯ ಆರಂಭಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ

–ಡಾ.ವೆಂಕಟೇಶ್ ಎಂ.ವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry