ಎರಡು ಕಥೆಗಳ ‘ರಾಜು ಕನ್ನಡ ಮೀಡಿಯಂ’

7

ಎರಡು ಕಥೆಗಳ ‘ರಾಜು ಕನ್ನಡ ಮೀಡಿಯಂ’

Published:
Updated:
ಎರಡು ಕಥೆಗಳ ‘ರಾಜು ಕನ್ನಡ ಮೀಡಿಯಂ’

‘ರಾಜು ಕನ್ನಡ ಮೀಡಿಯಂ’. ಸುದೀಪ್‌ ಮತ್ತು ಗುರುನಂದನ್ ಅಭಿನಯದ ಸಿನಿಮಾ ಇದು. ಹೆಸರಿನಲ್ಲೇ ‘ಕನ್ನಡ ಮೀಡಿಯಂ’ ಎಂದು ಇರುವ ಕಾರಣ ಕನ್ನಡ ಮಾಧ್ಯಮದ ಬಗ್ಗೆ ಅಥವಾ ಕನ್ನಡ ಮಾಧ್ಯಮದಲ್ಲಿ ಓದಿದವರ ಬಗ್ಗೆ ಏನೋ ಒಂದು ಕಥೆಯನ್ನು ಹೇಳಲು ಹೊರಟಿದೆ ಈ ಚಿತ್ರತಂಡ ಎಂದು ಮೇಲ್ನೋಟಕ್ಕೆ ಊಹಿಸಬಹುದು.

ಕನ್ನಡ ಮಾಧ್ಯಮದಲ್ಲಿ ಓದಿದ, ಮಲೆನಾಡಿನ ಚಿಕ್ಕ ಹಳ್ಳಿಯ ಯುವಕನೊಬ್ಬ ನಗರಕ್ಕೆ ಕೆಲಸ ಅರಸಿ ಬಂದಾಗ ಇಂಗ್ಲಿಷ್‌ ಸಂಸ್ಕೃತಿಗೆ ಒಗ್ಗಿಕೊಳ್ಳಲು ಪಡುವ ಪಾಡು, ಒಳ್ಳೆಯ ಇಂಗ್ಲಿಷ್‌ ಮಾತನಾಡಲು ಬಾರದ ಈ ಯುವಕ ಅನುಭವಿಸುವ ಕೀಳರಿಮೆ ಈ ಚಿತ್ರದ ಕಥಾವಸ್ತು ಹೌದು ಎಂಬುದರಲ್ಲಿ ಅನುಮಾನ ಇಲ್ಲ. ಮಲೆನಾಡಿನ ಆ ಯುವಕನ (ರಾಜು) ಪಾತ್ರ ನಿಭಾಯಿಸಿದವರು ಗುರುನಂದನ್.

ಕೀಳರಿಮೆ, ಸೋಲುಗಳನ್ನು ಮೀರಿ ಗೆಲ್ಲಬೇಕು, ಸತ್ತುಹೋಗಬೇಕು ಎಂಬಷ್ಟು ಕಷ್ಟವಾದರೂ ಎದ್ದು ಹೋರಾಟ ನಡೆಸಬೇಕು ಎಂಬ ಕಿವಿಮಾತು ಹೇಳುವ ಪಾತ್ರ ನಿಭಾಯಿಸಿದವರು ಸುದೀಪ್. ಇದು ಈ ಸಿನಿಮಾದ ಒಂದು ಮುಖ.

ನರೇಶ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಇನ್ನೊಂದು ಮುಖವೂ ಇದೆ. ಅದು: ‘ಜೀವನದಲ್ಲಿ ಮುಖ್ಯವಾಗಿದ್ದು ಏನು’ ಎಂಬ ಪ್ರಶ್ನೆಯನ್ನು ಚಿತ್ರದ ಪ್ರಧಾನ ಪಾತ್ರ ತನ್ನನ್ನು ತಾನೇ ಕೇಳಿಕೊಳ್ಳುವುದು, ಜೀವನದ ಪ್ರಯಾಣದಲ್ಲಿ ಸಿಗುವ ಅನುಭವಗಳನ್ನು ಆಧರಿಸಿ ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತ ಹೋಗುವುದು.

ಅಂದರೆ, ಈ ಸಿನಿಮಾ ಮೂಲಕ ನಿರ್ದೇಶಕರು ಎರಡು ಕಥೆಗಳನ್ನು ಹೇಳಲು ಯತ್ನಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿಯೂ ಯಶಸ್ಸಿನ ಮೆಟ್ಟಿಲುಗಳನ್ನು ಏರಬಹುದು ಎಂಬುದು ಒಂದು. ಅಂದುಕೊಂಡ ಗುರಿಯನ್ನು ತಲುಪಿದೆ, ಎಲ್ಲವೂ ನನ್ನದಾಯಿತು ಎಂದು ಅರೆಕ್ಷಣ ಅಂದುಕೊಂಡರೂ, ಜೀವನ ಬೇರೆಯದೇ ಪಾಠ ಹೇಳಬಲ್ಲದು, ಯಶಸ್ಸೆಂದರೆ ಇನ್ನೇನೋ ಇದೆ ಎಂದು ತಿಳಿಸಬಲ್ಲದು ಎಂಬುದು ಇನ್ನೊಂದು.

ಇವೆರಡನ್ನು ಹೇಳಲು ನಿರ್ದೇಶಕರು ಹಲವು ಸಂದರ್ಭ, ಪಾತ್ರಗಳನ್ನು ಬಳಸಿಕೊಂಡಿದ್ದಾರೆ. ಹದಿಹರೆಯದಲ್ಲಿ ಮೂಡುವ ಸಣ್ಣ ಆಕರ್ಷಣೆ, ಕೂಡುಕುಟುಂಬದ ಸದಸ್ಯರ ಸಣ್ಣತನಗಳು, ಕಷ್ಟದಲ್ಲಿದ್ದಾಗ ನೆರವಿಗೆ ಬರುವ ಸ್ನೇಹಿತರು, ಪ್ರೀತಿ, ವಿರಹ, ಬ್ಯುಸಿನೆಸ್... ಹೀಗೆ ಹಲವು ಸಂದರ್ಭಗಳನ್ನು ಬಳಸಿಕೊಂಡು ಕಥೆಯನ್ನು ಬೆಳೆಸುವ ಯತ್ನ ನಡೆದಿದೆ.

ಇಷ್ಟೆಲ್ಲ ಇದ್ದರೂ, ಈ ಎರಡು ಕಥೆಗಳನ್ನು ಮನಮುಟ್ಟುವಂತೆ ಹೇಳುವಲ್ಲಿ ಸಿನಿಮಾ ಎಷ್ಟರಮಟ್ಟಿಗೆ ಪರಿಣಾಮಕಾರಿ ಆಗಿದೆ? ಮಧ್ಯಂತರದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುವ ಸುದೀಪ್‌, ಒಬ್ಬ ಉದ್ಯಮಿಯ ಪಾತ್ರದಲ್ಲಿ ಗತ್ತಿನಿಂದ ಅಭಿನಯಿಸಿದ್ದಾರೆ. ಸೋತಿದ್ದೇನೆ ಎಂದುಕೊಂಡಿದ್ದ ರಾಜು ಪಾಲಿಗೆ ಭರವಸೆಯ ಮಾತುಗಳನ್ನು ಹೇಳುತ್ತಾರೆ. ಕಾಣಿಸಿಕೊಳ್ಳುವುದು ಕೆಲವೇ ದೃಶ್ಯಗಳಲ್ಲಿಯಾದರೂ ಸುದೀಪ್ ತಮ್ಮ ಅಭಿನಯದಿಂದಾಗಿ ಮನಸ್ಸಿನಲ್ಲಿ ಉಳಿಯುತ್ತಾರೆ.

ರಷ್ಯನ್‌ ಮಾಡೆಲ್‌ ಏಂಜಲಿನಾ ಪಾತ್ರವು ಸಿನಿಮಾಕ್ಕೆ ಹೆಚ್ಚಿನ ಸಹಾಯವನ್ನೇನೂ ಮಾಡಿಲ್ಲ, ಹೊಸ ಆಯಾಮವನ್ನೂ ನೀಡಿಲ್ಲ. ನಿಧಾನಗತಿಯ ನಿರೂಪಣೆ ಇರುವ ಸಿನಿಮಾದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ, ಹಳಸಲಾದ ಜೋಕ್‌ಗಳನ್ನೇ ಬಳಸಿದ್ದಾರೆ. ಸಂಗೀತ ಅಲ್ಲಲ್ಲಿ ಚೂರು ಸಹ್ಯವೆನಿಸುತ್ತದೆ.

ಆದರೆ, ಉಳಿದೆಲ್ಲ ಕಥೆ, ಸಂದೇಶಗಳನ್ನು ನೀಡುವ ಭರದಲ್ಲಿ ‘ಕನ್ನಡ ಮೀಡಿಯಂ’ ಯುವಕನ ಸಂಕಟಗಳನ್ನು, ಕೀಳರಿಮೆಗಳನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಚಿತ್ರ ಅಷ್ಟೇನೂ ಯಶಸ್ಸು ಕಂಡಿಲ್ಲ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ‘ಕನ್ನಡ ಮೀಡಿಯಂ’ ವಿದ್ಯಾರ್ಥಿಯ ಕಥೆಯನ್ನು ಇನ್ನಷ್ಟು ಉತ್ತಮವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಡುವ ಅವಕಾಶವನ್ನು ಸಿನಿತಂಡ ಬಳಸಿಕೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry