ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಿಲೆಗೆ ಮದ್ದಲ್ಲದ ಔಷಧಗಳು!

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಮಾರ್ಕ್ ಟ್ವೈನ್‍ನ ಮಾತೊಂದು ಹೀಗಿದೆ: ‘ಕೈಯಲ್ಲಿ ಸುತ್ತಿಗೆ ಇದ್ದರೆ, ಜಗತ್ತಿನಲ್ಲಿ ಕಾಣುವುದೆಲ್ಲ ಮೊಳೆಯ ಹಾಗೆಯೇ ತೋರುತ್ತದೆ’. ಇಂಗ್ಲಿಷ್‍ನಲ್ಲಿ ‘mismatch between remedy and malady’ ಎನ್ನುವುದುಂಟು. ಹಾಗೇ ವ್ಯಕ್ತಿಯೊಬ್ಬ ಹೀಗೆ ಪ್ರಾರ್ಥನೆ ಮಾಡುತ್ತಾನೆ: ‘ದೇವರೆ, ನನ್ನನ್ನು ನನ್ನ ಮಿತ್ರರಿಂದ ರಕ್ಷಿಸು, ನನ್ನ ಶತ್ರುಗಳನ್ನು ನಾನೇ ನೋಡಿಕೊಳ್ಳುತ್ತೇನೆ’ ಎಂದು. ಈ ಪ್ರಸ್ತಾವನೆಗೆ ಕಾರಣ, ಇತ್ತೀಚೆಗೆ ಸರ್ಕಾರಗಳು ಆರೋಗ್ಯನೀತಿಯನ್ನು ರೂಪಿಸುತ್ತಿರುವ ರೀತಿ.

ಮಹಾರಾಷ್ಟ್ರದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಯಾವ ಚರ್ಚೆ–ವಿಮರ್ಶೆಯೂ ಆಗದೆ, ಖಾಸಗಿ ಕಂಪನಿಯೊಂದರ ಕುಲಾಂತರಿ ಸೊಳ್ಳೆಗಳನ್ನು ಹೊರಬಿಡಲಾಗಿದೆ. ಈ ಸೊಳ್ಳೆಗಳು ಇತರೆ ಸೊಳ್ಳೆಗಳೊಂದಿಗೆ ಕೂಡಿ, ಅವುಗಳ ಸಂತಾನೋತ್ಪತ್ತಿಗೆ ಮಾರಕವಾಗುತ್ತವೆ. ಆದರೆ, ಈ ಪ್ರಕ್ರಿಯೆ ಅತ್ಯಂತ ವಿವಾದಾತ್ಮಕ ಮತ್ತು ಇದರ ವೈಜ್ಞಾನಿಕತೆ ಕೂಡ ಪ್ರಶ್ನಾರ್ಹ. ಕೆಲವು ದೇಶಗಳಲ್ಲಿ ಈ ಪ್ರಯತ್ನ ಇದಾಗಲೇ ಸೋಲನ್ನು ಕಂಡಿದೆ. ಯಾವುದೇ ಚರ್ಚೆ ಮತ್ತು ಸಾರ್ವಜನಿಕ ಅಭಿಪ್ರಾಯವಿಲ್ಲದೆ ಇದನ್ನು ಒಪ್ಪಿಕೊಳ್ಳುಕೊಂಡರು, ಪರಿಸರಕ್ಕೆ ಈ ರೀತಿ ಕುಲಾಂತರಿ ಸೊಳ್ಳೆಗಳನ್ನು ಬಿಡುಗಡೆ ಮಾಡಿರುವುದರಿಂದ ಮುಂದೆ ಉಂಟಾಗಬಹುದಾದ ಗಂಡಾತರಕ್ಕೆ ಯಾರು ಹೊಣೆ? – ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

ಹಾಗೆಯೇ ಹೊಸ ವೈದ್ಯಕೀಯ ನೀತಿಯೊಂದನ್ನು ದೇಶದಾದ್ಯಂತ ಹೊರತರಲು ಸರ್ಕಾರ ನಿರ್ಧರಿಸಿದೆ. ಹೊಸ ನೀತಿ ಮತ್ತು ಕಾನೂನುಗಳು ಬೇಕಿವೆ ನಿಜ; ಆದರೆ ಈ ಹೊಸತನದಲ್ಲಿ ಹೊಕ್ಕಿಕೊಂಡಿರುವ ವಿಷಯಗಳಲ್ಲಿ ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಸಿದ್ಧ ವೈದ್ಯಕೀಯ ಪದ್ಧತಿಗೆ ಅಲೋಪತಿಯನ್ನು ಪೋಣಿಸುವ ಕೆಲಸವಾಗಿದೆ. ಆ್ಯಂಟಿಬಯಾಟಿಕ್ ಔಷಧಗಳನ್ನು ಆಯುರ್ವೇದ ವೈದ್ಯರು ಕೊಡಬಹುದು ಎನ್ನುವಂತಾಗಿದೆ. ಇದರ ವಿರುದ್ಧ ಅಲೋಪತಿ ವೈದ್ಯರು ಧ್ವನಿ ಎತ್ತಿದ್ದಾರೆ. ಅವರು ತಮ್ಮ ಪದ್ಧತಿಯನ್ನು ಉಳಿಸಿಕೊಳ್ಳಲು ಹೋರಾಟಕ್ಕಿಳಿದಿದ್ದಾರೆ. ಇತ್ತ, ಆಯುರ್ವೇದ ಪದ್ಧತಿಯೊಳಗೆ ಇಂಗ್ಲಿಷ್ ಔಷಧವನ್ನು ಸೇರಿಸುವುದರಿಂದ ಆಯುರ್ವೇದಕ್ಕೆ ಧಕ್ಕೆಯಾಗುವುದಂತೂ ಖಂಡಿತ.

ಒಂದೊಂದು ವೈದ್ಯಕೀಯ ಪದ್ಧತಿಯೂ ಸಾವಿರಾರು ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ವಿಕಾಸವಾಗಿ ಹೊರಹೊಮ್ಮಿದೆ. ಯಾವುದೇ ಪದ್ಧತಿ ಶ್ರೇಷ್ಠ–ಕನಿಷ್ಠ ಎನ್ನುವುದಕ್ಕಿಂತ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಪೂನಾದ ಬಳಿ ನಾಟಿ ವೈದ್ಯರಿಗೆ ಕ್ಯಾನ್ಸರ್ ರಿಪೋರ್ಟ್‍ಗಳನ್ನೆಲ್ಲ ತೋರಿಸಿದಾಗ, ಅವರು ‘ಅದರ ಅವಶ್ಯಕತೆ ನಮಗಿಲ್ಲ. ನಾವು ನೋಡುವ ದೃಷ್ಟಿಕೋನವೇ ಬೇರೆ’ ಎನ್ನುತ್ತಾರೆ. ಅವರಿಗೆ ಕ್ಯಾನ್ಸರ್ ಎಂಬುದು ಯಾವುದೋ ದೋಷಪ್ರಕೃತಿಯಿಂದ ಕಂಡುಬರುತ್ತದೆ. ಅದಕ್ಕೆ ತಕ್ಕ ಚಿಕಿತ್ಸೆ ಅವರ ಬಳಿ ಇರಲೂಬಹುದು. ಒಂದರ ಹೇರಿಕೆ ಇನ್ನೊಂದರ ಮೇಲೆ ಸರಿತೋರುವುದಿಲ್ಲ. ಹಿಂದೆ, ಕುಲಾಂತರಿ ಬದನೆ ತರಲು ಖಾಸಗಿ ಕಂಪನಿಗಳು ಮುಂದಾದಾಗ, ಸ್ಥಳೀಯರು ಇಲ್ಲಿನ 2500 ಸ್ಥಳೀಯ ಬದನೆ ತಳಿಗೆ ಧಕ್ಕೆಯಾಗುತ್ತದೆ ಎಂದು ವಾದ ಮಂಡಿಸಿದಾಗ, ಕುಲಾಂತರಿ ಪರವಾಗಿದ್ದವರು ಈ ಎಲ್ಲ ಸ್ಥಳೀಯ ಬದನೆಗೂ ಕುಲಾಂತರಿ ಬದನೆಯ ಅಂಶವನ್ನು ಇಂಜೆಕ್ಟ್ ಮಾಡಿದರಾಯಿತು ಎಂದಿದ್ದರು!

ಕೇರಳದಲ್ಲಿ ‘ಅಷ್ಟವೈದ್ಯರ್’ ಎನ್ನುವ ಮೂಸ್ ಕುಟುಂಬದವರು ಇಂದಿಗೂ ಹೆಸರುವಾಸಿ. ಅವರ ಬಳಿ ದಢೂತಿ ದೇಹ ಉಳ್ಳವನೊಬ್ಬ ಹೋಗಿ, ‘ಸ್ವಾಮಿ, ನಾನು ತೂಕ ಇಳಿಸಿಕೊಳ್ಳಬೇಕು’ ಎನ್ನುತ್ತಾನೆ. ಆಗ ಅಷ್ಟವೈದ್ಯರಲ್ಲೊಬ್ಬರು, ‘ಯಾವ ಪ್ರಯೋಜನವೂ ಇಲ್ಲ. ನಿನಗೆ ಉಳಿದಿರುವುದೇ ಒಂದು ತಿಂಗಳು ಕಾಲ’ ಎನ್ನುತ್ತಾರೆ. ಒಂದು ತಿಂಗಳಿನಲ್ಲಿ ಆತ ಚಿಂತಿಸಿ, ಚಿಂತಿಸಿ ಸಪೂರನಾಗಿ ವೈದ್ಯರ ಬಳಿ ಹೋಗಿ, ‘ನಾನು ಇನ್ನೂ ಬದುಕಿದ್ದೇನೆ’ ಎನ್ನುತ್ತಾನೆ. ಆಗ ಅಷ್ಟವೈದ್ಯರು, ‘ನಾನು ನಿನಗೆ ಮಾಡಿದ್ದು ಚಿಕಿತ್ಸೆ’ ಎನ್ನುತ್ತಾರೆ! ಹೀಗೆ, ದೃಷ್ಟಿಕೋನ, ಚಿಕಿತ್ಸಾ ಪದ್ಧತಿ ವಿಭಿನ್ನ ವಿಶಿಷ್ಟವೂ ಆಗಿರಬಹುದು.

ಎಲ್ಲದಕ್ಕೂ ಮೀರಿ, ಜನಸಮುದಾಯದಲ್ಲಿಯೇ,  ಸಂಸ್ಕೃತಿಯಲ್ಲಿಯೇ ಆರೋಗ್ಯಪದ್ಧತಿ ಆಹಾರ ಮತ್ತು ಜೀವನಶೈಲಿಯಲ್ಲಿ ಅಡಗಿಕೊಂಡಿರುತ್ತದೆ. ಅದನ್ನು ದಿಕ್ಕು ತಪ್ಪಿಸುವ ಗುರಿಯನ್ನು ಮಾರುಕಟ್ಟೆ ಮತ್ತು ಅಲ್ಲಿನ ವೈದ್ಯಕೀಯ ಪದ್ಧತಿ ಶ್ರಮಿಸುತ್ತಿರುವುದು ಗಮನಿಸಬಹುದು. ಚೀನಾ ಇಂದಿಗೂ ಶೇ 50ಕ್ಕೂ ಹೆಚ್ಚು ಚಿಕಿತ್ಸಾಪದ್ಧತಿಯನ್ನು ಸ್ಥಳೀಯ ಪದ್ಧತಿಯ ಮೇಲೇ ಅವಲಂಭಿಸಿದೆ. ಆಧುನಿಕ ಪೋಷಕಾಂಶ ತಜ್ಞರು ಇರಲಿ, ಆದರೆ ಅಜ್ಜಿಯಂದಿರ ಅಪಾರ ಆಹಾರಪದ್ಧತಿಯಲ್ಲಿನ ಅಂತರ್ಗತ ಜ್ಞಾನ ಸಂಪತ್ತನ್ನು ಅಳಿಸದಂತೆ ಉಳಿಸಿಕೊಳ್ಳುವುದು ಮುಖ್ಯ. ಯಾರ ಮನೆಯಲ್ಲಿ ಅಡುಗೆ ಪುಸ್ತಕ ಇದೆಯೋ ಅವರಿಗೆ ಅಡುಗೆ ಬರುವುದಿಲ್ಲ ಎಂದು ಸಹ ಹೇಳಬಹುದು.

*


-ರಘು ಕೆ. ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT